ಮಕ್ಕಳಿಗೆ ಕಾಂಡೋಮ್ ಮಾರಾಟಕ್ಕೆ ಬ್ರೇಕ್

ಬೆಂಗಳೂರು, ಜ.೧೭- ಇತ್ತೀಚೆಗೆ ಶಾಲಾ ಮಕ್ಕಳ ಬ್ಯಾಗ್‌ನಲ್ಲಿ ಕಾಂಡೋಮ್ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪ್ರಾಪ್ತ ಮಕ್ಕಳಿಗೆ ಕಾಂಡೋಮ್ ಮಾರಾಟ ಮಾಡದಂತೆ ಆದೇಶ ಹೊರಡಿಸಲಾಗಿದೆ ಎಂದು ವರದಿಯಾಗಿದೆ. ಔಷಧ ನಿಯಂತ್ರಣ ಇಲಾಖೆಯಿಂದ ಈ ಆದೇಶ ಹೊರಡಿಸಲಾಗಿದ್ದು, ೧೮ ವರ್ಷದೊಳಗಿನ ಮಕ್ಕಳಿಗೆ ಕಾಂಡೋಮ್ ಮಾರಾಟ ಮಾಡದಂತೆ ನಿಯಮ ಜಾರಿಗೆ ತಂದಿದ್ದಾರೆ. ಅದೇ ರೀತಿ ಗರ್ಭ ನಿರೋಧಕ ಮಾತ್ರೆಯನ್ನೂ ಸಹ ಮಾರಾಟ ಮಾಡುವಂತಿಲ್ಲ ಎಂದು ಉಲ್ಲೇಖಿಸಿ, ರಾಜ್ಯ ವ್ಯಾಪಿ ಔಷಧಾಲಯ ಗಳಿಗೆ ಸೂಚಿಸಲಾಗಿದೆ.
ಶಾಲಾ ಮಕ್ಕಳು ಹಾಗೂ ೧೮ ವರ್ಷದೊಳಗಿನ ಮಕ್ಕಳಿಗೆ ಕಾಂಡೋಮ್ ಮತ್ತು ಗರ್ಭ ನಿರೋಧಕ ಮಾತ್ರೆ ಸೇರಿದಂತೆ ಉತ್ತೇಜಕ ಮಾತ್ರೆಗಳನ್ನು ನೀಡಬಾರದು ಎಂದು ಸೂಚನೆ ನೀಡಲಾಯಿತು. ಇತ್ತೀಚೆಗೆ ಶಾಲೆಗಳಿಗೆ ಸ್ಮಾರ್ಟ್‌ಫೋನ್ ತರುವಂತಿಲ್ಲ ಎಂಬ ನಿಯಮವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗಿತ್ತು. ಹಿನ್ನೆಲೆಯಲ್ಲಿ ಶಾಲೆ ಸಿಬ್ಬಂದಿಗಳು ಮಕ್ಕಳ ಬ್ಯಾಗ್ ನ್ನು ತಪಾಸಣೆ ಮಾಡಲಾಗಿತ್ತು. ಈ ವೇಳೆ ಮಕ್ಕಳ ಬ್ಯಾಗ್‌ನಲ್ಲಿ ಸೆಲ್‌ಫೋನ್‌ಗಳು, ಸ್ಮಾರ್ಟ್‌ಫೋನ್‌ಗಳು, ಜೊತೆಗೆ ಕಾಂಡೋಮ್‌ಗಳು, ಗರ್ಭನಿರೋಧಕ ಮಾತ್ರೆಗಳು ಪತ್ತೆಯಾಗಿತ್ತು. ಇದರಿಂದ ಶಾಲಾ ಸಿಬ್ಬಂದಿಗಳಿಗೆ ಆತಂಕ ವ್ಯಕ್ತಪಡಿಸಿದ್ದರು.