ಮಕ್ಕಳಲ್ಲಿ ಸಾಹಿತ್ಯದ ಅಭಿರುಚಿ ಮೂಡಿಸುವ ಅಗತ್ಯವಿದೆ: ಎ.ಕೆ.ರಾಮೇಶ್ವರ

ಶಹಾಬಾದ:ಜು.31:ಮಕ್ಕಳಲ್ಲಿ ಸಾಹಿತ್ಯದ ಅಭಿರುಚಿ ಮೂಡಿಸುವ ಕೆಲಸದ ಅಗತ್ಯವಿದೆ. ಕನ್ನಡ ಸಾಹಿತ್ಯದ ಬೆಳವಣಿಗೆಗೆ ಪೂರಕವಾಗಿ ಮಕ್ಕಳಲ್ಲಿ ಈ ವಯಸ್ಸಿನಲ್ಲಿಯೇ ಉತ್ತಮ ಕವನ ರಚನೆ, ಕಥೆಗಳ ರಚನೆ. ಕವನಗಳನ್ನು ಓದುವ ಶೈಲಿ, ಸಾಹಿತ್ಯಿಕ ಪುಸ್ತಕಗಳನ್ನು ಓದುವಂತಹ ಅಭಿರುಚಿ,ಆಸಕ್ತಿಯನ್ನು ಮೂಡಿಸಿ ಅವರಲ್ಲಿ ಕಾವ್ಯ ರಚನೆಯ ಕೌಶಲ್ಯ ಮತ್ತು ಸಾಮಾಥ್ರ್ಯವನ್ನು ತುಂಬುವ ಅಗತ್ಯವಿದೆ ಎಂದು ಮಕ್ಕಳ ಹಿರಿಯ ಸಾಹಿತಿ ಎ.ಕೆ.ರಾಮೇಶ್ವರ ಹೇಳಿದರು. ಶನಿವಾರ ರಾವೂರ ಗ್ರಾಮದ ಶ್ರೀ ಸಿದ್ಧಲಿಂಗೇಶ್ವರ ವಿದ್ಯಾಭಿವೃದ್ಧಿ ಸಂಸ್ಥೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲೂಕ ಘಟಕ ಶಹಾಬಾದ ಹಾಗೂ ಶ್ರೀ ಸಿದ್ಧಲಿಂಗೇಶ್ವರ ವಿದ್ಯಾಭಿವೃದ್ಧಿ ಸಂಸ್ಥೆಯ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಶಹಾಬಾದ ತಾಲೂಕ ಮಟ್ಟದ ಪ್ರೌಢ ಶಾಲಾ ಮಕ್ಕಳ ಒಂದು ದಿನದ ಕಾವ್ಯ ರಚನಾ ತರಬೇತಿ ಶಿಬಿರವನ್ನು ಸಸಿಗೆ ನೀರುಣಿಸುವ ಮೂಲಕ ಉಧ್ಘಾಟಿಸಿ ಮಾತನಾಡಿದರು. ಇಂತಹ ಶಿಬಿರಗಳಿಂದ ಮಕ್ಕಳಲ್ಲಿ ಯಾವರೀತಿ ಕವನಗಳನ್ನು ರಚಿಸಬೇಕೆಂಬ ಕೌಶಲ್ಯ ಬೇಳೆಸಿಕೊಳ್ಳುತ್ತಾರೆ. ಪ್ರತಿಭೆಗಳಿದ್ದರೆ ಅವರು ಉನ್ನತ ಸ್ಥಾನಕ್ಕೇರಲು ಸಾಧ್ಯವಿದೆ. ಈ ವಿಷಯದಲ್ಲಿ ಶಹಾಬಾದ ತಾಲೂಕ ಕನ್ನಡ ಸಾಹಿತ್ಯ ಪರಿಷತ್ತು ಉತ್ತಮ ಕೆಲಸ ಮಾಡುತ್ತಿದೆ ಎಂದು ಹೇಳಿದರು.

ಕವಿತೆ ರಚಿಸೋಣ ಬನ್ನಿ ಎನ್ನುವ ಮೊದಲನೆ ಗೋಷ್ಠಿಯ ಸಂಪನ್ಮೂಲ ವೈಕ್ತಿಯಾಗಿ ಮಾತನಾಡಿದ ಹಿರಿಯ ಸಾಹಿತಿ ಎಚ್.ಬಿ.ತೀರ್ಥೆ ಅವರು ಕವಿತೆಗಳಿಗೆ ಭಾವನೆಗಳೆ ಜೀವಾಳ. ನಮ್ಮ ಕಲ್ಪನೆ ತಕ್ಕಂತೆ ಕವಿತೆ ರಚಿಸಲು ಪ್ರಯತ್ನಿಸಬೇಕು. ಒಂದೊಂದು ವಿಷಯಗಳನ್ನು ಇಟ್ಟುಕೊಂಡು ಮೂರು ಸಾಲಿನ, ನಾಲ್ಕು ಸಾಲಿನ ಕವನಗಳನ್ನು ರಚಿಸಬಹುದು. ಕವಿತೆಗಳನ್ನು ರಚಿಸುವ ಮುಂಚೆ ಮಕ್ಕಳ ಸಾಹಿತ್ಯದಲ್ಲಿ ಮಕ್ಕಳ ಕವಿಗಳು ರಚಿಸಿರುವ ಕವನಗಳನ್ನು ಓದಬೇಕು.ಅವುಗಳನ್ನು ಅಥೈಸಿಕೊಳ್ಳಬೇಕು. ನಿಮ್ಮ ಶಬ್ದ ಬಂಡಾರ ಹೆಚ್ಚಿಸಿಕೊಳ್ಳಬೇಕು ಅಂದಾಗ ಮಾತ್ರ ಉತ್ತಮ ಕವಿತೆಗಳನ್ನು ಬರೆಯಲು ಸಾಧ್ಯ ಎಂದರು. ಸ್ಥಳದಲ್ಲಿಯೇ ಮಕ್ಕಳೆದುರೇ ಕವನಗಳನ್ನು ತಾವೆ ರಚಿಸಿ ತೋರಿಸಿಕೊಟ್ಟರು.

ಕವನ ವಾಚನ ಮತ್ತು ವಿಮರ್ಶೆ ಎರಡನೆ ಗೊಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಗಜಲ್ ಕವಿ ಡಾ.ಮಲ್ಲಿನಾಥ ತಳವಾರ ಮಾತನಾಡಿ. ಈ ವಯಸ್ಸಿನಲ್ಲಿ ನಮಗೆ ಕಥೆ,ಕವಿತೆಗಳ ರಚನೆ ವಾಚನ ಯಾವುದು ಗೊತ್ತಿರಲಿಲ್ಲ. ಆದರೆ ನಿಮ್ಮೇಲ್ಲರ ಸುದೈವ ಕನ್ನಡ ಸಾಹಿತ್ಯ ಪರಿಷತ್ತು ಈ ಹಂತದಲ್ಲೆ ನಿಮಗೆಲ್ಲಾ ಸಾಹಿತ್ಯದ ಶಿಬಿರ ಮಾಡುತ್ತಿದೆ. ಕವನ ರಚನೆಯಲ್ಲಿ ಪ್ರಾಸಗಳಿರಲಿ ಆದರೆ ಪ್ರಾಸಗಳೆ ಕವನಗಳಲ್ಲ. ಕವನಗಳು ಕೇವಲ ಎರಡು, ಮೂರು, ನಾಲ್ಕು ಸಾಲುಗಲಲ್ಲಿ ರಚಿಸಿದರೆ ಅದು ಕವನವಾಗುವುದಿಲ್ಲ ಅದು ಚುಟುಕು ಕವನ ಎನಿಸುತ್ತದೆ. ಪ್ರಾರಂಭದ ಹಂತದಲ್ಲಿ ನೀವು ಬರೆಯುವ ಎಲ್ಲಾ ಕವನಗಳು ಸೊಗಸಾಗಿರುತ್ತವೆ. ಬರುತ್ತಾ ಅವು ಪ್ರಭುದ್ದತೆಯನ್ನು ಪಡೆಯಬೇಕು ಎಂದು ಹೇಳಿದರು.

ತಾಲೂಕಿನ ವಿವಿಧ ಶಾಲೆಗಳಿಂದ ಬಂದ ವಿದ್ಯಾರ್ಥಿಗಳು ಸ್ಥಳದಲ್ಲೆ ಕವನವನ್ನು ರಚಿಸಿ ಎಲ್ಲರ ಸಮ್ಮುಖದಲ್ಲಿ ಓದಿ ಚೆಪ್ಪಾಳೆ ಗಿಟ್ಟಿಸಿಕೊಂಡರು.

ಕಾರ್ಯಕ್ರಮದಲ್ಲಿ ವೇದಿಕೆ ಮೇಲೆ ಶ್ರೀಮಠದ ಉತ್ತರಾಧಿಕಾರಿ ಪೂಜ್ಯ ಸಿದ್ಧಲಿಂಗ ದೇವರು ಸಾನಿದ್ಯ ವಹಿಸಿದ್ಧರು. ಶಹಾಬಾದ ಕ.ಸಾ.ಪ ಅಧ್ಯಕ್ಷ ಶರಣಬಸಪ್ಪ ಕೋಬಾಳ, ಸಂಸ್ಥೆ ಉಪಾಧ್ಯಕ್ಷ ಚೆನ್ನಣ್ಣ ಬಾಳಿ ಇದ್ದರು.

ಸಂಸ್ಥೆ ಕಾರ್ಯದರ್ಶಿ ಡಾ.ಗುಂಡಣ್ಣ ಬಾಳಿ, ಸರಕಾರಿ ನೌಕರರ ಸಂಘದ ಅಧ್ಯಕ್ಷ ಈರಣ್ಣ ಕೆಂಬಾವಿ. ಪ್ರೌಢ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಚಿದಾನಂದ ಕುಡ್ಡನ್, ಈಶ್ವರಪ್ಪ ಬಾಳಿ, ಕೆ.ರಮೇಶ ಭಟ್ಟ, ಲೋಹಿತ ಕಟ್ಟಿ, ಶರಣು ವಸ್ತ್ರದ, ಬಸವರಾಜ ಮದ್ರಿಕಿ, ಮರಲಿಂಗ ಯಾದಗೀರ, ಗಿರಿಮಲ್ಲಪ್ಪ ವಳಸಂಗ, ಮಲ್ಲಿಕಾರ್ಜುನ ಇಟಗಿ, ಶರಣು ಜ್ಯೋತಿ, ಭರತ ಧನ್ನಾ, ವೀಣಾ ನಾರಾಯಣ, ಪೂಜಪ್ಪ ಮೇತ್ರೆ, ಸಿದ್ದಲಿಂಗ ಜ್ಯೋತಿ, ಪ್ರಸಾದ ಕೋಬಾಳ, ಭುವನೇಶ್ವರಿ ಎಂ, ಶಿವಕುಮಾರ ಸರಡಗಿ, ಈರಣ್ಣ ಹಳ್ಳಿ ಸೇರಿದಂತೆ ಸಾಹಿತಿಗಳು, ಶಿಕ್ಷಕರು, ವಿವಿಧ ಶಾಲೆಗಳಿಂದ 150 ಕ್ಕೂ ಹೆಚ್ಚು ಮಕ್ಕಳು ಭಾಗವಹಿಸಿದ್ದರು.

ರಾಜು ಕೋಬಾಳ, ದಶರಥ ಕೋಟನೂರ ನಾಡಗೀತೆ ಪ್ತಸ್ತುತ ಪಡಿಸಿದರು. ರೇವಣಸಿದ್ದಯ್ಯಾ ವಲಂಡಿ ನಿರೂಪಿಸಿದರು. ಸಿದ್ಧಲಿಂಗ ಬಾಳಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಸಿದ್ಧಲಿಂಗ ಬಾಳಿ ರಾವೂರ : ಕನ್ನಡ ಸಾಹಿತ್ಯ ಪರಿಷತ್ತು ಎಲ್ಲಾ ತಾಲೂಕುಗಳಲ್ಲಿ ಇಂಹತ ಕಾವ್ಯ ರಚನೆ ತರಬೇತಿ ಕಾರ್ಯಾಗಾರಗಳನ್ನು ಏರ್ಪಡಿಸಬೇಕು. ಮಕ್ಕಳಲ್ಲಿ ಕವನ ರಚನೆ ಸಾಮಾಥ್ರ್ಯ ಬಂದಾಗ ಮಾತ್ರ ವಿವಿಧ ಕವಿಗೋಷ್ಠಿಗಳಲ್ಲಿ ಹೊಸ ಹೊಸ ಪ್ರತಿಭೆಗಳು ಹೊರಬರಲು ಸಾಧ್ಯ. ಇವರೆ ಮುಂದೆ ಕನ್ನಡ ಸಾಹಿತ್ಯ ಉಳಿಸುವ ಕೆಲಸ ಮಾಡುವವರು.