ಮಕ್ಕಳಿಗೆ ಪಾಠ ಅರ್ಥೈಸುವರೇ ನಿಜವಾದ ಶಿಕ್ಷಕರು

ಚಿಕ್ಕನಾಯಕನಹಳ್ಳಿ, ಆ. ೪- ಪಾಠ ಮಾಡುವವರೆಲ್ಲ ಶಿಕ್ಷಕರಲ್ಲ, ಮಕ್ಕಳಿಗೆ ಅರ್ಥವಾಗುವ ರೀತಿ ಪಾಠ ಮಾಡಿ ಸ್ಪೂರ್ತಿ ತುಂಬುವವರು ನಿಜವಾದ ಶಿಕ್ಷಕರು ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದರು.
ಪಟ್ಟಣದ ಬನಶಂಕರಿ ಪ್ರಾರ್ಥನಾ ಮಂದಿರದಲ್ಲಿ ಪಾರ್ಥ ಕುಟುಂಬದಿಂದ ದೇವಾಂಗ ಸಮುದಾಯದ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಗ್ರಾಮೀಣ ಭಾಗದ ಮಕ್ಕಳು ಶಿಕ್ಷಣದಲ್ಲಿ ಮುಂದಿದ್ದರೂ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಹಿಂದೆ ಉಳಿದಿದ್ದಾರೆ. ಅದಕ್ಕಾಗಿ ವಿದ್ಯಾರ್ಥಿಗಳು ಶಾಲಾ ಹಂತದಲ್ಲಿಯೇ ಆಸಕ್ತಿಯಿಂದ ಕಲಿಕೆಯ ಜೊತೆಗೆ ಬದುಕಿಗೆ ಆಸರೆಯಾಗುವ ಸ್ಪರ್ಧಾತ್ಮಕ ಜ್ಞಾನವನ್ನು ಪಡೆದು ಉನ್ನತ ಶಿಕ್ಷಣಕ್ಕೆ ತಯಾರಾಗಬೇಕಿದೆ. ಪ್ರತಿಯೊಬ್ಬ ವ್ಯಕ್ತಿಯು ತನ್ನ ಆದಾಯದ ಸ್ವಲ್ಪ ಭಾಗವನ್ನು ಸಮಾಜದಲ್ಲಿ ನಡೆಯುವ ಉದಾತ್ತ ಕೆಲಸಗಳಿಗೆ ವಿನಿಯೋಗಿಸಬೇಕು ಎಂದು ಸಲಹೆ ನೀಡಿದರು.
ಪ್ರತಿಭೆಯನ್ನು ಗುರುತಿಸುವ ಕೆಲಸ ಮೊದಲು ಮನೆಯಿಂದ ಆಗಬೇಕು. ನಂತರ ನೆರೆಹೊರೆಯವರು ಮತ್ತು ಮುಖ್ಯವಾಗಿ ಶಾಲೆಯಲ್ಲಿ ಶಿಕ್ಷಕರಿಂದ ಆಗಬೇಕಿದೆ. ಯಾವ ಮಕ್ಕಳು ದಡ್ಡರಲ್ಲ, ಅವರಲ್ಲಿನ ಪ್ರತಿಭೆಯನ್ನು ಗುರುತಿಸಿ ಉತ್ತಮ ವಾತಾವರಣ ಕಲ್ಪಿಸಿಕೊಟ್ಟರೆ ಪ್ರತಿಭೆ ವಿಕಸನಗೊಳ್ಳುತ್ತದೆ. ಇತರರೊಂದಿಗೆ ತಮ್ಮ ಮಕ್ಕಳನ್ನು ಹೋಲಿಕೆ ಮಾಡಿಕೊಳ್ಳದೆ ಅವರಲ್ಲಿರುವ ಪ್ರತಿಭೆಯನ್ನು ಗುರುತಿಸಿ ಗೌರವಿಸಿ ಎಂದು ಅವರು ಹೇಳಿದರು.
ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಮಾತನಾಡಿ, ೨೪ ಸಾವಿರ ಕೋಟಿ ಹಣವನ್ನು ಸರ್ಕಾರ ಶಿಕ್ಷಣ ಇಲಾಖೆಗೆ ನೀಡಿದೆ. ಕಳೆದ ಎರಡು ವರ್ಷಗಳು ಶೈಕ್ಷಣಿಕ ಚಟುವಟಿಕೆಯ ಮೇಲೆ ಕೊರೊನಾದಿಂದ ಕರಿ ನೆರಳು ಆವರಿಸಿತ್ತು. ಜತೆಗೆ ಅನೇಕ ಉದ್ಯಮಗಳು ನೆಲ ಕಚ್ಚಿವೆ. ಸರ್ಕಾರ ಶಾಲೆಯ ಮಕ್ಕಳಿಗೆ ಉಚಿತವಾಗಿ ಪುಸ್ತಕಗಳನ್ನು ಸರಬರಾಜು ಮಾಡಿದರೂ ಕಲಿಕೆಯ ಇತರೆ ವಸ್ತುಗಳನ್ನು ಹೊಂದಿಸಲು ಅನೇಕ ಕುಟುಂಬಗಳು ಇಂದಿಗೂ ಶ್ರಮಪಡುತ್ತಿವೆ. ದೇಶಕ್ಕೆ ಬೇಕಾದ ಸಂಸ್ಕಾರಯುತ ಮಕ್ಕಳನ್ನು ನೀಡುವುದು ಶಿಕ್ಷಕರ ಜವಾಬ್ದಾರಿ ಎಂದು ಹೇಳಿದರು.
ಪಟ್ಟಣದ ಶ್ರೀ ಆದಿತ್ಯಾದಿ ನವಗ್ರಹ ಕೃಪಾ ಪೋಷಿತ ಯಕ್ಷಗಾನ ಬಯಲು ನಾಟಕ ಕಲಾ ಸಂಘವು ನೂರು ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ ಅದ್ದೂರಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಅದಕ್ಕಾಗಿ ಸಚಿವರು ಸಹಕಾರ ನೀಡಬೇಕು ಎಂದು ಕಲಾ ಸಂಘದ ಅಧ್ಯಕ್ಷ ಪಾರ್ಥ ಕುಮಾರಸ್ವಾಮಿ ಮನವಿ ಮಾಡಿದರು.
ಸಮಾರಂಭದಲ್ಲಿ ಪ್ರಯೋಜಕಿ ಚಂದ್ರಕಲಾ, ಪುರಸಭಾ ಉಪಾಧ್ಯಕ್ಷೆ ಲಕ್ಷ್ಮೀ, ದೇವಾಂಗ ಸಂಘದ ಅಧ್ಯಕ್ಷ ಧನರಾಜ್, ಧರ್ಮಸ್ಥಳ ಗ್ರಾಮೀಣಾಭಿವೃದ್ದಿ ಯೋಜನಾಧಿಕಾರಿ ಪ್ರೇಮಾನಂದ್, ಪುರಸಭಾ ಸದಸ್ಯ ಶ್ಯಾಮ್, ಮುಖಂಡರಾದ ದಾಸಪ್ಪ, ಮಂಜುನಾಥ್, ಪಾಂಡುರಂಗ, ಪ್ರಕಾಶ್, ಕೋಡಿ ಲೋಕೇಶ್, ಜವಳಿ ರಂಗನಾಥ್, ವರದರಾಜು, ಈಶ್ವರ್ ಮತ್ತಿತರರು ಪಾಲ್ಗೊಂಡಿದ್ದರು.