ಮಕ್ಕಳಿಗೆ ಚಿಕ್ಕಂದಿನಲ್ಲಿಯೆ ಸಂಸ್ಕಾರ ಬೆಳೆಸುವದು ಅಗತ್ಯ


ನರೇಗಲ್ಲ,ನ.9: ಮಕ್ಕಳು ಚಿಕ್ಕವರಿದ್ದಾಗಲೆ ಅವರಲ್ಲಿ ಸಂಸ್ಕಾರವನ್ನು ಬೆಳೆಸಬೇಕು. ಸಸಿಯಾಗಿ ಬಗ್ಗದ್ದು ಮರವಾದಾಗ ಬಗ್ಗುವುದಿಲ್ಲ. ಅದಕ್ಕಾಗಿ ಅವರಿಗೆ ಈಗಿನಿಂದಲೆ ಸಂಸ್ಕಾರದ ಪಾಠ ಮಾಡಬೇಕೆಂದು ನಿವೃತ್ತ ಮುಖ್ಯ ಶಿಕ್ಷಕ ಅರುಣ ಬಿ. ಕುಲಕರ್ಣಿ ಹೇಳಿದರು.
ಪಟ್ಟಣದ ಹಿರೇಮಠದಲ್ಲಿ ನಡೆದಿರುವ ಜಾತ್ರಾ ಮಹೋತ್ಸವದ ಎರಡನೆ ದಿನದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಮಕ್ಕಳಲ್ಲಿ ಸಂಸ್ಕಾರ ಬೆಳೆಸುವಲ್ಲಿ ತಾಯಂದಿರ ಪಾತ್ರ ಮಹತ್ವದ್ದಾಗಿದ್ದು, ಮನೆಯಲ್ಲಿ ತಾಯಂದಿರು ಮಕ್ಕಳಲ್ಲಿ ನಿತ್ಯವೂ ಸಂಸ್ಕಾರ ಬೆಳೆಸಲು ಶ್ರಮಿಸಬೇಕೆಂದರು. ನಿತ್ಯವೂ ಮಕ್ಕಳಿಗೆ ವಚನಗಳು, ದಾಸರ ಪದಗಳು, ನುಡಿ ಮುತ್ತುಗಳನ್ನು ಕಲಿಸಬೇಕು. ಮನೆಗೆ ಹಿರಿಯರು ಬಂದಾಗ, ಗುರುಗಳು ಬಂದಾಗ ಅವರನ್ನು ಹೇಗೆ ಗೌರವಿಸಬೇಕು, ಅವರನ್ನು ಹೇಗೆ ಸ್ವಾಗತಿಸಬೇಕು ಎಂಬುದನ್ನೆಲ್ಲ ತಾಯಂದಿರು ಮಕ್ಕಳಿಗೆ ಹೇಳಿಕೊಡಬೇಕು. ಅದಕ್ಕೆಂದೇ ಹಿರಿಯರು ಮನೆಯೆ ಮೊದಲ ಪಾಠಶಾಲೆ ಜನನಿ ತಾನೆ ಮೊದಲ ಗುರುವೆಂದು ಹೇಳಿದ್ದಾರೆ ಎಂದು ತಿಳಿಸಿದ ಕುಲಕರ್ಣಿ, ಮಕ್ಕಳನ್ನು ಇಂತಹ ಕಾರ್ಯಕ್ರಮಗಳಲ್ಲಿ ಹೆಚ್ಚುಹೆಚ್ಚಾಗಿ ಪಾಲ್ಗೊಳ್ಳುವಂತೆ ಮಾಡಬೇಕೆಂದರು.
ಈ ಭಾಗದಲ್ಲಿ ಸಿದ್ಧಾಂತ ಶಿಖಾಮಣಿಯ ಬಗ್ಗೆ ವಿದ್ವತ್ಪೂರ್ಣ ಪ್ರವಚನ ನೀಡುವಲ್ಲಿ ಷ.ಬ್ರ. ಮಲ್ಲಿಕಾರ್ಜುನ ಶಿವಾಚಾರ್ಯರು ಅತ್ಯಂತ ಸಮರ್ಥರೆನ್ನಿಸಿಕೊಂಡಿದ್ದು, ನಾಡಿನ ಅನೇಕ ಮಠಮಾನ್ಯಗಳಲ್ಲಿ ತಮ್ಮ ಪ್ರವಚನದ ಮೂಲಕ ಸಹಸ್ರಾರು ಭಕ್ತರನ್ನು ಹೊಂದಿದ್ದಾರೆ. ವರ್ಷಕ್ಕೊಮ್ಮೆ ಕಾರ್ತಿಕ ಮಾಸದಲ್ಲಿ ನಡೆಯುವ ಈ ಜಾತ್ರಾಮಹೋತ್ಸವ ಈ ಭಾಗದ ಭಕ್ತರಲ್ಲಿ ಧಾರ್ಮಿಕ ಭವನೆಗಳನ್ನು ಬಿತ್ತಲು ಸಹಾಯಕವಾಗಿದೆ. ಇದು ಹೀಗೇ ಅನವರತ ನಡೆಯಲಿ ಎಂದು ಕುಲಕರ್ಣಿ ತಿಳಿಸಿದರು.
ನಿವೃತ್ತ ಶಿಕ್ಷಕ ಎಂ. ಎಸ್.ದಢೇಸೂರಮಠ ಮಾತನಾಡಿ ನರೇಗಲ್ಲ ಮತ್ತು ಸೌಂದತ್ತಿಯ ಭಕ್ತರು ನಿಜಕ್ಕೂ ಧನ್ಯರು. ಇಂತಹ ಶಾಂತ ಮೂರ್ತಿ ಸ್ವಾಮೀಜಿಗಳನ್ನು ಗುರುಗಳನ್ನಾಗಿ ಪಡೆದಿದ್ದೇವೆ. ತಮ್ಮ ದೂರದೃಷ್ಟಿತ್ವದ ಮೂಲಕ ಅವರು ಎರಡೂ ಕಡೆಗಳಲ್ಲಿ ಅನೇಕ ಜನೋಪಯೋಗಿ ಕಾರ್ಯಗಳನ್ನು ಹಮ್ಮಿಕೊಂಡು ಜನಾನುರಾಗಿ ಸ್ವಾಮೀಜಿಯಾಗಿದ್ದಾರೆ ಎಂದರು.
ಇನ್ನೋರ್ವ ನಿವೃತ್ತ ಮುಖ್ಯ ಶಿಕ್ಷಕ ಕೆ.ಎಸ್.ಕಳಕೊಣ್ಣವರ ಸನ್ಮಾನ ಸ್ವೀಕರಿಸಿ ಸಭೆಯನ್ನುದ್ದೇಶಿಸಿ ಮಾತನಾಡಿದರು. ಪ್ರಸಾದ ವ್ಯವಸ್ಥೆಯ ಸೇವೆಯನ್ನು ವಹಿಸಿಕೊಂಡಿದ್ದ ಎಂ.ಎಸ್.ದಢೇಸೂರಮಠ ಮತ್ತು ಗುತ್ತಿಗೆದಾರ ಬಸವರಾಜ ಶಿವನಪ್ಪನವರ ದಂಪತಿಗಳನ್ನು ಶ್ರೀಗಳವರು ಸನ್ಮಾನಿಸಿದರು. ಹುಬ್ಬಳ್ಳಿಯ ಷ.ಬ್ರ. ಶ್ರೀ ರಾಜಶೇಖರ ಸ್ವಾಮೀಜಿ ಪುರಾಣ ಪ್ರವಚನ ನೀಡಿದರು. ಸಾನಿಧ್ಯ ವಹಿಸಿದ್ದ ಷ.ಬ್ರ. ಮಲ್ಲಿಕಾರ್ಜುನ ಶಿವಾಚಾರ್ಯರು ಆಶೀರ್ವಚನ ನೀಡಿ ಈ ಜಗತ್ತಿನಲ್ಲಿ ಪುರಾಣಗಳು ಬೆಳೆದು ಬಂದ ಬಗೆಯನ್ನು ಸಭೆಗೆ ವಿವರಿಸಿದರು.