ಮಕ್ಕಳಿಗೆ ನೈತಿಕ ಮೌಲ್ಯಗಳ ಶಿಕ್ಷಣ ನೀಡಬೇಕಿದೆ : ಉಮಾಕಾಂತ ಮೀಸೆ

ಔರಾದ : ನ.11:ಪ್ರಸ್ತುತ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ನೈತಿಕ ಶಿಕ್ಷಣದ ಅವಶ್ಯಕತೆ ಹಿಂದೆಂದಿಗಿಂತಲೂ ಹೆಚ್ಚಾಗಿದೆ ಎಂದು ಹಿರಿಯ ಸಾಹಿತಿ, ನಿವೃತ್ತ ಉಪನ್ಯಾಸಕ ಉಮಾಕಾಂತ ಮೀಸೆ ಅಭಿಪ್ರಾಯಪಟ್ಟರು.

ತಾಲೂಕಿನ ಎಕಲಾರ ಗ್ರಾಮದ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ಆಯೋಜಿಸಿದ ಮಕ್ಕಳ ಸಂಭ್ರಮ ಸಮಾರಂಭದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ವಿದ್ಯಾರ್ಥಿ ಪಾಲಕರು, ಶಾಲಾ ಕಾಲೇಜು ಶಿಕ್ಷಕರು, ಉಪನ್ಯಾಸಕರು ಮಕ್ಕಳ ಚಾರಿತ್ರ್ಯ ನಿರ್ಮಾಣ ಮಾಡುವಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕಿದೆ ಎಂದರು.

ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಂಗೀತಾ ಎಚ್. ಮಾತನಾಡಿ, ಪ್ರಸ್ತುತ ಮಕ್ಕಳು ಹಲವು ರೀತಿಯಲ್ಲಿ ಸಮಸ್ಯೆಗಳು ಎದುರಿಸುತ್ತಿದ್ದು, ಆ ಮಕ್ಕಳನ್ನು ಗುರುತಿಸಿ, ಸಾಮಾಜಿಕ, ಕೌಟುಂಬಿಕ, ಶೈಕ್ಷಣಿಕ ಸಮಸ್ಯೆಗಳಿಗೆ ಪರಿಹಾರ ಒದಗಿಸಲಾಗುವುದು ಎಂದರು.

ಎಕಲಾರ ಗ್ರಾಪಂ ಪಿಡಿಒ ವಿಜಯಲಕ್ಷಿ ಪಾಟೀಲ್ ಮಾತನಾಡಿ, ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಸಮುದಾಯದ ಪಾತ್ರವು ಬಹು ಮುಖ್ಯವಾದದ್ದು, ಪಾಲಕರು ಶಿಕ್ಷಕರು ನಿರಂತರವಾಗಿ ಪ್ರಯತ್ನಿಸಬೇಕು ಎಂದರು. ಈ ಸಂದರ್ಭದಲ್ಲಿ ಜಗನ್ನಾಥ ಮೂಲಗೆ ಅವರು ತನ್ನ ಮಗ ಪ್ರಜ್ವಲ್‍ನ ಹುಟ್ಟು ಹಬ್ಬದ ನಿಮಿತ್ತ ರು. 5 ಸಾವಿರ ಶಾಲೆಗೆ ದೇಣಿಗೆ ನೀಡಿದರು.

ಈ ಸಂದರ್ಭದಲ್ಲಿ ಮುಖ್ಯ ಶಿಕ್ಷಕ ಪ್ರಭು ಬಾಳೂರೆ, ಎನ್.ವಿ ಬಿರಾದಾರ್, ಗಣಪತರಾವ ಜಿರ್ಗೆ, ಗಜಾನನ ಮಳ್ಳಾ, ಮಹಾದೇವ ಘುಳೆ, ವೆಂಕಟ ಔತಾಡೆ, ಮಲ್ಲಿಕಾರ್ಜುನ ಹಿಪ್ಪಳಗಾವೆ, ಶಿವಾನಂದ ಬಿರಾದಾರ, ಶಿವಕುಮಾರ ಪಾರಾ, ಶಿವಕುಮಾರ ಶೆಟ್ಟೆಪ್ಪ ಶಿಕ್ಷಕ ಸಿಬ್ಬಂದಿ ಬಾಲಾಜಿ ಅಮರವಾಡಿ, ನಿರ್ಮಲಾ ಸ್ವಾಮಿ, ಜೈಸಿಂಗ್ ಠಾಕೂರ್, ಅಂಕುಶ ಪಾಟೀಲ್, ವಿರಶೆಟ್ಟಿ ಗಾದಗೆ, ಕಿರಣ, ಸಿದ್ದೇಶ್ವರಿ ಸೇರಿದಂತೆ ಇನ್ನಿತರರಿದ್ದರು.