ಮಕ್ಕಳಿಗೆ ಜೀವಸತ್ವ ಆಹಾರ ನೀಡಲು ಕರೆ

ಬ್ಯಾಡಗಿ, ಜೂ 9: ಕೋವಿಡ್‍ನಿಂದ ಮಕ್ಕಳು ವೇಗವಾಗಿ ಚೇತರಿಸಿಕೊಳ್ಳಲು ಆಹಾರ ಮತ್ತು ಪೆÇೀಷಣೆ ನಿರ್ಣಾಯಕ ಪಾತ್ರ ವಹಿಸುತ್ತದೆ. ಮಗು ಅನಾರೋಗ್ಯಕ್ಕೆ ಒಳಗಾದಾಗ, ಜೀವಸತ್ವಗಳು ಮತ್ತು ಖನಿಜಗಳು ಇರುವ ಆಹಾರ ಸೇವಿಸುವಂತೆ ನೋಡಿಕೊಳ್ಳಬೇಕೆಂದು ಸರ್ಕಾರಿ ಆಸ್ಪತ್ರೆಯ ಆಡಳಿತಾಧಿಕಾರಿ ಡಾ. ಪುಟ್ಟರಾಜ ಹೇಳಿದರು.
ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಕೋವಿಡ್ ಸೋಂಕಿತ ಮಕ್ಕಳಿಗೆ “ಪೌಷ್ಠಿಕಾಂಶಯುಕ್ತ ಆಹಾರದ ಕಿಟ್”ಗಳನ್ನು ವಿತರಿಸಿ ಮಾತನಾಡಿದ ಅವರು, ಸಣ್ಣ ಮಕ್ಕಳು ಕ್ವಾರಂಟೈನ್‍ನಲ್ಲಿದ್ದು ಚೇತರಿಸಿಕೊಳ್ಳುತ್ತಿದ್ದರೆ ಅವರಿಗೆ ಉತ್ತಮವಾದ ಮನೆಯಲ್ಲಿ ಬೇಯಿಸಿದ ತಾಜಾ ಆಹಾರವನ್ನು ನೀಡಿ. ದೇಹವನ್ನು ಹೈಡ್ರೇಟ್ ಮಾಡುವುದು ಒಂದು ಪ್ರಮುಖ ಅಂಶವಾಗಿದೆ. ಆದ್ದರಿಂದ ಓಆರ್‍ಎಸ್ ದ್ರಾವಣಗಳು ಮತ್ತು ಇತರ ಪೌಷ್ಠಿಕಾಂಶ ಪೂರಕಗಳನ್ನು ಕೊಡಲು ವೈದ್ಯರೊಂದಿಗೆ ಸಮಾಲೋಚನೆ ಸಹ ಮಾಡಬಹುದು. ಆದರೆ ಯಾವುದೇ ಕಾರಣಕ್ಕೂ ಮಕ್ಕಳಿಗೆ ಜಂಕ್ ಫುಡ್ ನೀಡುವುದನ್ನು ತಪ್ಪಿಸಿ. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಕಷಾಯ ಮಿಶ್ರಣಗಳನ್ನು ಸಹ ಬಳಸಬಹುದು. ಆದರೆ ಇದಕ್ಕೆ ವೈದ್ಯರ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ತಿಳಿಸಿದರು.
ಕೋವಿಡ್ ಸೋಂಕಿತ 45 ಮಕ್ಕಳಿಗೆ ಪೌಷ್ಟಿಕಾಂಶಯುಕ್ತ ಆಹಾರದ ಕಿಟ್‍ಗಳನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಡಾ.ಮಹೇಶ ಭಜಂತ್ರಿ, ಕಾರ್ಯಕ್ರಮ ವ್ಯವಸ್ಥಾಪಕ ಸದಾನಂದ ಚಿಕ್ಕಮಠ, ಆರೋಗ್ಯ ನಿರೀಕ್ಷಕ ವೈ.ಎನ್. ಹಿರಿಯಕ್ಕನವರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.