ಮಕ್ಕಳಿಂದ ಪೋಷಕರಿಗೆ 1.61 ಲಕ್ಷ ಪತ್ರ

ಬೀದರ:ಏ.9: ‘ಕೋವಿಡ್-19 ಲಸಿಕೆ ಹಾಕಿಸಿಕೊಳ್ಳುವಂತೆ ಜಿಲ್ಲೆಯ ಪ್ರಾಥಮಿಕ, ಪ್ರೌಢ ಶಾಲೆ ಮತ್ತು ಕಾಲೇಜುಗಳ 1,61,784 ವಿದ್ಯಾರ್ಥಿ ಗಳು ತಮ್ಮ ಪಾಲಕ, ಪೋಷಕರಿಗೆ ಪತ್ರಗಳನ್ನು ಬರೆದಿದ್ದು, ಒಟ್ಟು 5,430 ಪಾಲಕರು ಲಸಿಕೆ ಪಡೆದಿದ್ದಾರೆ’ ಎಂದು ಮಕ್ಕಳ ರಕ್ಷಣಾಧಿಕಾರಿ ಗೌರಿಶಂಕರ ಪರತಾಪೂರೆ ತಿಳಿಸಿದ್ದಾರೆ.

’45ರಿಂದ 59 ವಯಸ್ಸಿನ ಗಂಡಾಂತರ ಕಾಯಿಲೆ ಉಳ್ಳವರು ಮತ್ತು 60 ವಯಸ್ಸಿನ ಮೇಲ್ಪಟ್ಟವರು ಹತ್ತಿರದ ಸರ್ಕಾರಿ ಆಸ್ಪತ್ರೆಯಲ್ಲಿ ಕೋವಿಡ್-19 ಲಸಿಕೆಯನ್ನು ಉಚಿತವಾಗಿ ಪಡೆಯಲು ಸರ್ಕಾರ ಅವಕಾಶ ನೀಡಿದೆ. ಸುಳ್ಳು ವದಂತಿಗಳಿಂದ ಜನರು ಆರೋಗ್ಯ ಕೇಂದ್ರಗಳಿಗೆ ಲಸಿಕೆಯನ್ನು ಪಡೆಯಲು ಪೂರ್ಣ ಪ್ರಮಾಣದಲ್ಲಿ ಬರುತ್ತಿಲ್ಲ. ಹಾಗಾಗಿ ಶಾಲಾ ಮಕ್ಕಳಿಗೆ ಕೋವಿಡ್-19 ಲಸಿಕೆಯ ಬಗ್ಗೆ ಮಾಹಿತಿ ನೀಡಿ, ಅವರ ಮೂಲಕ ಪಾಲಕ, ಪೋಷಕರಿಗೆ ಪತ್ರವನ್ನು ಬರೆದು ಮನವೊಲಿಸಿ, ಲಸಿಕೆ ಹಾಕಿಸಿಕೊಳ್ಳುವಂತೆ ಮಾಡಬಹುದು.ಈ ನಿಟ್ಟಿನಲ್ಲಿ ಮಕ್ಕಳಿಂದ ‘ಪತ್ರಾಂದೋಲನ’ ವಿನೂತನ ಕಾರ್ಯ ಕ್ರಮ ಹಮ್ಮಿಕೊಳ್ಳುವಂತೆ ಜಿಲ್ಲಾಧಿಕಾರಿ ತಿಳಿಸಿರುತ್ತಾರೆ’ ಎಂದಿದ್ದಾರೆ.
‘ಪತ್ರಾಂದೋಲನ ಕಾರ್ಯಕ್ರಮ ವನ್ನು ಎಲ್ಲಾ ಸರ್ಕಾರಿ, ಅನುದಾನಿತ, ಅನುದಾನ ರಹಿತ ಪ್ರಾಥಮಿಕ, ಪ್ರೌಢ ಶಾಲೆಗಳಲ್ಲಿ ಹಮ್ಮಿಕೊಳ್ಳುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕರಿಗೆ ಪತ್ರ ಬರೆಯಲಾಗಿದೆ. ಅದರಂತೆ ಶಾಲೆ- ಕಾಲೇಜುಗಳ ಮಕ್ಕಳು ಕೋವಿಡ್-19 ಲಸಿಕೆ ಹಾಕಿಸಿಕೊಳ್ಳುವಂತೆ ತಮ್ಮ ಪೋಷಕರಿಗೆ ಪತ್ರ ಬರೆದಿದ್ದಾರೆ’ ಎಂದು ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.