ಮಕ್ಕಳಿಗೆ ಡಿಪಿಟಿ-ಟಿಡಿ ಲಸಿಕೆ ಹಾಕಿಸಲು ಸಲಹೆ

ಹುಳಿಯಾರು, ನ. ೧೦- ಮಕ್ಕಳಲ್ಲಿ ಡಿಫ್ತೀರಿಯಾ (ಗಂಟಲುಮಾರಿ) ರೋಗವನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಡಿಪಿಟಿ ಮತ್ತು ಟಿಡಿ ಲಸಿಕೆಗಳನ್ನು ತಪ್ಪದೆ ಹಾಕಿಸಬೇಕು ಎಂದು ಹುಳಿಯಾರು ಪ್ರಾಥಮಿಕ ಆರೋಗ್ಯ ಕೇಂದ್ರದ ಎಲ್.ಹೆಚ್.ವಿ. ಅನಸೂಯಮ್ಮ ಹೇಳಿದರು.
ಹುಳಿಯಾರು ವಾಸವಿ ಶಾಲೆಯ ಆವರಣದಲ್ಲಿ ವಸಂತನಗರ ಬಡಾವಣೆಯ ಒಂದರಿಂದ ಹತ್ತನೇ ತರಗತಿಯವರೆಗಿನ ಮಕ್ಕಳಿಗೆ ಡಿಪಿಟಿ ಹಾಗೂ ಟಿಡಿ ಲಸಿಕೆ ಹಾಕುವ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಒಂದನೇ ತರಗತಿ ಮಕ್ಕಳಿಗೆ ಡಿಪಿಟಿ ಹಾಗೂ ಐದರಿಂದ ಹತ್ತನೇ ತರಗತಿಯವರೆಗಿನ ಮಕ್ಕಳಿಗೆ ಟಿಡಿ ಲಸಿಕೆ ಹಾಕಲಾಗುತ್ತಿದೆ. ಪೋಷಕರು ತಪ್ಪದೇ ಮಕ್ಕಳಿಗೆ ಲಸಿಕೆ ಹಾಕಿಸುವ ಮೂಲಕ ಮಕ್ಕಳಿಗೆ ಮಾರಕವಾಗುವ ಡಿಫ್ತೀರಿಯಾ ರೋಗವನ್ನು ನಿಯಂತ್ರಿಸಬೇಕು ಎಂದರು.
ಈ ಮುಂಚೆ ಶಾಲೆಗಳಿಗೆ ತೆರಳಿ ಲಸಿಕೆ ಹಾಕಲಾಗುತ್ತಿತ್ತು. ಇದೀಗ ಕೋವಿಡ್ ಸಮಸ್ಯೆಯಿಂದಾಗಿ ಮಕ್ಕಳು ಶಾಲೆಯಿಂದ ಹೊರಗುಳಿದಿದ್ದಾರೆ. ಹೀಗಾಗಿ ಶಾಲೆಗೆ ಮಕ್ಕಳು ಬಾರದಿರುವ ಹಿನ್ನೆಲೆಯಲ್ಲಿ ಆರೋಗ್ಯ ಸಿಬ್ಬಂದಿಗಳೇ ಪ್ರತಿ ಬಡಾವಣೆಗೂ ತೆರಳಿ, ಆಯಾ ಬೀದಿಗಳಲ್ಲಿ ಮಕ್ಕಳನ್ನು ಗುರುತಿಸಿ ಪೋಷಕರುಗಳಿಗೆ ಲಸಿಕೆಯ ಪ್ರಯೋಜನದ ಬಗ್ಗೆ ತಿಳಿ ಹೇಳಿ ಮಕ್ಕಳನ್ನು ಕರೆಸಿಕೊಂಡು ಲಸಿಕೆ ಹಾಕಲಾಗುತ್ತಿದೆ. ಒಂದು ಮಗು ಕೂಡ ಲಸಿಕೆಯಿಂದ ವಂಚಿತವಾಗದಂತೆ ಕ್ರಮ ವಹಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ಕಿರಿಯ ಮಹಿಳಾ ಆರೋಗ್ಯ ಸಹಾಯಕಿ ಹೆಚ್.ಜೆ.ಮಧು, ಆಶಾ ಕಾರ್ಯಕರ್ತೆಯರಾದ ಭಾಗ್ಯಮ್ಮ, ಬನಶಂಕರಮ್ಮ ಮತ್ತಿತರರು ಉಪಸ್ಥಿತರಿದ್ದರು.