ಮಕ್ಕಳಲ್ಲೂ ಮೂತ್ರಪಿಂಡದಲ್ಲಿನ ಕಲ್ಲುಗಳ ಸಮಸ್ಯೆ ; ಡಾ. ಎಚ್.ಎನ್. ನವೀನ್ 

ಸಂಜೆವಾಣಿ ವಾರ್ತೆ

ದಾವಣಗೆರೆ.ಫೆ.29: ವಯಸ್ಕರಂತೆ ಮಕ್ಕಳಲ್ಲೂ ಮೂತ್ರಪಿಂಡದಲ್ಲಿನ ಕಲ್ಲುಗಳ ಸಮಸ್ಯೆ ಕಾಣಿಸಿಕೊಳ್ಳಬಹುದು ಎಂದು ಎಸ್.ಎಸ್.ಹೈಟೆಕ್ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಯೂರಾಲಜಿ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಎಚ್.ಎನ್. ನವೀನ್ ತಿಳಿಸಿದರು. ಬಾಪೂಜಿ ಮಕ್ಕಳ ಆರೋಗ್ಯ ಸಂಸ್ಥೆ ಮತ್ತು ಸಂಸೋಧನಾ ಕೇಂದ್ರದಲ್ಲಿ ವಿವೇಕ್ ಪೋಷಕರ ಆರೋಗ್ಯ ಕಾರ್ಯಾಗಾರದಡಿ ಮಕ್ಕಳ ಮೂತ್ರಪಿಂಡದಲ್ಲಿ ಕಲ್ಲುಗಳು-ಕಾರಣ ಮತ್ತು ಪರಿಹಾರ ವಿಷಯವಾಗಿ ವಿಶೇಷ ಉಪನ್ಯಾಸ ನೀಡಿದ ಅವರು, ಮೂತ್ರಪಿಂಡದಲ್ಲಿನ ಕಲ್ಲುಗಳು ವಯಸ್ಕರಂತೆ ಮಕ್ಕಳು ಮಾತ್ರವಲ್ಲ ಶಿಶು ಗಳಲ್ಲೂ ಕಾಣಿಸಿಕೊಳ್ಳಬಹುದು ಎಂದರು.ಪ್ರತಿ ನಿತ್ಯ ಆಹಾರದಲ್ಲಿ ಹೆಚ್ಚಿನ ಉಪ್ಪು ಬಳಸುವುದರಿಂದ ಹೆಚ್ಚಿನ ಮಕ್ಕಳಲ್ಲಿ ಮೂತ್ರಪಿಂಡದಲ್ಲಿ ಕಲ್ಲುಗಳ ಸಮಸ್ಯೆ ಕಂಡು ಬರುತ್ತದೆ ಎಂಬುದು ಸಾಕಷ್ಟು ಪುರಾವೆಗಳಿವೆ. ಸಾಮಾನ್ಯವಾಗಿ ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಮೂತ್ರದ ಕಲ್ಲುಗಳ ಹರಡುವಿಕೆಯು ಬದಲಾಗುತ್ತದೆ. ಕರಾವಳಿ, ಉತ್ತರ ಮತ್ತು ಮಧ್ಯ ಕರ್ನಾಟಕ ಭಾಗದಲ್ಲಿ ಈ ಸಮಸ್ಯೆ ಹೆಚ್ಚಾಗಿ ಕಂಡು ಬರುತ್ತದೆ ಎಂದು ತಿಳಿಸಿದರು.ಅನುವಂಶಿಕತೆ, ಪರಿಸರ, ಜೀವನಶೈಲಿ, ಮೂತ್ರಪಿಂಡದಲ್ಲಿ ಕಲ್ಲುಗಳ ರಚನೆ, ಕಲ್ಲಿನ ಪ್ರತಿಬಂಧಕ ಅಂಶಗಳ ನಡುವೆ ಅಸಮತೋಲನದಿಂದ ಸಮಸ್ಯೆ ಉಂಟಾಗುತ್ತದೆ. ಆರ್ದ್ರೀಕರಣ, ಅತಿ ಆರ್ದ್ರೀಕರಣ, ಬೀಜಿಕರಣ. ಸ್ಪಟಿಕ ಬೆಳವಣಿಗೆ, ಸ್ಟಟಿಕ ಧಾರಣೆ, ಕಲ್ಲಿನ ರಚನೆಯ ವಿಧಾನದಿಂದ ಹರಳುಗಳು ರೂಪುಗೊಳ್ಳುತ್ತವೆ. ಸ್ಥಳದ ಮತ್ತು ಕಲ್ಲಿನ ಮಿಶ್ರಣದ ಮೇಲೆ ಕಲ್ಲುಗಳ ವರ್ಗೀಕರಣ ಮಾಡಲಾಗುತ್ತದೆ ಎಂದು ಮಾಹಿತಿ ನೀಡಿದರು.ಕೆಳಗಿನ ಬೆನ್ನು, ಬದಿಗಳಲ್ಲಿ ತೀವ್ರವಾದ ನೋವು, ಆಗಾಗೆ ವಾಂತಿ, ಮೂತ್ರ ವಿಸರ್ಜನೆ, ವಾಕರಿಕೆ, ವಾಂತಿ, ಮೂ ತ್ರದಲ್ಲಿ ರಕ್ತ ಹೋಗುವಿಕೆ, ಜ್ವರದೊಂದಿಗೆ ಮೂತ್ರದ ಸೋಂಕು… ಇವು ಮೂತ್ರಪಿಂಡದಲ್ಲಿನ ಕಲ್ಲುಗಳ ರೋಗದ ಲಕ್ಷಣಗಳು. ರಕ್ತ ಪರೀಕ್ಷೆ, ಮೂತ್ರ ವಿಶ್ಲೇಷಣೆ, ಕಿಬ್ಬೊಟ್ಟೆಯ ಎಕ್ಸ್‌ರೇ, ಮೂತ್ರಪಿಂಡದ ಶ್ರವಣಾತೀತ ಪರೀಕ್ಷೆ, ಕಲ್ಲಿನ ವಿಶ್ಲೇಷಣೆ ಇತರೆ ಪರೀಕ್ಷಾ ವಿಧಾನಗಳ ಮೂಲಕ ಮೂತ್ರಪಿಂಡದಲ್ಲಿನ ಕಲ್ಲುಗಳಿರುವುದು, ಸಮಸ್ಯೆಯನ್ನ ಪತ್ತೆ ಹಚ್ಚಲಾಗುತ್ತದೆ ಎಂದು ತಿಳಿಸಿದರು.