ಮಕ್ಕಳಿಗಾಗಿ ಪ್ರತ್ಯೇಕ ತೀವ್ರ ನಿಗಾ ಚಿಕಿತ್ಸಾ ಘಟಕ (ಐ.ಸಿ.ಯು) ಸ್ಥಾಪನೆಗೆ ಸೂಚನೆ

ವಿಜಯಪುರ, ಜೂ.4-ಕೋವಿಡ್ 3 ನೇ ಅಲೆಯಲ್ಲಿ ಹೆಚ್ಚು ಮಕ್ಕಳಿಗೆ ಸೋಂಕು ತಗಲುವ ಸಂಭವನೀಯವಿದ್ದು, ಮಕ್ಕಳಿಗಾಗಿಯೇ ಜಿಲ್ಲಾ ಆಸ್ಪತ್ರೆಯಲ್ಲಿ ಒಂದು ಪ್ರತ್ಯೇಕ (ಐ, ಸಿ, ಯು.) ತೀವ್ರ ನಿಗಾ ಚಿಕಿತ್ಸಾ ಘಟಕ ಸ್ಥಾಪನೆ ಮಾಡಲು ಜಿಲ್ಲಾಧಿಕಾರಿಗಳಾದ ಪಿ. ಸುನಿಲ್‍ಕುಮಾರ್ ಅವರು ಸೂಚಿಸಿದರು.
ಜಿಲ್ಲಾ ಆಸ್ಪತ್ರೆಗೆ ಇಂದು ಭೇಟಿ ನೀಡಿ ಕೊರೊನ ಮೂರನೇ ಅಲೆಯ ಪೂರ್ವಸಿದ್ಧತೆ ಬಗ್ಗೆ ಜಿಲ್ಲಾ ಶಸ್ತ್ರ ಚಿಕಿತ್ಸಕರು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು, ವೈದ್ಯರು ಹಾಗೂ ಇತರೆ ಅಧಿಕಾರಿಗಳೊಂದಿಗೆ ಚರ್ಚಿಸಿದರು.
ಈ ಸಂದರ್ಭದಲ್ಲಿ ಅವರು, ಹೊಸದಾಗಿ ಅಳವಡಿಸಲಿರುವ 13 ಕೆ.ಎಲ್ ಸಾಮಥ್ರ್ಯದ ದ್ರವ ಆಮ್ಲಜನಕ ಘಟಕವನ್ನು ಯಾವ ಸ್ಥಳದಲ್ಲಿ ಸ್ಥಾಪಿಸುವುದು ಸೂಕ್ತ ಎಂಬುದರ ಬಗ್ಗೆ ಜಿಲ್ಲಾಧಿಕಾರಿಗಳು ಜಿಲ್ಲಾ ಶಸ್ತ್ರಚಿಕಿತ್ಸಕರು ಹಾಗೂ ಇತರ ವೈದ್ಯರೊಂದಿಗೆ ಚರ್ಚಿಸಿದರು.
ಈ 3 ನೇ ಅಲೆಯಲ್ಲಿ ಹೆಚ್ಚು ಮಕ್ಕಳಿಗೆ ಸೋಂಕು ತಗಲುವ ಸಂಭವನೀಯವಿದ್ದು, ಮಕ್ಕಳಿಗಾಗಿಯೇ ಒಂದು ಪ್ರತ್ಯೇಕ 10 ಬೆಡ್ ಗಳ (ಐ, ಸಿ, ಯು.) ತೀವ್ರ ನಿಗಾ ಚಿಕಿತ್ಸಾ ಘಟಕ ಸ್ಥಾಪನೆ ಮಾಡಲು ಸೂಚಿಸಿದರು.
ಮುಂದಿನ ಅಲೆಯಲ್ಲಿ ಮಕ್ಕಳಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಆಕ್ಸಿಜನ್ ಸಿಲಿಂಡರ್ ಗಳನ್ನು ಖರೀದಿ ಮಾಡಿ ಇಟ್ಟುಕೊಳ್ಳುವಂತೆ ಅವರು ಸೂಚನೆ ನೀಡಿದರು.
ಕೊರೊನಾ ರೋಗಿಗಳನ್ನು ನಿಯಮಾನುಸಾರ ಭೇಟಿ ಮಾಡಿ ಅವರ ಆರೋಗ್ಯ ಸ್ಥಿತಿ ಬಗ್ಗೆ ಮಾಹಿತಿ ಪಡೆದ ಅವರು ಜಿಲ್ಲಾ ಆಸ್ಪತ್ರೆಗೆ ಪೂರೈಕೆಯಾದ ಆಕ್ಸಿಜನ್ ಕಾನ್ಸನ್ಟ್ರೇಟರ್ ಬಳಕೆಯ ಬಗ್ಗೆಯೂ ವೈದ್ಯರೊಂದಿಗೆ ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗೋವಿಂದ ರೆಡ್ಡಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಮಹೇಂದ್ರ ಕಾಪ್ಸೆ, ಜಿಲ್ಲಾ ಆಸ್ಪತ್ರೆ ಸರ್ಜನ್ ಶರಣಪ್ಪ ಕಟ್ಟಿ, ಡಾ, ಲಕ್ಕಣ್ಣವರ ಹಾಗೂ ಇತರ ಅಧಿಕಾರಿಗಳು ಉಪಸ್ಥಿತರಿದ್ದರು