ಮಕ್ಕಳಿಗೆ ಉನ್ನತ ಶಿಕ್ಷಣ ಜೊತೆಗೆ ಮಾನವೀಯ ಮೌಲ್ಯಗಳನ್ನ ಕಲಿಸುವುದು ಅಗತ್ಯ : ಲಕ್ಷ್ಮಣ ಸವದಿ

ಅಥಣಿ :ಜ.14: ನಮ್ಮ ಮಕ್ಕಳಿಗೆ ಉನ್ನತ ಶಿಕ್ಷಣ ನೀಡಿದರೆ ಸಾಲದು ಉನ್ನತ ಶಿಕ್ಷಣ ನೀಡುವುದರ ಜೊತೆಗೆ ನೈತಿಕ ಮೌಲ್ಯಗಳನ್ನು ಮತ್ತು ಮಾನವೀಯ ಸಂಬಂಧಗಳನ್ನು ಹೇಳಿಕೊಡುವುದು ಇಂದಿನ ಅಗತ್ಯವಾಗಿದೆ ಎಂದು ಮಾಜಿ ಡಿಸಿಎಂ ಹಾಗೂ ಶಾಸಕ ಲಕ್ಷ್ಮಣ ಸವದಿ ಹೇಳಿದರು.
ಅವರು ಪಟ್ಟಣದ ಸನಾ ಪಿಯು ಕಾಲೇಜಿನ ಅಡಿಗಲ್ಲು ಸಮಾರಂಭ ನೆರವೇರಿಸಿ ಮಾತನಾಡಿದರು. ಬಡ ಹಾಗೂ ಮಧ್ಯಮ ವರ್ಗದ ಅನೇಕ ವಿದ್ಯಾರ್ಥಿಗಳು ಉನ್ನತ ಶಿಕ್ಷಣದಿಂದ ವಂಚಿತವಾಗುವ ಇಂದಿನ ದಿನಗಳಲ್ಲಿ ಸನಾ ಕೋಚಿಂಗ್ ಕ್ಲಾಸ್ ನಡೆಸುವ ಮೂಲಕ ಅದನ್ನು ಇಂದು ಕಾಲೇಜ್ ಆಗಿ ಪರಿವರ್ತಿಸಿ ಗ್ರಾಮೀಣ ಭಾಗದ ಮಕ್ಕಳಿಗೆ ಉತ್ತಮ ಗುಣಮಟ್ಟದ ತರಬೇತಿ ನೀಡುವ ಮೂಲಕ ಉನ್ನತ ಶಿಕ್ಷಣ ಕೊಡುತ್ತಿರುವುದು ಒಳ್ಳೆಯ ಬೆಳವಣಿಗೆಯಾಗಿದೆ. ಮೆಡಿಕಲ್ ಮತ್ತು ಇಂಜಿನಿಯರಿಂಗ್ ಓದುವ ಮಕ್ಕಳಿಗೆ ಒಳ್ಳೆಯ ಶಿಕ್ಷಣ ನೀಡುತ್ತಿರುವುದು ಹೆಮ್ಮೆಯ ವಿಚಾರ. ಈ ಶಿಕ್ಷಣ ಸಂಸ್ಥೆ ಇನ್ನಷ್ಟು ಎತ್ತರ ಮಟ್ಟಕ್ಕೆ ಬೆಳೆಯಲಿ. ಒಂದು ಶಿಕ್ಷಣ ಸಂಸ್ಥೆಯನ್ನು ಕಟ್ಟಿ ಬೆಳೆಸುವುದು ಸರಳವಾದ ಕೆಲಸವಲ್ಲ. ಈ ಶಿಕ್ಷಣ ಸಂಸ್ಥೆಯ ಬೆಳವಣಿಗೆಯಲ್ಲಿ ನಾನು ನಿಮ್ಮ ಜೊತೆ ಯಾವತ್ತೂ ಇರುತ್ತೇನೆ. ಗ್ರಾಮೀಣ ಭಾಗದ ರೈತರ ಮಕ್ಕಳಿಗೂ ಇಂತಹ ಉನ್ನತ ಮಟ್ಟದ ಶಿಕ್ಷಣ ದೊರಕಲಿ ಎಂದು ಶುಭ ಹಾರೈಸಿದರು.
ಮುಸ್ಲಿಂ ಸಮುದಾಯದ ಮುಖಂಡರು ತಮ್ಮ ಸಮುದಾಯಕ್ಕೆ ವಿವಿಧ ಬೇಡಿಕೆಗಳನ್ನ ಸಲ್ಲಿಸಿದ್ದಾರೆ. ಅವುಗಳ ಅನುಷ್ಠಾನಕ್ಕೆ ನಾನು ಈಗಾಗಲೇ ಸರ್ಕಾರದಿಂದ ಅನುದಾನವನ್ನ ಪಡೆದುಕೊಂಡು ಅವುಗಳನ್ನು ಅನುಷ್ಠಾನಕ್ಕೆ ತರಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇನೆ ಎಂದು ಹೇಳಿದರು.
ಕಾಗವಾಡದ ಶಾಸಕ ರಾಜು ಕಾಗೆ ಮಾತನಾಡಿ ನಾವು ಇಂದು ಮಕ್ಕಳಿಗೆ ಉನ್ನತವಾದ ಶಿಕ್ಷಣವನ್ನು ನೀಡಿ ದೇಶ ವಿದೇಶಗಳಲ್ಲಿ ನೌಕರಿ ಮಾಡಲು ಕಳಿಸುತ್ತಿದ್ದೇವೆ. ಆದರೆ ಮಕ್ಕಳಲ್ಲಿ ಮಾನವೀಯ ಮೌಲ್ಯಗಳನ್ನು ಮತ್ತು ನೈತಿಕ ಮೌಲ್ಯಗಳನ್ನು ಕಲಿಸಿಕೊಡದೇ ಇರುವುದರಿಂದ ಇಂದು ಸಮಾಜದಲ್ಲಿ ನಡೆಯಬಾರದಂತಹ ಘಟನೆಗಳು ನಡೆಯುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಬೀದರದ ಶಾಹಿನ್ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಅಬ್ದುಲ ಖದೀರ ಮಾತನಾಡಿ ಶಿಕ್ಷಣ ಎಂಬುದು ಪ್ರತಿಯೊಬ್ಬರ ಜೀವನದ ಬೆಳಕು ಆಗಿದೆ. ನಮ್ಮಲ್ಲಿರುವ ಅಜ್ಞಾನವನ್ನು ಕಳೆದು ಸುಜ್ಞಾನವನ್ನ ನೀಡುವುದೇ ಶಿಕ್ಷಣವಾಗಿದೆ. ನನ್ನ ಶಿಕ್ಷಣ ಸಂಸ್ಥೆಯಲ್ಲಿ ಕಲಿತ ವಿದ್ಯಾರ್ಥಿ ಕಲೀಲ್ ಬಾಗವಾನ ಮೆಡಿಕಲ್ ಓದಿ ಡಾಕ್ಟರ್ ಆಗಬಹುದಿತ್ತು. ಆದರೆ ಆತನು ಅಥಣಿಯಲ್ಲಿ ಸನಾ ಕೋಚಿಂಗ್ ಸೆಂಟರ್ ಆರಂಭಿಸುವ ಮೂಲಕ ಅನೇಕ ವಿದ್ಯಾರ್ಥಿಗಳಿಗೆ ತರಬೇತಿ ನೀಡಿ ಇಂದು ನೂರಾರು ವಿದ್ಯಾರ್ಥಿಗಳಿಗೆ ಮೆಡಿಕಲ್ ಮತ್ತು ಇಂಜಿನಿಯರಿಂಗ್ ಓದುವ ಅವಕಾಶ ಕಲ್ಪಿಸಿದ್ದಾನೆ. ನನ್ನ ಶಿಷ್ಯನೊಬ್ಬ ಇಂದು ಪಿಯು ಕಾಲೇಜ್ ಸ್ಥಾಪಿಸುವ ಮೂಲಕ ಈ ಭಾಗದ ಗ್ರಾಮೀಣ ಬಡ ಮಕ್ಕಳಿಗೆ, ಅಲ್ಪಸಂಖ್ಯಾತರ ಮಕ್ಕಳಿಗೆ ಉನ್ನತ ಶಿಕ್ಷಣ ನೀಡುತ್ತಿರುವುದು ನನಗೆ ಹೆಮ್ಮೆ ಮತ್ತು ಸಂತಸ ತಂದಿದೆ. ಈ ಸಂಸ್ಥೆ ಇನ್ನಷ್ಟು ಎತ್ತರ ಮಟ್ಟಕ್ಕೆ ಬೆಳೆಯಲಿ ಎಂದು ಶುಭ ಹಾರೈಸಿದರು.
ಸಮಾರಂಭದಲ್ಲಿ ಮಾಜಿ ಶಾಸಕ ಶಹಾಜಹಾನ ಡೊಂಗರಗಾoವ, ಇದ್ರಿಸ್ ನಾಯಕವಾಡಿ ಮಾತನಾಡಿದರು.
ಸಮಾರಂಭದ ದಿವ್ಯ ಸಾನಿಧ್ಯ ವಹಿಸಿದ್ದ ಅಗಡಿಯ ಅಕ್ಕಿಮಠದ ಗುರುಲಿಂಗ ಸ್ವಾಮೀಜಿ ಆಶೀರ್ವಚನ ನೀಡಿ ಸನಾ ಪಿಯು ಕಾಲೇಜಿನ ಪ್ರಗತಿಗೆ ಶುಭ ಹಾರೈಸಿದರು. ಮುಸ್ಲಿಂ ಧರ್ಮ ಗುರುಗಳಾದ ಮುಫ್ತಿ ಹಬೀಬುಲ್ಲಾ, ಮೌಲಾನಾ ಅಬ್ಬಾಸ್ ಆಶೀರ್ವಚನ ನೀಡಿದರು.
ಈ ಸಂದರ್ಭದಲ್ಲಿ ಸನಾ ಪಿಯು ಕಾಲೇಜಿನಲ್ಲಿ ವ್ಯಾಸಂಗ ಮಾಡಿ ಮೆಡಿಕಲ್ ಮತ್ತು ಇಂಜಿನಿಯರಿಂಗ್ ಪದವಿ ಶಿಕ್ಷಣಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಮತ್ತು ಅವರ ಪಾಲಕರಿಗೆ ಕಾಲೇಜು ಆಡಳಿತ ಮಂಡಳಿಯ ವತಿಯಿಂದ ಸನ್ಮಾನಿಸಲಾಯಿತು. ಈ ವೇಳೆ ಕಾಂಗ್ರೆಸ್ ಮುಖಂಡ ಗಜಾನನ ಮಂಗಸೂಳಿ, ಪುರಸಭೆ ಸದಸ್ಯ ರಾವಸಾಬ ಐಹೊಳಿ, ಹರ್ಷದ ಗದ್ಯಾಳ, ಲಕ್ಷ್ಮಣ ಬಣಜವಾಡ, ಯೂನುಸ್ ಮುಲ್ಲಾ, ಅಸ್ಲಮ್ ನಾಲಬಂದ, ರಫೀಕ್ ಡಾಂಗೆ. ಸೈಯದ್ ಗಡ್ಡೇಕರ. ಸಾಜೀದ ಮತ್ತೆ. ರಿಯಾಜ್ ಸನದಿ. ಅಬ್ದುಲಅಜೀಜ ಮುಲ್ಲಾ. ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಸನಾ ಪಿಯು ಕಾಲೇಜಿನ ಸಂಸ್ಥಾಪಕ ಅಧ್ಯಕ್ಷ ಖಲೀಲ್ ಬಾಗವಾನ ಸ್ವಾಗತಿಸಿ ಪ್ರಸ್ತಾವಿಕವಾಗಿ ಮಾತನಾಡಿದರು. ವಿಜಯ ಹುದ್ದಾರ ಮತ್ತು ಸಂತೋಷ ಬಡಕಂಬಿ ನಿರೂಪಿಸಿದರು. ಖಾಲೀದ್ ಬಾಗವಾನ ವಂದಿಸಿದರು.

ಮುಸಲ್ಮಾನ ಬಾಂಧವರಲ್ಲಿ ಶಿಕ್ಷಣದ ಗುಣಮಟ್ಟ ಕಡಿಮೆ ಇದೆ. ಮುಸಲ್ಮಾನ ಬಾಂಧವರು ತಮ್ಮ ಮಕ್ಕಳಿಗೆ ಉತ್ತಮವಾದ ಶಿಕ್ಷಣ ನೀಡುವ ಮೂಲಕ ಅವರ ಒಳ್ಳೆಯ ಭವಿಷ್ಯವನ್ನ ರೂಪಿಸಬೇಕು. ಮಕ್ಕಳಿಗಾಗಿ ಆಸ್ತಿ ಮಾಡುವುದಕ್ಕಿಂತ ಮಕ್ಕಳನ್ನೇ ಆಸ್ತಿಯನ್ನಾಗಿ ಬೆಳೆಸಬೇಕು. ಶಿಕ್ಷಣ ಪಡೆದುಕೊಂಡರೆ ಇಡೀ ಕುಟುಂಬದ ಸವಾರ್ಂಗೀಣ ಅಭಿವೃದ್ಧಿಯಾಗುತ್ತದೆ. ನಿಮ್ಮ ಸಮುದಾಯದ ಮಕ್ಕಳ ವಿದ್ಯಾಭ್ಯಾಸಕ್ಕೆ ಯಾವುದೇ ರೀತಿಯ ಸಹಾಯ ಸಹಕಾರ ಮಾಡುತ್ತೇನೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕ್ಷೇತ್ರದ ಎಲ್ಲಾ ಮುಸ್ಲಿಂ ಬಾಂಧವರು ನನಗೆ ನೂರಕ್ಕೆ ನೂರರಷ್ಟು ಮತಗಳನ್ನು ನೀಡಿ ಬಹಳ ದೊಡ್ಡ ಅಂತರದಿಂದ ಗೆಲ್ಲಿಸಿದ್ದೀರಿ. ನಿಮ್ಮೆಲ್ಲರಿಗೆ ನಾನು ಚಿರಋಣಿಯಾಗಿದ್ದೇನೆ.

          ಲಕ್ಷ್ಮಣ ಸವದಿ. 
    ಮಾಜಿ ಡಿಸಿಎಂ ಹಾಗೂ ಶಾಸಕರು