ಮಕ್ಕಳಿಂದ ‘ಕೋಟಿ ಕಂಠ ಗಾಯನ’

ಕೋಲಾರ,ಅ,೨೯- ಕನ್ನಡ ನಾಡು,ನುಡಿಯ ರಕ್ಷಣೆಗೆ ನಾವೆಲ್ಲಾ ಸಂಕಲ್ಪ ಮಾಡೋಣ, ಕನ್ನಡವನ್ನೇ ಮಾತನಾಡೋಣ ಎಂದು ಸಾರಿ ಹೇಳೋಣ ಎಂದು ತಾಲ್ಲೂಕಿನ ಅರಾಭಿಕೊತ್ತನೂರು ಸರ್ಕಾರಿ ಪ್ರೌಢಶಾಲೆ ಮುಖ್ಯಶಿಕ್ಷಕ ಸಿ.ಎನ್.ಪ್ರದೀಪ್ ಕುಮಾರ್ ಮಕ್ಕಳಿಗೆ ಕಿವಿಮಾತು ಹೇಳಿದರು.
ಶಾಲೆಯ ಆವರಣದಲ್ಲಿ ‘ಕೋಟಿ ಕಂಠ ಗಾಯನ’ ಕಾರ್ಯಕ್ರಮದ ಭಾಗವಾಗಿ ಸರ್ಕಾರದ ನಿರ್ದೇಶನದಂತೆ ನಾಡಗೀತೆ, ಕನ್ನಡ ಡಿಂಡಿಮವಾ, ಉದಯವಾಗಲಿ ಚೆಲುವ ಕನ್ನಡ ನಾಡು, ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು ಸೇರಿದಂತೆ ಒಟ್ಟು ೬ ಗೀತೆಗಳ ಗಾಯನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.
ಕೋಟಿ ಕಂಠ ಗಾಯನ ಈ ಹೆಸರೇ ಅತ್ಯಂತ ಸುಂದರ ಹಾಗೂ ಹೃದಯತುಂಬಿ ಬರುವ ಪದವಾಗಿದೆ, ಕನ್ನಡ ನಾಡಿನ ಅತ್ಯಂತ ಪ್ರಸಿದ್ದ ಗೀತೆಗಳನ್ನು ಒಟ್ಟಾಗಿ ಹಾಡುವ ಅವಕಾಶ ಮಕ್ಕಳು ಸೇರಿದಂತೆ ನಮಗೆ ಸಿಕ್ಕಿದೆ ಎಂದರು.
ಪ್ರತಿಯೊಬ್ಬ ವಿದ್ಯಾರ್ಥಿಯೂ ಇತರೆ ಭಾಷೆ ಕಲಿಯುವುದು ತಪ್ಪಲ್ಲ, ಆದರೆ ಕನ್ನಡವನ್ನೇ ಮಾತನಾಡುವ ಸಂಕಲ್ಪ ಮಾಡಬೇಕು, ಕನ್ನಡ ನಾಡು,ನುಡಿ,ನೆಲಜಲಕ್ಕೆ ಧಕ್ಕೆ ಎದುರಾದಾಗ ಪ್ರಶ್ನಿಸುವ ಶಕ್ತಿ ಪಡೆದುಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಕಾರ್ಯಕ್ರಮದಲ್ಲಿ ಕನ್ನಡ ಶಿಕ್ಷಕ ವೆಂಕಟರೆಡ್ಡಿ, ಮಕ್ಕಳಿಗೆ ಕನ್ನಡ ನಾಡು,ನುಡಿಯ ಕುರಿತ ಪ್ರತಿಜ್ಞಾವಿಧಿ ಬೋಧಿಸಿದರು. ಈ ಸಂದರ್ಭದಲ್ಲಿ ಹಿಂದಿ ಶಿಕ್ಷಕಿ ಸಿದ್ದೇಶ್ವರಿ, ಕೋಟಿ ಕಂಠ ಗಾಯನ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು.
ಈ ಸಂಧರ್ಭದಲ್ಲಿ ಶಿಕ್ಷಕರಾದ ಎಂ.ಆರ್.ಗೋಪಾಲಕೃಷ್ಣ, ಭವಾನಿ, ಶ್ವೇತಾ,ಸುಗುಣಾ,ಫರೀದಾ ಚೈತ್ರಾ, ಶ್ರೀನಿವಾಸಲು, ಡಿ.ಚಂದ್ರಶೇಖರ್,ಗ್ರಾ.ಪಂ ಸಾಕ್ಷರತಾ ಸಮಿತಿಯ ಅನಿತಾ, ಗ್ರಂಥಾಲಯ ಸಿಬ್ಬಂದಿ ನವೀನ್ ಮತ್ತಿತರರು ಉಪಸ್ಥಿತರಿದ್ದು, ಗಾಯನದಲ್ಲಿ ಪಾಲ್ಗೊಂಡರು.