ಮಕ್ಕಳಿಗೆ ಉತ್ತಮ ಸಂಸ್ಕಾರ- ಮೌಲ್ಯ ಕಲಿಸಲು ಕರೆ

ಸಂಜೆವಾಣಿ ವಾರ್ತೆ

ದಾವಣಗೆರೆ.ಸೆ.೧೦; ಮಕ್ಕಳಿಗೆ ಮೌಲ್ಯಗಳನ್ನು  ಕಲಿಸುವ ಅಗತ್ಯವಿದೆ ಎಂದು ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ವೀರೇಶ್ ಎಸ್. ಒಡೇನಪುರ ಅಭಿಪ್ರಾಯಪಟ್ಟರು.ನಗರದ ಕುವೆಂಪು ಕನ್ನಡ ಭವನದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಆಯೋಜಿಸಿದ್ದ ಈ ಸಾಲಿನ ‘ಗ್ರಾಮೀಣ ಸಿರಿ’ ಮತ್ತು ‘ನಗರ ಸಿರಿ’ ಪ್ರಶಸ್ತಿ ಪ್ರದಾನ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.ಮಕ್ಕಳ ಶಿಕ್ಷಣಕ್ಕಾಗಿ ಲಕ್ಷಾಂತರ ಹಣ ಚೆಲ್ಲುವ ಪೋಷಕರು, ಸಂಸ್ಕಾರ ನೀಡುವಲ್ಲಿ ಎಡವುತ್ತಿದ್ದಾರೆ. ಸಂಸ್ಕಾರವಿಲ್ಲದ ಶಿಕ್ಷಣ ವ್ಯರ್ಥ ಎಂಬುದನ್ನು ಪೋಷಕರು ಅರಿಯಬೇಕು. ಸಂಸ್ಕಾರ ಮಕ್ಕಳಿಂದ ಮಾತ್ರ ಪೋಷಕರ ಭವಿಷ್ಯವೂ ಸುರಕ್ಷಿತವಾಗಿರುತ್ತದೆ. ಇಲ್ಲವಾದಲ್ಲಿ ಪೋಷಕರು ತಮ್ಮ ಇಳಿ ವಯಸ್ಸಿನಲ್ಲಿ ಅನಾಥಾಶ್ರಮಕ್ಕೆ ಸೇರಿಕೊಳ್ಳಬೇಕಾಗುತ್ತದೆ ಎಂದು ಪೋಷಕರನ್ನು ಎಚ್ಚರಿಸಿದರು.ಇತ್ತೀಚೆಗಷ್ಟೇ ಹೊರದೇಶದಲ್ಲಿರುವ ಪುತ್ರ ತನ್ನ ತಂದೆ-ತಾಯಿ ಮರಣ ಹೊಂದಿದ್ದರೂ ಅವರನ್ನು ನೋಡಲು ಬಾರದೆ, ಪೋನ್ ಮಾಡಿದವರಿಗೆ ನೀವೆ ಅಂತ್ಯಕ್ರಿಯೆ ಮಾಡಿಕೊಳ್ಳಿ, ಇಲ್ಲವೇ ಎಲ್ಲಾದರೂ ಬಿಸಾಡಿ ಎಂದು ಹೇಳಿದ ಘಟನೆ ಸುದ್ದಿ ಮಾಧ್ಯಮದಲ್ಲಿ ಬಿತ್ತರವಾಗಿದ್ದು, ಮಾನವೀಯ ಮೌಲ್ಯಗಳು ಮರೆಯಾಗುತ್ತಿರುವುದಕ್ಕೆ ಇದು ಸಾಕ್ಷಿಯಾಗಿದೆ. ಇಂತಹ ಅಮಾನವೀಯ ವರ್ತನೆಗೆ ಕಾರಣ ಉತ್ತಮ ಸಂಸ್ಕಾರ ಸಿಗದಿರುವುದಾಗಿದೆ ಎಂದರು.ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಕನ್ನಡ ಮತ್ತು ಸಂಸ್ಕöÈತಿ ಇಲಾಖೆ ಸಹಾಯಕ ನಿರ್ದೇಶಕ ರವಿಚಂದ್ರ ಮಾತನಾಡಿ, ಹೊನ್ನಾಳಿಯಲ್ಲಿ ಸಾಂಸ್ಕöÈತಿಕ ಭವನ ನಿರ್ಮಾಣಕ್ಕೆ ಮನವಿ ಬಂದಿದ್ದು, ಮನವಿಯನ್ನು ಶಿಫಾರಸ್ಸು ಮಾಡಿ ಕೇಂದ್ರ ಕಚೇರಿಗೆ ಸಲ್ಲಿಸಲಾಗಿದೆ. ನ್ಯಾಮತಿಯಲ್ಲಿ ಸಾಂಸ್ಕೃತಿಕ ಭವನ ನಿರ್ಮಾಣಕ್ಕೆ 5 ಲಕ್ಷ ರೂಪಾಯಿಗಳ ಅನುದಾನ ಬಿಡುಗಡೆಯಾಗಿದೆ ಎಂದರು.ಸಿದ್ಧನ ಮಠದ ಜಾನಪದ ಅಶುಕವಿ, ರಾಜ್ಯೋತ್ಸವ ಪ್ರಶಸ್ತಿ ವಿಜೇತ ಯುಗಧರ್ಮ ರಾಮಣ್ಣ ಪ್ರಶಸ್ತಿ ಪ್ರದಾನ ಮಾಡಿದ ನಂತರ ಮಾತನಾಡಿ, ಶರಣರು, ಸಂತರು ಹುಟ್ಟಿದ ಕರುನಾಡಿನಲ್ಲಿ ಹುಟ್ಟಿರುವುದೇ ನಮ್ಮಗಳ ಪುಣ್ಯ. ನಾವು ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಡೆದರೆ, ಶಾಂತಿ, ಸೌಹಾರ್ದತೆ ನೆಲೆಸುತ್ತದೆ. ಉಸಿರು ನಿಂತ ಮೇಲೂ ನಮ್ಮ ಹೆಸರು ಉಳಿಯುವಂತಹ ಕೆಲಸಗಳನ್ನು ಮಾಡಬೇಕು. ಕನ್ನಡ ಭಾಷೆಯನ್ನು ಉಳಿಸಿ, ಬೆಳೆಸಲು ನಾವೆಲ್ಲಾ ಪಣತೊಡಬೇಕು ಎಂದರು.ಕಸಾಪ ಜಿಲ್ಲಾಧ್ಯಕ್ಷ ಬಿ. ವಾಮದೇವಪ್ಪ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಸಾಹಿತಿ ಎನ್.ಟಿ. ಎರ‍್ರಿಸ್ವಾಮಿ ಅಭಿನಂದನಾ ನುಡಿಗಳನ್ನಾಡಿದರು, ಸಂಘಟನಾ ಕಾರ್ಯದರ್ಶಿ ಸಿ.ಜಿ. ಜಗದೀಶ ಕೂಲಂಬಿ ಪ್ರಶಸ್ತಿ ಪುರಸ್ಕöÈತರನ್ನು ಪರಿಚಯಿಸಿದರು.ಕಾರ್ಯಕ್ರಮದಲ್ಲಿ ‘ಗ್ರಾಮೀಣ ಸಿರಿ’ ಪ್ರಶಸ್ತಿಯನ್ನು ಹೆಚ್.ಎಸ್. ಮುರುಗೇಂದ್ರಪ್ಪ, ಬಿ.ಎಂ. ಪರಿಮಳ ಕುರ್ಕಿ, ಕೆ. ಕೃಷ್ಣಮೂರ್ತಿ, ಎಂ.ಬಿ. ಉಷಾ ಮರಿಕುಂಟೆ, ಜಿ. ನಾಗಭೂಷಣ್, ಎ.ಬಿ. ಮಂಜಮ್ಮ, ಎಂ.ಟಿ. ತಿಮ್ಮಪ್ಪ, ಎಂ.ಜಿ. ಶಶಿಕಲಾ, ದುರ್ಗಮ್ಮ ದೊಡ್ಡೇರಿ, ಮಾಳೇರ ದುರ್ಗಪ್ಪ, ನಾಗರಾಜಪ್ಪ ಕತ್ತಿಗೆ, ಹಾಗೂ ಟಿ. ನಾಗರತ್ನ ಅವರಿಗೆ ಪ್ರದಾನ ಮಾಡಲಾಯಿತು. ‘ನಗರ ಸಿರಿ’ ಪ್ರಶಸ್ತಿಯನ್ನು ಕೆ. ಇಮಾಂ, ನಾ. ರೇವನ್ ಹಾಗೂ ವಿದುಷಿ ಡಿ.ಕೆ. ಮಾಧವಿ ಅವರಿಗೆ ನೀಡಿ ಗೌರವಿಸಲಾಯಿತು.ಹಾಗೂ ಎಸ್ಸೆಸ್ಸೆಲ್ಸಿ ಹಾಗೂ ದ್ವಿತೀಯ ಪಿಯುಸಿ ಕನ್ನಡ ಪರೀಕ್ಷೆಯಲ್ಲಿ ಜಿಲ್ಲೆಗೆ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮಾಡಲಾಯಿತು.