ಮಕ್ಕಳಿಗೆ ಗಂಧದಗುಡಿ ಚಿತ್ರ ಪ್ರದರ್ಶನ

ಹುಬ್ಬಳ್ಳಿ, ನ12: ಒಂದೆಡೆ ಬಾಲ ನಟಿಯರು, ಇನ್ನೊಂದೆಡೆ ಪುನೀತ ರಾಜಕುಮಾರ ಅವರ ಚಲನಚಿತ್ರ ಗಂಧದ ಗುಡಿ ನೋಡುವ ಸೌಭಾಗ್ಯ. ಇಂಥ ಆಹ್ಲಾದಕರ ವಾತಾವರಣ ಸಿಕ್ಕಿದ್ದು ವಿಶ್ವೇಶ್ವರ ನಗರದ ಸರಕಾರಿ ಹಿರಿಯ ಪ್ರಾಥಮಿಕ ಮತ್ತು ಪ್ರೌಢ ಶಾಲೆಯ ಮಕ್ಕಳಿಗೆ ಮಕ್ಕಳ ದಿನಾಚರಣೆ ನಿಮಿತ್ತ ನಗರದ ಸುಧಾ ಚಿತ್ರಮಂದಿರದಲ್ಲಿ ಈ ಶಾಲೆಯ 169 ಮಕ್ಕಳು ಗಂಧದ ಗುಡಿ ಚಲನಚಿತ್ರ ನೋಡಿದರು. ಅದೂ ಬಾಲನಟಿಯರಾದ ಶಾರ್ವರಿ ಮತ್ತು ಪ್ರಾಚಿ ನಾಯಕ್ ಜತೆ ಪಾಠ-ಪ್ರವಚನ ಅಂತ ನಿತ್ಯ ಕಳೆಯುವ ಈ ಮಕ್ಕಳಿಗೆ ಚಲನಚಿತ್ರ ನೋಡುವ ಸೌಭಾಗ್ಯ ಕಲ್ಪಿಸಿದ್ದು ಗ್ರೋ ಗ್ರೀನ್ ಪೆಡಲ್ಲರ್ಸ್ ತಂಡ.
ಚಲನಚಿತ್ರವನ್ನು ನೋಡಿ ಹೊರ ಬಂದ ನಂತರ ಮಾತನಾಡಿದ ಶಾರ್ವರಿ, ಪುನೀತ ರಾಜಕುಮಾರ ಅವರ ಜತೆ ಚಲನಚಿತ್ರದಲ್ಲಿ ನಟಿಸುವ ಆಸೆ ಇತ್ತು. ಆದರೂ ಅವರು ನಟಿಸಿದ ಚಿತ್ರ ನೋಡಿ ಖುಷಿಯಾಗಿದೆ. ಅವರು ನನಗೆ ಸದಾ ನೆನಪು. ಗಂಧದ ಗುಡಿ ಚಲನಚಿತ್ರ ನನ್ನಲ್ಲಿ ಪರಿಸರ ಪ್ರೇಮವನ್ನು ಹೆಚ್ಚಿಸಿದೆ ಎಂದರು.
ಪ್ರಾಚಿ ನಾಯಕ್ ಮಾತನಾಡಿ, ಅಪ್ಪು ಅವರ ಒಂದೊಂದು ಚಲನಚಿತ್ರ ಸ್ಫೂರ್ತಿದಾಯಕ. ಏನಾದರೊಂದು ಸಾಧಿಸುವ ಛಲವನ್ನು ಬೆಳೆಸುತ್ತವೆ. ಇಂಥ ಚಲನಚಿತ್ರ ನೀಡಿದ್ದರಿಂದಲೇ ಅವರು ಅಭಿಮಾನಿಗಳಿಗೆ ದೇವರಾದರು ಎಂದರು.
ಗ್ರೋ ಗ್ರೀನ್ ಪೆಡಲ್ಲರ್ಸ್ ಅಧ್ಯಕ್ಷ ಬಾಲಚಂದ್ರ ಡಂಗನವರ ಮಾತನಾಡಿ, ಮಕ್ಕಳಲ್ಲಿ ಹೊಸ ಉತ್ಸಾಹ ತುಂಬುವ ಕೆಲಸ ಮಾಡಬೇಕೆಂದುಕೊಂಡಿದ್ದೆ. ಅದು ಅಪ್ಪು ಚಲನಚಿತ್ರ ನೋಡುವ ಮೂಲಕ ಮಕ್ಕಳು ಏನಾದರೊಂದು ಸಾಧನೆ ಮಾಡಲಿ ಎಂಬ ಬಯಕೆ ನನ್ನದು. ಗಂಧದ ಗುಡಿ ಚಲನಚಿತ್ರ ನೋಡಿದ ಬಳಿಕವಂತೂ ಅವರಲ್ಲಿ ಹೊಸ ಕನಸುಗಳು ಮೂಡಿವೆ ಎಂದರು. ಇದೇ ವೇಳೆ ಗ್ರೋ ಗ್ರೀನ್ ಪೆಡಲ್ಲರ್ಸ್ ವತಿಯಿಂದ ಬಾಲ ನಟಿಯರಿಬ್ಬರಿಗೆ ಸಸಿ ವಿತರಿಸಲಾಯಿತು.
ಪ್ರಮುಖರಾದ ಸುರೇಶ ಚಿಂದಿ, ಸಂತೋಷ ಅರಸಮಂಗಲಂ, ಅಮೃತ ಹೇರೂರಕರ್, ಅಜಯ ಗಂಗೂಲಿ, ರವಿ ನಾಯಕ್, ನಾಗವೇಣಿ ವೀರಭದ್ರ , ಶಾಲೆಯ ಮುಖ್ಯೊಪಾಧ್ಯಾಯಕಿ ಡಿ. ಜಿ. ಕಮ್ಮಾರ, ಶಿಕ್ಷಕರು ಹಾಗೂ ಇತರರು ಇದ್ದರು.