ಮಕ್ಕಳಿಗೆ ನೈತಿಕತೆ ಪಾಠ ಮಾಡಿದ ಡಿಡಿಪಿಐ ಸಲೀಂ ಪಾಶಾ

ಔರಾದ್ :ಜು.16: ತಾಲೂಕಿನ ಎಕಲಾರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಶನಿವಾರ ಶಾಲಾ ಶಿಕ್ಷಣ ಇಲಾಖೆಯ ಜಿಲ್ಲಾ ಉಪನಿರ್ದೇಶಕ ಸಲೀಂ ಪಾಶಾ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಏಳನೇ ತರಗತಿ ಮಕ್ಕಳೊಂದಿಗೆ ಕೆಲಹೊತ್ತು ಸಮಯ ಕಳೆದ ಅವರು, ವಿದ್ಯಾರ್ಥಿಗಳು ಜೀವನದಲ್ಲಿ ಚಾರಿತ್ರ್ಯ ಬೆಳೆಸಿಕೊಂಡರೇ ಎಲ್ಲವೂ ದೊರೆಯುತ್ತದೆ. ಶಿಕ್ಷಣದ ಮೂಲ ಉದ್ದೇಶ ನೌಕರಿ ಒಂದೇ ಅಲ್ಲ, ಪ್ರತಿ ಹೆಜ್ಜೆಗೂ ಎದುರಾಗುವ ಸಮಸ್ಯೆಗಳ ಪರಿಹಾರವಾಗಿದೆ. ಪ್ರಸ್ತುತ ಯುಗದಲ್ಲಿ ಮನುಷತ್ವ ಕ್ಷೀಣಿಸುತ್ತಿದ್ದು, ಗುರುಗಳು ಬೋಧಿಸುವ ಶಿಕ್ಷಣದಿಂದ ಇದೆಲ್ಲವೂ ಮರಳಿ ಪಡೆಯಬಹುದಾಗಿದೆ ಎಂದು ತಿಳಿಸಿದರು.

ದಯವೇ ಧರ್ಮದ ಮೂಲವಯ್ಯ ಎಂಬ ಬಸವಣ್ಣನವರ ವಚನದ ಮೂಲಕ ನೈತಿಕತೆಯ ಪಾಠ ಮಾಡಿದ ಅವರು, ಬದುಕಲ್ಲಿ ತಂದೆ-ತಾಯಿ ಗುರು ಹಿರಿಯರ ಮಾತಿಗೆ ಗೌರವಿಸಿ ಬಾಳ್ವೆ ನಡೆಸಬೇಕು. ಎಂತಹ ಪರಿಸ್ಥಿತಿಯಲ್ಲಿಯೂ ಮಾನವೀಯತೆ ಮರೆಯಕೂಡದು ಎಂದು ಕಿವಿ ಮಾತು ಹೇಳಿದರು.
ಶಾಲೆಯ ಅಡುಗೆ ಕೋಣೆ, ಡಿಜಿಟಲ್ ಕ್ಲಾಸ್‍ರೂಂ, ಆಹಾರ ದಾಸ್ತಾನು ಕೋಣೆ, ಗ್ರಂಥಾಲಯ ಸೇರಿದಂತೆ ತರಗತಿ ಕೋಣೆಗಳಿಗೆ ತೆರಳಿ ಪರಿಶೀಲಿಸಿದರು. ಮಕ್ಕಳಿಗೆ ಸರಳವಾಗಿ ಆಂಗ್ಲ ಭಾಷೆ ಕಲಿಯಲು ಐ-ಆಕ್ಟಿವ್ ಕ್ಲಾಸ್‍ಗಳು ಸಹಕಾರಿಯಾಗಿದ್ದು, ಬಳಸಿಕೊಳ್ಳುವಂತೆ ಶಿಕ್ಷಕರಿಗೆ ಸೂಚಿಸಿದರು.

ಶಾಲೆಯ ಅಡುಗೆ ಕೋಣೆ ಹಾಗೂ ಹಳೆಯ 3 ಕಟ್ಟಡಗಳು ಶಿಥಿಲಗೊಂಡಿರುವುದು ಕಂಡು ಇವುಗಳ ಕುರಿತು ಅಗತ್ಯ ಕ್ರಮವಹಿಸುವುದಾಗಿ ತಿಳಿಸಿದರು. ಗ್ರಾಮೀಣ ಪ್ರದೇಶದ ಮಕ್ಕಳ ಕಲಿಕೆಗೆ ಪೂರಕವಾಗುವಂತೆ ಶಾಲೆಯ ಕಲಿಕಾ ವಾತಾವರಣವಿದ್ದು, ಇದನ್ನು ಮುಂದುವರೆಸಿಕೊಂಡು ಹೋಗುವಂತೆ ಸೂಚನೆ ನೀಡಿದರು.

ಈ ಸಂದರ್ಭದಲ್ಲಿ ಡಯಟ ಉಪನ್ಯಾಸಕ ಲಕ್ಷಣ ತುರೆ, ಖುರ್ಷಿದ್ ಖಾದ್ರಿ, ಸಿಆರ್‍ಪಿ ಮಹಾದೇವ ಘುಳೆ, ಮುಖ್ಯ ಶಿಕ್ಷಕ ಪ್ರಭು ಬಾಳೂರೆ, ಎಸ್‍ಡಿಎಂಸಿ ಸದಸ್ಯ ಸಂತೋಷ ಕೋಳಿ, ಬಾಲಾಜಿ ಅಮರವಾಡಿ, ಜೈಸಿಂಗ್ ಠಾಕೂರ್, ವೀರಶೆಟ್ಟಿ ಗಾದಗೆ, ಅಂಕುಶ ಪಾಟೀಲ್, ಸಿದ್ದೇಶ್ವರಿ ಸ್ವಾಮಿ ಸೇರಿದಂತೆ ಇನ್ನಿತರರಿದ್ದರು.