ಮಕ್ಕಳಿಗೆ ಕಾಲ, ಕಾಯಕ, ಕಾಸಿನ ಮಹತ್ವ ತಿಳಿಸಬೇಕು; ಪಂಡಿತಾರಾಧ್ಯ ಶ್ರೀ

ಸಾಣೇಹಳ್ಳಿ,ಏ. 29; ಮಠಗಳ ಪರಂಪರೆಯಲ್ಲಿ ಹೊಸ ಚೈತನ್ಯವನ್ನು ಬಿತ್ತಿದವರು 20 ನೆಯ ಶ್ರೀ ತರಳಬಾಳು ಜಗದ್ಗುರು ಶಿವಕುಮಾರ ಶಿವಾಚಾರ್ಯ ಸ್ವಾಮಿಗಳವರು. ಪೂಜ್ಯರನ್ನು ಕ್ರಾಂತಿಕಾರಿ ಗುರುಗಳೆಂದು ಕರೆಯುತ್ತಿದ್ದರು ಎಂದು ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ಹೇಳಿದರು.ಇಲ್ಲಿನ ತರಳಬಾಳು ಜಗದ್ಗರು ಶಾಖಾ ಶ್ರೀಮಠ ಮತ್ತು ಶ್ರೀ ಶಿವಕುಮಾರ ಸಂಘ, ಶಿವಕುಮಾರ ಸ್ವಾಮೀಜಿ ರಥೋತ್ಸವ ಸಮಿತಿ ಮತ್ತು ರಂಗಪ್ರಯೋಗಶಾಲೆಗಳ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಶ್ರೀ ಶಿವಕುಮಾರ ಸ್ವಾಮೀಜಿ ರಥೋತ್ಸವ, ಬಸವಜಯಂತಿ ಹಾಗೂ ಮಕ್ಕಳ ಹಬ್ಬದ ಸಮಾರೋಪ ಸಮಾರಂಭದ ಸಾನ್ನಿಧ್ಯ ವಹಿಸಿಮಾತನಾಡಿದ ಶ್ರೀಗಳು ಕೇವಲ ಧಾರ್ಮಿಕ ಕ್ಷೇತ್ರಕ್ಕೆ ಸೀಮಿತವಾಗದೆ ಸಾಹಿತ್ಯ, ಸಂಗೀತ, ನಾಟಕ ಕ್ಷೇತ್ರಗಳಿಗೀ ಹೆಚ್ಚು ಮಹತ್ವ ನೀಡಿ ತಮ್ಮದೇ ಆದ ಛಾಪು ಮೂಡಿಸಿದವರು. ಅಂತಹ ಗುರುಗಳ ಆಶೀರ್ವಾದ ವೈಯುಕ್ತಿಕವಾಗಿ ನಮಗೆ ಸಿಗದೇ ಇದ್ದಿದ್ದರೆ ನಾವು ಇಂದು ಯಾರದಾದರೂ ಮನೆಯಲ್ಲಿ ಕೆಲಸ ಮಾಡಿಕೊಂಡಿರಬೇಕಾಗುತ್ತಿತ್ತು. ಖ್ಯಾತ ಸಾಹಿತಿ ಮಹಾದೇವ ಬಣಕಾರರ ಮಾತಿನಲ್ಲಿ ಹೇಳುವುದಾದರೆ ಸಿರಿಗೆರೆಯ ಮಠ ಒಂದು ಸುಟ್ಟಬಟ್ಟೆಯಂತಿತ್ತು. ಅಂತಹ ಸುಟ್ಟ ಬಟ್ಟೆಯನ್ನು ಇಡಲೂಬಹುದು, ತೊಡಲುಬಹುದೂ ಎಂದು ತೋರಿಸಿಕೊಟ್ಟವರು ಶಿವಕುಮಾರ ಶ್ರೀಗಳು. ನಾವು ಎಸ್‌ಎಸ್‌ಎಲ್‌ಸಿ, ಪಿಯುಸಿ ಫೇಲಾದಾಗ ತಂದೆ-ತಾಯಿಗಳ ಸ್ಥಾನದಲ್ಲಿ ನಿಂತು ?ಅಯ್ಯೋ ದಡ್ಡ ಎಲ್ಲರೂ ಪಾಸಾದರೆ ಫೇಲಾಗೋದು ಯಾರು!? ಎಂದು ತಾಯ್ತನ ತೋರಿಸಿದವರು ನಮ್ಮ ಪರಮಾರಾಧ್ಯ ಗುರುಗಳು. ನಂತರ ನಾವು ಎಂ ಎ ಪದವಿಯಲ್ಲಿ ಚಿನ್ನದ ಪದಕ ಗಳಿಸಿದಾಗ ಅತ್ಯಂತ ಹೆಚ್ಚು ಸಂತಸಪಟ್ಟವರೂ ಅವರೇ. ನಂತರ 1977 ರಲ್ಲಿ ಸೇವಾ ದೀಕ್ಷೆಯನ್ನು ಕೊಟ್ಟು ಸಾಣೇಹಳ್ಳಿ ಮಠಕ್ಕೆ ಪಟ್ಟಾಧ್ಯಕ್ಷರನ್ನಾಗಿ ನೇಮಿಸಿದರು. ಅವರ ಆಶೀರ್ವಾದದ ಫಲವಾಗಿ ಮೊದಲು ಯಾರಿಗೂ ಪರಿಚಯ ಇಲ್ಲದೇ ಇದ್ದ ಸಾಣೇಹಳ್ಳಿ ಈಗ ಇಡೀ ವಿಶ್ವಕ್ಕೆ ಪರಿಚಯವಾಗಿದೆ. ಶ್ರೀಗಳವರು ಶಿಕ್ಷಣ ರಂಗಭೂಮಿ, ಮತ್ತು ವಿಶೇಷವಾಗಿ ಮಕ್ಕಳಿಗೆ ವಿಶೇಷವಾದ ಮನ್ನಣೆ ಕೊಡ್ತಾ ಇದ್ದರು. ಈ ಹಿನ್ನೆಲೆಯಲ್ಲಿ ನಾವು ಸಾಣೇಹಳ್ಳಿಯಲ್ಲಿ ಕಳೆದ 26 ವರ್ಷಗಳಿಂದ ಮಕ್ಕಳ ಹಬ್ಬವನ್ನು ನಡೆಸಿಕೊಂಡು ಬಂದಿದ್ದೇವೆ. ಮಕ್ಕಳು ಹಸಿ ಗೋಡೆ ಇದ್ದ ಹಾಗೆ. ಅದರಲ್ಲಿ ಏನಾದರೂ ಹಾಕಿದರೆ ತಕ್ಷಣ ಹಿಡಿದುಕೊಳ್ಳುತ್ತೆ. ಹಾಗೆ ಏನಾದರೂ ಕಲಿಸಿದರೆ ತಕ್ಷಣ ಗ್ರಹಿಸಿಕೊಳ್ಳುವ ಶಕ್ತಿ ಮಕ್ಕಳಿಗಿದೆ. ಇತ್ತೀಚಿನ ದಿನಗಳಲ್ಲಿ ಮೊಬೈಲ್ ಹಾವಳಿ ಹೆಚ್ಚಾಗಿದೆ. ಮೊಬೈಲ್ ಹಾವಳಿಯಿಂದ ತಪ್ಪಿಸಬೇಕೆಂದರೆ ಇಂತಹ ಶಿಬಿರದಲ್ಲಿ ಪಾಲ್ಗೊಳ್ಳಬೇಕು. ಮಕ್ಕಳಿಗೆ ಕಾಲ, ಕಾಯಕ, ಕಾಸಿನ ಮಹತ್ವ ತಿಳಿಸಿದರೆ ಮುಂದೆ ನಾಡಿನ ದೊಡ್ಡ ಆಸ್ತಿಯಾಗುತ್ತಾರೆ. ಮಕ್ಕಳು ಒಂದು ರೀತಿಯಲ್ಲಿ ಮಣ್ಣಿನ ಮುದ್ದೆಯಿದ್ದಂತೆ. ಅದಕ್ಕೆ ಯಾವ ಆಕಾರ ಬೇಕಾದರೂ ಕೊಡಬಹುದು ಎಂದರು.ದಾವಣಗೆರೆ ವಿಶ್ವವಿದ್ಯಾಲಯದ ಉಪಕುಲಪತಿಗಳಾದ ಡಾ. ಬಿ ಡಿ ಕುಂಬಾರ್ , ಸಿನಿಮಾ ನಿರ್ದೇಶಕಿ ಚಂಪಾ ಶೆಟ್ಟಿ ಸೇರಿದಂತೆ ಅನೇಕರಿದ್ದರು.