ಮಕ್ಕಳಲ್ಲಿ ಹೆಚ್ಚಾಗುತ್ತಿದೆ ಮೊಬೈಲ್ ಗೀಳು

 ದಾವಣಗೆರೆ.ಆ.೧; ಒಂದೆಡೆ ಹಿರಿಯರು ಓದುವ ಹವ್ಯಾಸ ಮರೆತು, ಟಿವಿ, ಮೊಬೈಲ್ ಮತ್ತು ಲ್ಯಾಪ್‌ಟಾಪ್‌ಗಳಲ್ಲೇ ಹೆಚ್ಚು ಸಮಯ ಕಳೆಯುತ್ತಿದ್ದು, ಅವರನ್ನು ನೋಡುವ ಮಕ್ಕಳೂ ಓದುವ ಹವ್ಯಾಸ ಬಿಟ್ಟು ಮೊಬೈಲ್ ಗೀಳು ಅಂಟಿಸಿಕೊಂಡಿದ್ದಾರೆ ಎಂದು ದಾವಣಗೆರೆ ಹರಿಹರ ನಗರಾಭಿವೃದ್ಧಿ ಪ್ರಾಕಾರದ ಅಧ್ಯಕ್ಷ ಕೆ.ಎಂ. ಸುರೇಶ್ ವಿಷಾದಿಸಿದರು.ನಗರದ ವಿದ್ಯಾನಗರ ಮುಖ್ಯ ರಸ್ತೆಯ ಕುವೆಂಪು ಕಲಾ ಭವನದಲ್ಲಿ  ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಹಾಗೂ ವಿವಿಧ ಸಂಘಸಂಸ್ಥೆಗಳು ಹಮ್ಮಿಕೊಂಡಿದ್ದ ಕಥಾ ಸಂಕಲನ ಬಿಡುಗಡೆ ಸಮಾರಂಭ ಉದ್ಘಾಟಿಸಿ ಮಾತನಾಡಿ, ಇತ್ತೀಚೆಗೆ ಮಕ್ಕಳು ಮೊಬೈಲ್ ಗೇಮಿಂಗ್‌ನಲ್ಲಿ ಹೆಚ್ಚು ಸಮಯ ಕಳೆಯುತ್ತಿದ್ದು, ತಂದೆ-ತಾಯಿಗಳಿಗೆ ಮೊಬೈಲ್ ರಿಚಾರ್ಜ್ ಮಾಡುವುದೇ ದೊಡ್ಡ ಕೆಲಸವಾಗಿದೆ ಎಂದು ಹೇಳಿದರು.ಚಿಕ್ಕ ಮಕ್ಕಳು ನಾವು ಹೇಳಿದ್ದನ್ನು ಕೇಳುವುದಿಲ್ಲ. ಆದರೆ ನಾವು ಮಾಡಿದ್ದನ್ನೇ ಮಾಡುತ್ತಾರೆ. ಹೀಗಾಗಿ ಮಕ್ಕಳು ಉತ್ತಮ ಹವ್ಯಾಸಗಳನ್ನು ಬೆಳೆಸಿಕೊಳ್ಳಬೇಕೆಂದರೆ ಮನೆಯಲ್ಲಿ ಹಿರಿಯರು, ಪೋಷಕರು ಸಹ ಅಂತಹ ಹವ್ಯಾಸಗಳನ್ನು ಹೊಂದಿರಬೇಕು. ದಕ್ಕೆ ಓದುವ ಅಭ್ಯಾಸ ಕೂಡ ಹೊರತಾಗಿಲ್ಲ. ಮನೆಯಲ್ಲಿ ಹಿರಿಯರು ಪ್ರತಿನಿತ್ಯ ಪುಸ್ತಕಗಳನ್ನು ಓದುತ್ತಿದ್ದರೆ, ಮಕ್ಕಳು ಸಹ ಓದುವುದನ್ನು ರೂಢಿ ಮಾಡುಕೊಳ್ಳುತ್ತಾರೆ ಎಂದು ಅಭಿಪ್ರಾಯಪಟ್ಟರು.ಎಲ್ಲರೂ ಹೆಚ್ಚಾಗಿ ಮೊಬೈಲ್, ಇಂಟರ್‌ನೆಟ್ ಬಳಸುತ್ತಿರುವುದು ತಪ್ಪೇನೂ ಅಲ್ಲ. ಇಂದಿನ ಪರಿಸ್ಥಿತಿಯಲ್ಲಿ ಅವೆಲ್ಲವೂ ಬೇಕು. ಆದರೆ, ಯೂಟ್ಯೂಬ್, ಸಾಮಾಜಿಕ ಜಾಲತಾಣಗಳಲ್ಲಿ ನಮಗೆ ಬೇಕರುವ ಹಾಗೂ ಉತ್ತಮ ಅಂಶಗಳನ್ನು ಮಾತ್ರ ಆಯ್ಕೆ ಮಾಡಿಕೊಂಡು, ಅಳವಡಿಸಿಕೊಳ್ಳುವುದು ಉತ್ತಮ. ಇದರೊಂದಿಗೆ ಓದುವ ಹವ್ಯಾಸ ಇದ್ದರೆ ವ್ಯಕ್ತಿಯ ಬೌದ್ಧಿಕ, ಮನೋವಿಕಾಸವಾಗಲಿದೆ ಎಂದು  ಹೇಳಿದರು.ಚಿತ್ರಕಲಾ ಪ್ರದರ್ಶನ ಉದ್ಘಾಟಿಸಿದ ಸಿದ್ಧಗಂಗಾ ಸಂಸ್ಥೆ ಮುಖ್ಯಸ್ಥೆ ಜೆಸ್ಟಿನ್ ಡಿಸೌಜ ಮಾತನಾಡಿ, ನಾವು ಸಣ್ಣವರಿದ್ದಾಗ ಮೊಬೈಲ್ ಮತ್ತಿತರ ಎಲೆಕ್ಟ್ರಾನಿಕ್ ಉಪಕರಣಗಳು ಇರಲಿಲ್ಲ. ಹೀಗಾಗಿ ಪುಸ್ತಕಗಳು ಮಾತ್ರ ನಮ್ಮ ಸಂಗಾತಿಯಾಗಿದ್ದವು. ಈಗೇನಾದರೂ ಪುಸ್ತಕ ಓದುವ ಜನರಿದ್ದರೆ ಅವರೆಲ್ಲರೂ ಮೊಬೈಲ್ ಯುಗಕ್ಕಿಂತ ಮೊದಲು ಜನಿಸಿದವರು ಎಂದರು.ಸಮಾರಂಭದಲ್ಲಿ ಲೇಖಕಿ, ಅಂಕಣಗಾರ್ತಿ ಸುನಿತಾ ಪ್ರಕಾಶ್‌ರ ಶರಣ್ಯ ಕಥಾ ಸಂಕಲನವನ್ನು ಹಿರಿಯ ಪತ್ರಕರ್ತ ಜಿ.ಎಂ.ಆರ್. ಆರಾಧ್ಯ ಲೋಕಾರ್ಪಣೆ ಮಾಡಿದರು. ಚಿತ್ರಕಲಾವಿದ ಜಿ.ಎಸ್. ಪ್ರದೀಪ್ ಅವರ ಚಿತ್ರಗಳ ಪ್ರದರ್ಶನ ನಡೆಯಿತು. ಇದೇ ವೇಳೆ ಜಿಲ್ಲಾ ವರದಿಗಾರರ ಕೂಟದ ಅಧ್ಯಕ್ಷ ಎ. ಏಕಾಂತಪ್ಪ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಇ.ಎಂ. ಮಂಜುನಾಥ್, ಡಾ.ಎಂ. ಶಿವಕುಮಾರ್, ರೇಖಾ ಶಿವಕುಮಾರ್, ಜಿ.ಎಸ್. ಪ್ರದೀಪ್‌ರನ್ನು ಸನ್ಮಾನಿಸಲಾಯಿತು. ಕಸಾಪ ಜಿಲ್ಲಾಧ್ಯಕ್ಷ ಬಿ. ವಾಮದೇವಪ್ಪ ಅಧ್ಯಕ್ಷತೆ ವಹಿಸಿದ್ದರು. ವಿದ್ಯಾಧರ ಮುತಾಲಿಕ ದೇಸಾಯಿ, ಎಂ. ಬಸವರಾಜ್, ಮಲ್ಲಮ್ಮ ನಾಗರಾಜ್, ವೀಣಾ ಕೃಷ್ಣಮೂರ್ತಿ, ಶೋಭಾ ಮಂಜುನಾಥ, ಚಂದ್ರಿಕಾ ಜಗನ್ನಾಥ್, ಅನ್ನಪೂರ್ಣ ಪಾಟೀಲ್, ಕೆ.ಎಸ್. ವೀರಭದ್ರಪ್ಪ, ಕೆ.ಎಂ. ಅಮರೇಶ್ ಇತರರಿದ್ದರು.

——-