ಮಕ್ಕಳಿಗಾಗಿ ಆರೋಗ್ಯ ನಂದನ ಯೋಜನೆ

ಬೆಂಗಳೂರು, ಆ. ೧೭- ಕೊರೊನಾ ಮೂರನೆ ಅಲೆಗೆ ಮಕ್ಕಳು ಹೆಚ್ಚು ಬಾಧಿತರಾಗುತ್ತಾರೆ ಎಂಬ ತಜ್ಞರ ಎಚ್ಚರಿಕೆ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಮಕ್ಕಳ ಆರೋಗ್ಯ ರಕ್ಷಣೆಗೆ ಮುಂದಾಗಿದ್ದು, ಮಕ್ಕಳ ಆರೋಗ್ಯ ತಪಾಸಣೆ ನಡೆಸಿ ರೋಗ ನಿರೋಧಕ ಶಕ್ತಿಯನ್ನು ಪತ್ತೆ ಮಾಡುವ “ಆರೋಗ್ಯ ನಂದನ” ಎಂಬ ವಿನೂತನ ಕಾರ್ಯಕ್ರಮವನ್ನು ಜಾರಿ ಮಾಡಲು ಸರ್ಕಾರ ಮುಂದಾಗಿದೆ.
ವಿಧಾನಸೌಧದಲ್ಲಿ ನಡೆದ ಕೊರೊನಾ ಸೋಂಕಿನಿಂದ ಗುಣಮುಖರಾದವರಲ್ಲಿ ಕ್ಷಯರೋಗವನ್ನು ಪತ್ತೆ ಮಾಡುವ ವಿಶೇಷ ಅಭಿಯಾನದ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್, ಮಕ್ಕಳ ಆರೋಗ್ಯ ತಪಾಸಣೆ, ರೋಗ ನಿರೋಧಕ ಶಕ್ತಿ, ಪತ್ತೆ ಮಾಡುವ ಆರೋಗ್ಯ ನಂದನ ಕಾರ್ಯಕ್ರಮಕ್ಕೆ ಇನ್ನೊಂದು ವಾರದಲ್ಲಿ ಚಾಲನೆ ನೀಡಲಾಗುವುದು ಎಂದರು.

Minister sudhakar meetting on tag and covid third wave meetting at v.soudha confrence hall Dr Sudarshan and other are seen Page 8


ಮುಖ್ಯಮಂತ್ರಿ ಬಸವರಾಜಬೊಮ್ಮಾಯಿ ಅವರು ಹಿಂದೆ ಹಾವೇರಿ ಮತ್ತು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾಗ ಎರಡೂ ಜಿಲ್ಲೆಗಳಲ್ಲೂ ಮಕ್ಕಳ ಆರೋಗ್ಯ ತಪಾಸಣೆ, ರೋಗ ನಿರೋಧಕ ಶಕ್ತಿಯನ್ನು ಪತ್ತೆ ಮಾಡುವ ವಾತ್ಸಲ್ಯ ಕಾರ್ಯಕ್ರಮವನ್ನು ಜಾರಿಗೊಳಿಸಿದ್ದರು. ಈ ಕಾರ್ಯಕ್ರಮದ ಯಶಸ್ವಿನಿಂದ ಪ್ರೇರಿತವಾಗಿ ಈ ಕಾರ್ಯಕ್ರಮವನ್ನು ಆರೋಗ್ಯ ನಂದನ ಹೆಸರಿನಲ್ಲಿ ಇಡೀ ರಾಜ್ಯಕ್ಕೆ ವಿಸ್ತರಿಸಲಾಗುತ್ತಿದೆ ಎಂದರು.
ಈ ಆರೋಗ್ಯ ನಂದನ ಕಾರ್ಯಕ್ರಮದಡಿ ರಾಜ್ಯದ ಒಂದೂವರೆ ಕೋಟಿಗೂ ಹೆಚ್ಚು ಮಕ್ಕಳ ಆರೋಗ್ಯ ತಪಾಸಣೆ ನಡೆಸಿ ಅವರ ರೋಗ ನಿರೋಧಕ ಶಕ್ತಿ ಪತ್ತೆಹಚ್ಚಿ, ರೋಗ ನಿರೋಧಕ ಶಕ್ತಿ ಕಡಿಮೆ ಇರುವ ಮತ್ತು ಅಪೌಷ್ಠಿಕತೆಯಿಂದ ಬಳಲುತ್ತಿರುವ ಮಕ್ಕಳಿಗೆ ಪೌಷ್ಠಿಕ ಆಹಾರವನ್ನು ನೀಡಲಾಗುವುದು ಎಂದರು.
ಆರೋಗ್ಯ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಜಂಟಿಯಾಗಿ ಈ ಆರೋಗ್ಯ ನಂದನ ಯೋಜನೆಯನ್ನು ಅನುಷ್ಠಾನಗೊಳಿಸಲಿದೆ ಎಂದು ಅವರು ಹೇಳಿದರು.
ಕ್ಷಯರೋಗ ಪತ್ತೆ
ರಾಜ್ಯದಲ್ಲಿ ಕೋವಿಡ್‌ನಿಂದ ಗುಣಮುಖರಾಗಿರುವವರಲ್ಲಿ ಕ್ಷಯರೋಗ ಪತ್ತೆ ಮಾಡುವ ಆಂದೋಲನವನ್ನು ನಿನ್ನೆಯಿಂದಲೇ ಆರಂಭಿಸಲಾಗಿದೆ. ಕೊರೊನಾ ಸೋಂಕು ಮುಕ್ತ ೨೮ ಲಕ್ಷ ಜನರನ್ನು ಕ್ಷಯರೋಗ ತಪಾಸಣೆಗೆ ಒಳಪಡಿಸಲಾಗುವುದು ಎಂದರು.
ಕೋವಿಡ್ ಕೂಡಾ ಶ್ವಾಸಕೋಶದ ಸೋಂಕು ರೋಗ. ಕ್ಷಯ ರೋಗ ಸಾಮಾನ್ಯವಾಗಿ ಶ್ವಾಸಕೋಶದ ಸೋಂಕಿನಿಂದ ಬರುತ್ತದೆ. ಹಾಗಾಗಿ ಯಾರೆಲ್ಲಾ ಕೋವಿಡ್‌ನಿಂದ ಗುಣಮುಖರಾಗಿದ್ದಾರೋ ಅಂತಹವರಲ್ಲಿ ಕ್ಷಯರೋಗ ಇದೆಯೇ ಎಂದು ಪತ್ತೆ ಮಾಡಲಾಗುವುದು ಎಂದರು.
ಇದುವರೆಗೂ ರಾಜ್ಯದಲ್ಲಿ ಕೋವಿಡ್ ಸೋಂಕಿನಿದ ಗುಣಮುಖರಾದ ೨೪ ಮಂದಿಯಲ್ಲಿ ಕ್ಷಯರೋಗ ಪತ್ತೆಯಾಗಿದೆ. ಹಾಗಾಗಿ ದೊಡ್ಡ ಮಟ್ಟದಲ್ಲಿ ಕ್ಷಯರೋಗ ಪತ್ತೆ ಆಂದೋಲನವನ್ನು ಆರಂಭಿಸಿದ್ದೇವೆ ಎಂದರು.
ಕ್ಷಯರೋಗದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಕೂಡಾ ಎಚ್ಚರವಹಿಸುವಂತೆ ಸೂಚನೆ ನೀಡಿದ್ದಾರೆ. ೨೦೨೫ರ ವೇಳೆಗೆ ಭಾರತ ಕ್ಷಯರೋಗಮುಕ್ತ ಆಗಬೇಕೆಂಬುದು ಪ್ರಧಾನಿಗಳ ಆಶಯ. ಅದರಂತೆ ಈ ಕ್ಷಯರೋಗಪತ್ತೆ ಆಂದೋಲನವನ್ನು ಹಮ್ಮಿಕೊಂಡಿದ್ದೇವೆ. ಕೋವಿಡ್ ಸೋಂಕಿನಿಂದ ಮುಕ್ತರಾಗಿರುವ ಸ್ವಯಂ ಪ್ರೇರಣೆ ಈ ಆಂದೋಲನದಲ್ಲಿ ಭಾಗಿಯಾಗಿ ಕ್ಷಯರೋಗ ತಪಾಸಣೆ ಮಾಡಿಸಿಕೊಂಡು ರೋಗ ನಿರ್ಮೂಲನೆಗೆ ಸಹಕರಿಸಬೇಕು ಎಂದು ಅವರು ಮನವಿ ಮಾಡಿದರು.
ಈ ವರ್ಷ ೧.೨೫ ಕೋಟಿ ಜನರನ್ನು ಕ್ಷಯರೋಗ ಪರೀಕ್ಷೆಗೆ ಒಳಪಡಿಸುವ ಗುರಿ ಹೊಂದಲಾಗಿದೆ. ಈಗಾಗಲೇ ೭೯,೯೩೮ ಜನರನ್ನು ತಪಾಸಣೆಗೆ ಒಳಪಡಿಸಲಾಗಿದೆ. ಆ ಪೈಕಿ ೨೭೧೪ ಜನರಿಗೆ ಕ್ಷಯರೋಗ ಪತ್ತೆಯಾಗಿದೆ ಎಂದು ಅವರು ಹೇಳಿದರು.
ಡಿಸೆಂಬರ್‌ಗೆ ಎಲ್ಲರಿಗೂ ಲಸಿಕೆ
ಡಿಸೆಂಬರ್ ಅಂತ್ಯದೊಳಗೆ ರಾಜ್ಯದ ಎಲ್ಲರಿಗೂ ಲಸಿಕೆ ನೀಡಿಕೆ ಸಂಪೂರ್ಣವಾಗಲಿದೆ. ರಾಜ್ಯದಲ್ಲಿ ಇದುವರೆಗೂ ೧೮ ವರ್ಷ ಮೇಲ್ಪಟ್ಟ ೩.೫೦ ಕೋಟಿ ಜನರಿಗೆ ಲಸಿಕೆ ನೀಡಲಾಗಿದೆ ಎಂದರು.
ಲಸಿಕೆ ಆಂದೋಲನವನ್ನು ಚುರುಕುಗೊಳಿಸಲು ಹೆಚ್ಚಿನ ಲಸಿಕೆ ನೀಡುವಂತೆ ಕೇಂದ್ರಕ್ಕೆ ಮನವಿ ಮಾಡಿದ್ದೇವೆ. ಮುಖ್ಯಮಂತ್ರಿ ಬಸವರಾಜಬೊಮ್ಮಾಯಿ ದೆಹಲಿಗೆ ತೆರಳಿದ್ದಾಗ ತಾವೂ ಕೂಡಾ ಕೇಂದ್ರ ಆರೋಗ್ಯ ಸಚಿವರನ್ನು ಭೇಟಿ ಮಾಡಿ ಹೆಚ್ಚಿನ ಲಸಿಕೆಗೆ ಮನವಿ ಮಾಡಿದ್ದೇವೆ ಎಂದರು.
ದೇಶದಲ್ಲಿ ಉತ್ಪಾದನೆಯಾಗುವ ಲಸಿಕೆಯಲ್ಲಿ ಶೇ. ೨೫ ರಷ್ಟು ಖಾಸಗಿ ವಲಯಕ್ಕೆ ಪೂರೈಕೆಯಾಗುತ್ತಿದೆ. ಹೀಗಾಗಿ ದೊಡ್ಡ ದೊಡ್ಡ ಕಂಪನಿಗಳವರು ತಮ್ಮ ಸಿಎಸ್‌ಆರ್ ನಿಧಿಯಲ್ಲಿ ಖರೀದಿ ಮಾಡಿ ಸರ್ಕಾರಕ್ಕೆ ಕೊಡುವಂತೆ ಮನವಿ ಮಾಡಿದ್ದೇವೆ. ಈ ಸಂಬಂಧ ಬೃಹತ್ ಉದ್ಯಮಿಗಳ ಮುಖ್ಯಸ್ಥರ ಸಭೆಯನ್ನು ಇಂದು ನಡೆಸುತ್ತಿರುವುದಾಗಿ ಅವರು ಹೇಳಿದರು.
ಕೊರೊನಾ ತಡೆ ಸಂಬಂಧ ರಾಜ್ಯ ಮಟ್ಟದ ತಾಂತ್ರಿಕ ಸಲಹಾ ಸಮಿತಿ ಮಾದಿರಿಯಲ್ಲೆ ರಾಜ್ಯದ ೩೦ ಜಿಲ್ಲೆಗಳಲ್ಲೂ ಕೋವಿಡ್ ತಾಂತ್ರಿಕ ಸಲಹಾ ಸಮಿತಿ ರಚಿಸಲಾಗುವುದು. ಈ ಸಮಿತಿಗಳು ಆಯಾ ಜಿಲ್ಲೆಯ ಸೋಂಕಿನ ಪ್ರಮಾಣದ ಆಧಾರದ ಮೇಲೆ ಕೈಗೊಳ್ಳಬೇಕಾಗಿರುವ ಕ್ರಮಗಳ ಬಗ್ಗೆ ಜಿಲ್ಲಾಡಳತಕ್ಕೆ ಸಲಹೆ ನೀಡುತ್ತೇವೆ ಎಂದರು.
ಬಿಬಿಎಂಪಿಯ ಆರೋಗ್ಯ ವಿಭಾಗವನ್ನು ಆರೋಗ್ಯ ಇಲಾಖೆಯ ಸುಪರ್ದಿಗೆ ತೆಗೆದುಕೊಳ್ಳುವ ಬಗ್ಗೆಯೂ ಚಿಂತನೆಗಳು ಇದೆ ಎಂದು ಅವರು ಹೇಳಿದರು.
ಆತ್ಮಹತ್ಯೆ ಬೇಡ
ಕೋವಿಡ್ ಸೋಂಕಿಗೆ ಹೆದರಿ ಮಂಗಳೂರಿನಲ್ಲಿ ನಿನ್ನೆ ರಾತ್ರಿ ದಂಪತಿಗಳಿಬ್ಬರು ಆತ್ಮಹತ್ಯೆ ಮಾಡಿಕೊಂಡಿರುವುದು ನೋವು ತಂದಿದೆ. ಸೋಂಕು ಬಂದ ಕೂಡಲೇ ಸಾವಾಗಲ್ಲ. ಯಾರೂ ಹೆದರುವುದು ಬೇಡ. ಸರ್ಕಾರ ಜನರ ಜತೆ ಇದೆ. ಆತ್ಮಹತ್ಯೆಯಂತಹ ಪ್ರಯತ್ನ ಮಾಡಬೇಡಿ ಎಂದು ಅವರು ಇದೇ ಸಂದರ್ಭದಲ್ಲಿ ಮನವಿ ಮಾಡಿದರು.