ಮಕ್ಕಳಿಗೆ ಪಾಲಕರು ಉತ್ತಮ ಸಂಸ್ಕಾರ ನೀಡಿ

ಧಾರವಾಡ, ನ15: ಇಂದಿನ ಮಕ್ಕಳಿಗೆ ಹೊರಗಿನ ಪ್ರಭಾವಗಳು ಹೆಚ್ಚಾಗುತ್ತಿದ್ದು, ಮೊಬೈಲಿನಂತಹ ಯಂತ್ರಸಾಧನದ ಅಡಿಯಾಳುಗಳಾಗುತ್ತಿದ್ದಾರೆ. ಮಾನವರೊಂದಿಗಿನ ಸಂಬಂಧ ಮತ್ತು ಸಂವೇದನೆಗಳು ದೂರವಾಗುತ್ತಿರುವುದು ಶೋಚನೀಯ. ಹಾಗಾಗಿ ಮಕ್ಕಳನ್ನು ಸಂಸ್ಕಾರವಂತರನ್ನಾಗಿ ಮಾಡುವ ಜವಾಬ್ದಾರಿ ಪಾಲಕರದ್ದು ಎಂದು ಹಿರಿಯ ಸಾಹಿತಿಗಳಾದ ವೀರಣ್ಣ ರಾಜೂರ ಹೇಳಿದರು.
ಅವರು ರಾಘವೇಂದ್ರ ಕುಂದಗೋಳ ಅವರ ಸುದಿಶಾ ಇವೇಂಟ್ಸ್ ಧಾರವಾಡ ಮತ್ತು ಕಲಾ ಸ್ಪಂದನ, ಹಾವೇರಿ ಅವರ ಸಹಯೋಗದಲ್ಲಿ ಮಕ್ಕಳ ದಿನಾಚರಣೆ ಅಂಗವಾಗಿ ರಂಗಾಯಣದ ಸಮುಚ್ಚಯದಲ್ಲಿ ಬಸವಣ್ಣನವರ ವಚನಗಳ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಣೆ ಮಾಡಿ ಮಾತನಾಡಿದರು.
ಎಲ್ಲರಿಗೂ ಅರ್ಥವಾಗುವಂತೆ ವಚನಕಾರರು ಕನ್ನಡದಲ್ಲಿ ವಚನಗಳನ್ನು ರಚಿಸಿದರು. ಸಮಾಜವನ್ನು ತಿದ್ದುವ ನಿಟ್ಟಿನಲ್ಲಿ ಆತ್ಮವಿಮರ್ಶೆಯ ನೆಲೆಯಲ್ಲಿರುವ ವಚನಗಳು ಅನುಭಾವದ ನೆಲೆಯಲ್ಲಿ ಅನುಸಂಧಾನವನ್ನು ಮಾಡುತ್ತವೆ. ಕಾಯಕವೇ ಕೈಲಾಸವೆಂದು ಸಾರಿದ ವಚನಕಾರರು ಜಾತಿ, ಮೇಲು-ಕೀಳುಗಳನ್ನು ನಿರಾಕರಿಸಿದರಲ್ಲದೆ, ಹೆಣ್ಣುಗಂಡೆಂಬ ಭೇದವನ್ನು ನಿರಾಕರಿಸಿ ಸಮ ಸಮಾಜವನ್ನು ನಿರ್ಮಿಸಲು ಶ್ರಮಿಸಿದರು ಎಂದು ಹೇಳಿದರು.
ಸಾಹಿತಿ, ಸಂಘಟಕರಾದ ಮಾತಾರ್ಂಡಪ್ಪ ಎಮ್. ಕತ್ತಿ ಮಾತನಾಡಿ, ಮಾನವೀಯ ಮೌಲ್ಯಗಳು ಇಂದು ಶಿಕ್ಷಣದಲ್ಲಿ ಮತ್ತು ಸಮಾಜದಲ್ಲಿ ಕಡಿಮೆಯಾಗುತ್ತಿದ್ದು, ಕುಟುಂಬಗಳು ವಿಘಟನೆಯಾಗುತ್ತಿವೆ. ಏಕಪೆÇೀಷಕ ಮಕ್ಕಳ ಕುಟುಂಬಗಳು ಹೆಚ್ಚಾಗುತ್ತಿರುವ ಸಂದರ್ಭದಲ್ಲಿ ಮಕ್ಕಳ ವಚನ ಸ್ಪರ್ಧೆ ಏರ್ಪಡಿಸುವ ಕಾರ್ಯಕ್ರಮಗಳು ಹೆಚ್ಚಾಗಬೇಕು ಎಂದರು.
ಆಯೋಜಕರಾದ ಕುಂದಗೋಳ ಹಾಗೂ ಪಾಲಿಕೆ ಸದಸ್ಯರಾದ ಜ್ಯೋತಿ ಪಾಟೀಲ
ವೇದಿಕೆಯಲ್ಲಿ ಉಪಸ್ಥಿತರಿದ್ದರು. ಈ ಸ್ಪರ್ಧೆಯಲ್ಲಿ, ಹೀನಾ ಜಮಖಂಡಿ, ಪದ್ಮಾವತಿ ಪತ್ತಾರ, ಕು. ವೈಷ್ಣವಿ ನವಲೂರ ನಿರ್ಣಾಯಕರಾಗಿ ಕಾರ್ಯನಿರ್ವಹಿಸಿದರು. ವಚನ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಕು. ಅಶ್ವಿಕಾ ಛೌಗಲಾ, ದ್ವಿತೀಯ ಸ್ಥಾನವನ್ನು ಕು. ಜಾನ್ವಿ ದಿಡ್ಡಿಮಠ ಮತ್ತು ಕು. ಸಂಜನಾ ಜಗಾಪೂರ ತೃತೀಯ ಸ್ಥಾನವನ್ನು ಪಡೆದರು. ಕು.ವೈಷ್ಣವಿ ನಿಗದಿ ಮತ್ತು ಕು. ಪುಷ್ಕರ ಹೊನವಾಡ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಣೆ ಮಾಡಿದರು.
ಪದ್ಮಾವತಿ ಪತ್ತಾರ ನಿರೂಪಿಸಿ ಸ್ವಾಗತಿಸಿದರು, ಹೀನಾ ಜಮಖಂಡಿ ವಂದಿಸಿದರು.