ಮಕ್ಕಳಿಗೆ ಝಿಂಕ್ ಮಾತ್ರೆ, ಓಆರ್‍ಎಸ್ ದ್ರಾವಣ ನೀಡಿ

ಕಲಬುರಗಿ.ಆ.03: ಪ್ರಸ್ತುವಾಗಿ ಜಿಲ್ಲೆಯಾದ್ಯಂತ ವ್ಯಾಪಕವಾಗಿ ಮಳೆಯಾಗುತ್ತಿರುವುದರಿಂದ ತಂಪಾದ ವಾತಾವರಣದಿಂದಾಗಿ ಆರೋಗ್ಯದಲ್ಲಿ ಕೆಲವು ಬದಲಾವಣೆಯಾಗುತ್ತಿವೆ. ಅದರಲ್ಲಿ ವಿಶೇಷವಾಗಿ ಮಕ್ಕಳಲ್ಲಿ ಅತಿಸಾರ, ಭೇದಿ, ಅಶಕ್ತತೆ, ವಾಂತಿಯಂತಹ ಕೆಲವು ಸಾಮಾನ್ಯವಾದ ಆರೋಗ್ಯ ತೊಂದರೆಗಳು ಕಂಡುಬರುತ್ತಿವೆ. ಅಂತಹ ಮಕ್ಕಳಿಗೆ ಝಿಂಕ್ ಮಾತ್ರೆ ಮತ್ತು ಓಆರ್‍ಎಸ್‍ನ್ನು ನೀಡುವ ಮೂಲಕ ಮಕ್ಕಳ ಆರೋಗ್ಯವನ್ನು ಕಾಪಾಡಬೇಕು ಎಂದು ವೈದ್ಯಾಧಿಕಾರಿ ಡಾ.ಅನುಪಮಾ ಎಸ್.ಕೇಶ್ವಾರ ತಿಳಿಸಿದ್ದಾರೆ.
ನಗರದ ಶೇಖರೋಜಾದಲ್ಲಿರುವ ‘ಶಹಾಬಜಾರ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ’ದಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ಸಹಯೋಗದೊಂದಿಗೆ ‘ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ’ ವತಿಯಿಂದ ಜಿಲ್ಲೆಯಾದ್ಯಂತ ಜರುಗುತ್ತಿರುವ ‘ಝಿಂಕ್ ಮಾತ್ರೆ ಮತ್ತು ಓಆರ್‍ಎಸ್ ವಿತರಣೆ’ಯ ಕಾರ್ಯಕ್ರಮಕ್ಕೆ ಬುಧವಾರ ಮಗುವಿಗೆ ಮಾತ್ರೆ ಮತ್ತು ದ್ರಾವಣ ವಿತರಿಸುವ ಮೂಲಕ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು.
ಝಿಂಕ್ ಮಾತ್ರೆಯನ್ನು 2-6 ತಿಂಗಳಿನ ಮಗುವಿಗೆ ಅರ್ಧ ಮತ್ತು 6 ತಿಂಗಳಿನಿಂದ 5 ವರ್ಷದವರಿಗೆ ಒಂದು ನೀಡಬೇಕು. ಇದನ್ನು ಒಟ್ಟು 14 ದಿವಸಗಳ ಕಾಲ ನೀಡಬೇಕು. ಝಿಂಕ್ ಮಾತ್ರೆಯು ಅತಿಸಾರವನ್ನು ತಡೆಗಟ್ಟುತ್ತದೆ. ಮಕ್ಕಳಿಗೆ ಅಶಕ್ತತೆ ದೂರವಾಗುತ್ತದೆ. ಇಂತಹ ಸಂದರ್ಭದಲ್ಲಿ ಮಗುವಿಗೆ ತಾಯಿಯ ಎದೆಹಾಲು ಮತ್ತು ಪೂರಕ ಆಹಾರ ನೀಡಬೇಕು. ಆಹಾರ ತಯಾರಿಸುವಾಗ ಹಾಗೂ ತಿನ್ನಿಸುವಾಗ ಸ್ವಚ್ಛತೆಯನ್ನು ಕಾಪಾಡುವುದು ತುಂಬಾ ಅಗತ್ಯವಾಗಿದೆ. ಮಾತ್ರೆ ಮತ್ತು ಓಆರ್‍ಎಸ್ ದ್ರಾವಣವನ್ನು ನೀಡುವ ಮೂಲಕ ಮಕ್ಕಳಿಗೆ ಉಂಟಾಗುವ ತೊಂದರೆಗಳನ್ನು ತಡೆಗಟ್ಟಬಹುದು. ಇವುಗಳನ್ನು ಸಮೀಪದ ಪ್ರಾಥಮಿಕ ಆರೋಗ್ಯ ಕೇಂದ್ರ, ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿ ಉಚಿತವಾಗಿ ಪಡೆಯಬಹುದಾಗಿದ್ದು, ಸಂಬಂಧಿಸಿದವರು ಇದರ ಸದುಪಯೋಗವನ್ನು ಮಾಡಿಕೊಳ್ಳಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಪ್ರಮುಖರಾದ ಎಚ್.ಬಿ.ಪಾಟೀಲ, ದೇವೇಂದ್ರಪ್ಪ ಗಣಮುಖಿ, ಸುನಿತಾ ಎಸ್.ಜಮಾದಾರ, ಶರಣು ಜಮಾದಾರ, ಆರೋಗ್ಯ ಕೇಂದ್ರದ ಸಿಬ್ಬಂದಿಗಳಾದ ಪುಷ್ಪಾ ಆರ್.ರತ್ನಹೊನ್ನದ್, ನಾಗೇಶ್ವರಿ ಮುಗಳಿವಾಡಿ, ಸಂಗಮ್ಮ ಅತನೂರ, ರೇಷ್ಮಾ ನಕ್ಕುಂದಿ, ಗಂಗಾಜ್ಯೋತಿ ಗಂಜಿ, ಸಚಿನ್ ಸಿಂಗೆ, ನಾಗಮ್ಮ ಚಿಂಚೋಳಿ ಸೇರಿದಂತೆ ಮುಂತಾದವರಿದ್ದರು.