ಮಕ್ಕಳಿಗೆ ಡೇವಿಡ್ ಪ್ರತಿಮೆ ತೋರಿಸಿದ ಶಾಲಾ ಪ್ರಿನ್ಸಿಪಾಲ್ ಅಮಾನತು

ಫ್ಲೋರಿಡಾ (ಅಮೆರಿಕಾ), ಮಾ.೨೫- ಕಲಾ ವಿಷಯದ ತರಗತಿಯಲ್ಲಿ ಪಾಶ್ಚಾತ್ಯ ಇತಿಹಾಸದಲ್ಲಿ ಅತ್ಯಂತ ಪ್ರಸಿದ್ಧ ಸಾಂಪ್ರದಾಯಿಕ ಮೈಕೆಲ್ಯಾಂಜೆಲೊನ ಡೇವಿಡ್‌ನ ಪ್ರತಿಮೆಯನ್ನು ಮಕ್ಕಳಿಗೆ ತೋರಿಸಿದ ಹಿನ್ನೆಲೆಯಲ್ಲಿ ಮಹಿಳಾ ಪ್ರಿನ್ಸಿಪಾಲ್‌ರನ್ನು ಒತ್ತಾಯಪೂರ್ವಕವಾಗಿ ವಜಾಗೊಳಿಸಿದ ಘಟನೆ ಫ್ಲೋರಿಡಾದ ಶಾಲೆಯಲ್ಲಿ ನಡೆದಿದೆ.
ಅಮಾನತುಗೊಂಡ ಪ್ರಿನ್ಸಿಪಾಲ್‌ರನ್ನು ಹೋಪ್ ಕರಾಸ್ಕ್ವಿಲ್ಲಾ ಎಂದು ಗುರುತಿಸಲಾಗಿದೆ. ಮೈಕೆಲ್ಯಾಂಜೆಲೊನ ಡೇವಿಡ್‌ನ ಪ್ರತಿಮೆಯನ್ನು ಮಕ್ಕಳಿಗೆ ತೋರಿಸುವ ಮೂಲಕ ಅವರಲ್ಲಿ ಅಶ್ಲೀಲತೆಯನ್ನು ಮೈಗೂಡಿಸಿಕೊಳ್ಳಲಾಗುತ್ತಿದೆ ಎಂದು ಕೆಲ ವಿದ್ಯಾರ್ಥಿಗಳ ಪೋಷಕರು ದೂರು ನೀಡಿದ ಹಿನ್ನೆಲೆಯಲ್ಲಿ ಹೋಪ್ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗಿದೆ. ಶಾಲೆಯು ಆರನೇ ತರಗತಿಯಲ್ಲಿ ನವೋದಯ ಕಲೆಯ ಬಗ್ಗೆ ಕಲಿಸುವ ಬಗ್ಗೆ ಯೋಜನೆ ಹಾಕಲಾಗಿತ್ತು. ಆದ್ದರಿಂದ ಪಾಠವು ಮೈಕೆಲ್ಯಾಂಜೆಲೊನ ಶಿಲ್ಪಕಲೆ ’ಡೇವಿಡ್, ’ಕ್ರಿಯೇಶನ್ ಆಫ್ ಆಡಮ್ ಫ್ರೆಸ್ಕೊ ಪೇಂಟಿಂಗ್ ಮತ್ತು ಬೊಟಿಸೆಲ್ಲಿಯ ’ಬರ್ತ್ ಆಫ್ ವೀನಸ್ ಬಗ್ಗೆ ಕಲಿಯುವುದನ್ನು ಒಳಗೊಂಡಿತ್ತು. ಆದರೆ ಪ್ರಾಂಶುಪಾಲರು, ವ್ಯವಸ್ಥಾಪಕ ನಿರ್ದೇಶಕರು ಹಾಗೂ ಚಿತ್ರಕಲಾ ಶಿಕ್ಷಕರ ನಡುವಿನ ಸಂವಹನ ಕೊರತೆಯಿಂದ ಈ ರಾದ್ದಾಂತ ನಡೆದಿದೆ ಎನ್ನಲಾಗಿದೆ. ಮಕ್ಕಳಿಗೆ ಯಾವ ವಿಷಯದ ಬಗ್ಗೆ ಕಲಿಸಲಾಗುತ್ತಿದೆ ಎಂಬುದರ ಬಗ್ಗೆ ಪೋಷಕರಿಗೆ ಸೂಕ್ತ ರೀತಿಯಲ್ಲಿ ಮಾಹಿತಿ ನೀಡಲಾಗಿರಲಿಲ್ಲ ಎಂದು ಹೋಪ್ ವಿಷಾದ ವ್ಯಕ್ತಪಡಿಸಿದ್ದಾರೆ. ಕಲಾ ವಿಭಾಗದ ಪಾಠದ ಬಗ್ಗೆ ಮಕ್ಕಳು ಅಸಮಾಧಾನಗೊಂಡಿದ್ದಾರೆ ಎಂದು ಮೂವರು ಪೋಷಕರು ದೂರಿದ್ದರೆ ಮತ್ತೊಬ್ಬರು ಇದೊಂದು ಅಶ್ಲೀಲತೆಯಿಂದ ಕೂಡಿತ್ತು ಎಂದು ದೂರಿದ್ದಾರೆ ಎಂದು ಹೋಪ್ ಡೆಮಾಕ್ರಾಟ್‌ಗೆ ತಿಳಿಸಿದ್ದಾರೆ. ಅಲ್ಲದೆ ರಾಜೀನಾಮೆ ನೀಡುವಂತೆ ನನಗೆ ಗಡುವು ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ ಒತ್ತಾಯಪೂರ್ವಕವಾಗಿ ರಾಜೀನಾಮೆ ಪಡೆಯಲಾಗಿದೆ ಎಂದು ಹೋಮ್ ತಿಳಿಸಿದ್ದಾರೆ. ಒಟ್ಟಿನಲ್ಲಿ ಈ ಪ್ರಕರಣ ಶಾಲೆಯಲ್ಲಿ ವಿವಾದಕ್ಕೆ ಕಾರಣವಾಗಿದೆ.

ಏನಿದು ಡೇವಿಡ್ ಪ್ರತಿಮೆ
ಮೈಕೆಲ್ಯಾಂಜೆಲೊನ ’ಡೇವಿಡ್, ಬೆತ್ತಲೆ ಮನುಷ್ಯನ ಪ್ರತಿಮೆಯನ್ನು ೧೫೦೧ ಮತ್ತು ೧೫೦೪ ರ ನಡುವೆ ರಚಿಸಲಾಯಿತು. ಇದನ್ನು ಗ್ಯಾಲೇರಿಯಾ ಡೆಲ್ ಅಕಾಡೆಮಿಯಾ ಡಿ ಫೈರೆಂಜ್ ಮ್ಯೂಸಿಯಂನಿಂದ ಫ್ಲಾರೆಂಟೈನ್ಸ್‌ನ ಶಕ್ತಿ ಮತ್ತು ಸ್ವಾತಂತ್ರ್ಯದ ಸಂಕೇತವೆಂದು ವಿವರಿಸಲಾಗಿದೆ.