ಮಕ್ಕಳಲ್ಲೂ ಸೋಂಕಿನ ಪ್ರಮಾಣ ಏರಿಕೆ ತಜ್ಞರ ಕಳವಳ

ಬೆಂಗಳೂರು,ಮಾ. ೨೪- ರಾಜ್ಯದಲ್ಲಿ ಮಹಾಮಾರಿ ಕೊರೊನಾ ೨ನೇ ಹಂತದ ಭೀತಿ ಸೃಷ್ಟಿಸಿರುವಾಗಲೇ ರಾಜ್ಯದಲ್ಲಿ ಮಕ್ಕಳಿಗೂ ಕೊರೊನಾ ಸೋಂಕು ಕಾಣಿಸಿಕೊಂಡಿರುವುದು ಇನ್ನಷ್ಟು ಆತಂಕಕ್ಕೆ ಕಾರಣವಾಗಿದೆ.
೧ ರಿಂದ ೧೦ ವರ್ಷದೊಳಗಿನ ಮಕ್ಕಳಲ್ಲಿ ಸೋಂಕಿನ ಪ್ರಕರಣ ಹೆಚ್ಚಾಗಿದೆ ಎಂದು ರಾಜ್ಯಸರ್ಕಾರ ನಡೆಸಿದ ಅಧ್ಯಯನದಿಂದ ಈ ಅಂಕಿ-ಅಂಶ ತಿಳಿದು ಬಂದಿದೆ.
ಮಾ. ೧೪ ರಿಂದ ೨೧ರವರೆಗೆ ಬೆಂಗಳೂರಿನಲ್ಲಿ ೧೬೦ ಪ್ರಕರಣಗಳು ದಾಖಲಾಗಿವೆ. ಅದರಲ್ಲೂ ಭಾನುವಾರ ಮತ್ತು ಶನಿವಾರದಂದು ಕ್ರಮವಾಗಿ ೩೩-೩೨ ಪ್ರಕರಣಗಳು ದಾಖಲಾಗಿವೆ.
ಈ ಪ್ರಮಾಣವನ್ನು ರಾಜ್ಯದ ಮಟ್ಟಿಗೆ ಗಮನಿಸುವುದಾದರೆ ೨ ವಾರಗಳ ಅವಧಿಯಲ್ಲಿ ೨೬೭ ಮಕ್ಕಳಿಗೆ ಸೋಂಕು ಕಾಣಿಸಿಕೊಂಡಿದೆ ಎಂದು ಕೋವಿಡ್-೧೯ ವಾರ್ ರೂಂ ಅಂಕಿ-ಅಂಶ ಬಿಡುಗಡೆ ಮಾಡಿದೆ.
ಕಳೆದ ವರ್ಷ ಜೂ. ೨೦,೨೦೨೦ರಲ್ಲಿ ಕೇವಲ ೧೬ ಮಂದಿ ಮಕ್ಕಳಿಗೆ ಸೋಂಕು ಕಾಣಿಸಿಕೊಂಡಿತ್ತು. ಇದು ಕೋವಿಡ್‌ನ ಸೂಕ್ತ ನಡವಳಿಕೆಯ ಕೊರತೆಯಿಂದಾಗಿ ಸೋಂಕು ಹೆಚ್ಚಳವಾಗಲು ಕಾರಣವಾಗಿದೆ ಎಂದು ತಜ್ಞರು ವಿಶ್ಲೇಷಿಸಿದ್ದಾರೆ.
ತಂದೆ ಅಥವಾ ಸಂಬಂಧಿಕರಿಂದ ೨೦೨೦ರಲ್ಲಿ ಹೆಚ್ಚು ಮಕ್ಕಳಿಗೆ ಸೋಂಕು ಕಾಣಿಸಿಕೊಂಡಿದೆ. ಮಕ್ಕಳು ಕುಟುಂಬದ ಜತೆ ಪ್ರಯಾಣ ಮಾಡುವ ಸಂದರ್ಭದಲ್ಲಿ ಸೋಂಕಿತರ ಸಂಪರ್ಕದಿಂದಾಗಿ ವೈರಾಣು ತಗುಲಿರಬಹುದು. ಈಗ ಇದೇ ಪರಿಸ್ಥಿತಿ ಇದೆ ಎಂದು ರಾಜ್ಯ ತೀವ್ರ ಆರೈಕೆ ಘಟಕದ ವೈದ್ಯ ಡಾ.
ಅನೂಪ್ ಅಮರ್‌ನಾಥ್ ಹೇಳಿದ್ದಾರೆ.
ಕೋವಿಡ್ ನಿಯಮಾವಳಿಗಳನ್ನು ನಿರ್ಲಕ್ಷ್ಯ ಮಾಡಿರುವುದರಿಂದ ಸೋಂಕು ಹೆಚ್ಚಳವಾಗಲು ಕಾರಣವಾಗಿದೆ. ಕುಟುಂಬದ ಎಲ್ಲ ಸದಸ್ಯರಿಗೂ ಸೋಂಕು ತಗುಲಿರುವುದನ್ನು ನಾವು ನೋಡುತ್ತಿದ್ದೇವೆ. ಅಂದರೆ ತಾತನಿಂದ ಹಿಡಿದು ಮೊಮ್ಮಕ್ಕಳವರೆಗೂ ಸೋಂಕಿನ ಪ್ರಕರಣಗಳು ಹೆಚ್ಚಾಗುತ್ತಿವೆ ಎಂದು ಅವರು ಹೇಳಿದ್ದಾರೆ.
ಬಿಬಿಎಂಪಿ ಆಯುಕ್ತ ಎನ್. ಮಂಜುನಾಥ್ ಪ್ರಸಾದ್ ಪ್ರತಿಕ್ರಿಯೆ ನೀಡಿ ಮನೆಯಲ್ಲಿರುವವರಿಗೂ ಕೊರೊನಾ ಸೋಂಕು ತಗುಲಿರುವುದು ಆಶ್ಚರ್ಯಕ್ಕೆ ಕಾರಣವಾಗಿದೆ. ಜನರು ಸಮರ್ಪಕ ರೀತಿಯಲ್ಲಿ ತಮ್ಮನ್ನು ತಾವೇ ಐಸೋಲೇಷನ್‌ಗೆ ಒಳಗಾಗಿರುವುದೇ ಸೋಂಕು ಹೆಚ್ಚಳಕ್ಕೆ ಕಾರu ಎಂದರು.
ಇದೇ ವೇಳೆ ಗರ್ಭಿಣಿಯರಲ್ಲೂ ಸೋಂಕಿನ ಪ್ರಕರಣಗಳು ಏರಿಕೆಯಾಗುತ್ತಿವೆ. ಕಳೆದ ವರ್ಷ ೨೨೯ ಗರ್ಭಿಣಿಯರಿಗೆ ಸೋಂಕು ಕಾಣಿಸಿಕೊಂಡಿತ್ತು ಎಂದು ವಾಣಿವಿಲಾಸ್ ಆಸ್ಪತ್ರೆ ಅಂಕಿ-ಅಂಶ ನೀಡಿದೆ.
ಆದರೆ, ಈಗ ಗರ್ಭಿಣಿಯರಿಗೆ ಯಾವುದೇ ಪ್ರಕರಣಗಳು ದಾಖಲಾಗಿಲ್ಲ. ಫೆ.೧೮ ರಂದು ಗರ್ಭಿಣಿಗೆ ಸೋಂಕು ತಗುಲಿತ್ತು. ಅದಾದ ಬಳಿಕ ಪ್ರತಿದಿನ ೨ ರಿಂದ ೩ ಪ್ರಕರಣಗಳು ದಾSಲಾಗುತ್ತಿವೆ ಎಂದು ವಾಣಿವಿಲಾಸ್ ಆಸ್ಪತ್ರೆಯ ವೈದ್ಯಕೀಯ ವರಿಷ್ಠಾಧಿಕಾರಿ ಗೀತಾ ಶಿವಮೂರ್ತಿ ತಿಳಿಸಿದ್ದಾರೆ.
ಕಳೆದ ವರ್ಷ ಹಾಟ್‌ಸ್ಪಾಟ್ ಕೇಂದ್ರಗಳಾದ ಪಾದರಾಯನಪುರದಿಂದ ದಾಖಲಾಗಿತ್ತು. ಆದರೆ ಈ ವರ್ಷ ಬೆಂಗಳೂರಿನಾದ್ಯಂತ ಪ್ರಕರಣಗಳು ದಾಖಲಾಗುತ್ತಿರುವುದು ಆತಂಕಕ್ಕೆ ಎಡೆ ಮಾಡಿಕೊಟ್ಟಿದೆ.