ಮಕ್ಕಳಿಗೆ ಕೊರೊನಾ ಲಸಿಕೆ ಶೀಘ್ರ ನೀಡಿಕೆ

ಬೆಂಗಳೂರು,ನ.೯- ರಾಜ್ಯದಲ್ಲಿ ಮಕ್ಕಳಿಗೆ ಕೋವಿಡ್ ಲಸಿಕೆ ನೀಡುವ ಕಾರ್ಯಕ್ಕೆ ಅತೀ ಶೀಘ್ರದಲ್ಲೇ ಚಾಲನೆ ನೀಡಲಾಗುವುದು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಹೇಳಿದರು.
ಬೆಂಗಳೂರಿನ ಮಿಂಟೋ ಕಣ್ಣಾಸ್ಪತ್ರೆ ೧೨೫ನೇ ವರ್ಷ ಪೂರೈಸಿದ ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರದಿಂದ ಮಕ್ಕಳ ಕೋವಿಡ್ ಝೈಡೆಸ್ ಲಸಿಕೆ ಮುಂದಿನ ವಾರ ರಾಜ್ಯಕ್ಕೆ ಬರುವ ನಿರೀಕ್ಷೆ ಇದ್ದು, ಲಸಿಕೆ ಬಂದ ನಂತರ ಲಸಿಕೆ ನೀಡುವ ದಿನಾಂಕವನ್ನು ನಿಗದಿ ಮಾಡುವುದಾಗಿ ಹೇಳಿದರು.
ಕೇಂದ್ರ ಸರ್ಕಾರ ಈಗಾಗಲೇ ೧ ಕೋಟಿ ಕೋವಿಡ್ ಝೈಡೆಸ್ ಲಸಿಕೆ ಖರೀದಿಗೆ ನಿರ್ಧರಿಸಿದೆ.
ಕೇಂದ್ರ ಸರ್ಕಾರವೇ ಮಕ್ಕಳ ಕೋವಿಡ್ ಲಸಿಕೆಯನ್ನು ರಾಜ್ಯಗಳಿಗೆ ಪೂರೈಸುತ್ತದೆ. ಮುಂದಿನ ವಾರದ ಹೊತ್ತಿಗೆ ರಾಜ್ಯಕ್ಕೆ ಮಕ್ಕಳ ಕೋವಿಡ್ ಲಸಿಕೆ ಬರಲಿದೆ ಎಂಬ ನಿರೀಕ್ಷೆ ಇದೆ ಎಂದರು.
ರಾಜ್ಯಕ್ಕೆ ಮಕ್ಕಳ ಕೋವಿಡ್ ಲಸಿಕೆ ಬಂದ ನಂತರ ೫ ರಿಂದ ೧೨ ವರ್ಷದ ಮಕ್ಕಳಿಗೆ ಪ್ರಾಶಸ್ತ್ಯದ ಮೇಲೆ ಲಸಿಕೆಯನ್ನು ನೀಡಲಾಗುವುದು, ಸೋಂಕಿಗೆ ಬೇಗ ಒಳಗಾಗುವ ಮಕ್ಕಳನ್ನು ಗುರುತಿಸಿ ಅವರಿಗೆ ಪ್ರಾಶಸ್ತ್ಯದ ಮೇಲೆ ಲಸಿಕೆ ನೀಡುತ್ತೇವೆ ಎಂದರು.
ಆರೋಗ್ಯ ನಂದನ ಕಾರ್ಯಕ್ರಮದಡಿ ಈಗಾಗಲೇ ರಾಜ್ಯದ ಮಕ್ಕಳ ಆರೋಗ್ಯ ಸ್ಥಿತಿಯ ಅಂಕಿ-ಅಂಶಗಳನ್ನು ಸಂಗ್ರಹಿಸಲಾಗಿದೆ. ಇದನ್ನು ಆಧಾರವಾಗಿಟ್ಟುಕೊಂಡು ಪ್ರಾಶಸ್ತ್ಯದ ಮೇಲೆ ಮಕ್ಕಳಿಗೆ ಕೋವಿಡ್ ಲಸಿಕೆ ನೀಡುತ್ತೇವೆ ಎಂದರು.
ಶೇ. ೮೯ ರಷ್ಟು ಮೊದಲ ಡೋಸ್ ಲಸಿಕೆ
ರಾಜ್ಯದಲ್ಲಿ ಇದುವರೆಗೂ ಶೇ. ೮೯ ರಷ್ಟು ಮಂದಿಗೆ ಮೊದಲ ಡೋಸ್ ಕೋವಿಡ್ ಲಸಿಕೆ ನೀಡಲಾಗಿದೆ. ಶೇ. ೪೮ ರಷ್ಟು ಮಂದಿಗೆ ೨ನೇ ಡೋಸ್ ಲಸಿಕೆ ನೀಡಲಾಗಿದೆ ಎಂದು ಸಚಿವ ಡಾ. ಕೆ. ಸುಧಾಕರ್ ಹೇಳಿದರು.
ರಾಜ್ಯದಲ್ಲಿ ಕೋವಿಡ್ ಸೋಂಕು ಪ್ರಕರಣಗಳು ಕಡಿಮೆಯಾಗಿದೆ ಎಂದು ಕೋವಿಡ್ ಮುಕ್ತವಾಗಿದೆ ಎಂದು ಭಾವಿಸುವುದು ಸರಿಯಲ್ಲ. ಇಡೀ ಜಗತ್ತಿನಲ್ಲೇ ಕೋವಿಡ್ ನಿರ್ಮೂಲನೆಯಾದಾಗ ಮಾತ್ರ ಕೋವಿಡ್ ಮುಕ್ತವಾದಂತೆ. ಹಾಗಾಗಿ, ಪ್ರತಿಯೊಬ್ಬರೂ ಮೈ ಮರೆಯದೆ ಮುನ್ನೆಚ್ಚೆರಿಕೆ ವಹಿಸಿ ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸಬೇಕು ಎಂದು ಅವರು ಹೇಳಿದರು.