ಮಕ್ಕಳಲ್ಲಿ ಸಂಶೋಧನಾ ಪ್ರವೃತ್ತಿ ಬೆಳೆಸಿ : ಸಂಕನೂರ

ಗದಗ, ನ. 22 : ಶಿಕ್ಷಕರು ವಿದ್ಯಾರ್ಥಿಗಳಲ್ಲಿ ಸಂಶೋಧನಾತ್ಮಕ ಪ್ರವೃತ್ತಿಯನ್ನು ಬೆಳೆಸಬೇಕು. ಸಂಶೋಧನಾ ಕ್ಷೇತ್ರಕ್ಕೆ ವಿದ್ಯಾರ್ಥಿಗಳನ್ನು ಉತ್ತೇಜಿಸಬೇಕು ಅಂದಾಗ ವಿಜ್ಞಾನ ಮತ್ತು ತಾಂತ್ರಿಕತೆಯಲ್ಲಿ ಸಂಶೋಧನೆಗಳು ನಡೆದು ದೇಶ ಪ್ರಗತಿ ಹೊಂದಲು ಸಾಧ್ಯವೆಂದು ವಿ.ಪ ಸದಸ್ಯ ಎಸ್.ವ್ಹಿ.ಸಂಕನೂರ ಅಭಿಪ್ರಾಯಪಟ್ಟರು.
ಅವರು ನಗರದ ಮುನ್ಸಿಪಲ್ ಕಾಲೇಜ್‍ದಲ್ಲಿ ಬೆಂಗಳೂರಿನ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಗದಗ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಗದಗ ಜಿಲ್ಲಾ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಘಟಕದಿಂದ ನಡೆದ 30ನೇ ಮಕ್ಕಳ ವಿಜ್ಞಾನ ಸಮಾವೇಶದ ಮಾರ್ಗದರ್ಶಿ ಶಿಕ್ಷಕರ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿಗಳೂ ಸಹ ಶಿಕ್ಷಕರೊಂದಿಗೆ ಸಂದೇಹಗಳನ್ನು ನಿವಾರಿಸಿಕೊಳ್ಳಬೇಕು. ಪ್ರಶ್ನೆ, ಪರಾಮರ್ಶೆ ನಡೆಸಿ ವಿಷಯವನ್ನು ಮನದಟ್ಟು ಮಾಡಿಕೊಳ್ಳಬೇಕು ಅಂದಾಗ ಮಾತ್ರ ಜ್ಞಾನದ ಮಟ್ಟ ವೃದ್ಧಿಸುವದು ಎಂದರಲ್ಲದೆ ಮಕ್ಕಳು ದೇಶದ ಆಸ್ತಿ ಅವರುಗಳನ್ನು ವಿದ್ಯಾರ್ಥಿ ದೆಸೆಯಲ್ಲಿಯೇ ಉತ್ತಮ ಸಂಸ್ಕಾರ, ಸಂಸ್ಕøತಿಯ ಮೂಲಕ ಶಿಕ್ಷಣ ನೀಡಬೇಕು ಇದರಲ್ಲಿ ಪಾಲಕ ಪೋಷಕರ ಪಾತ್ರವೂ ಅಷ್ಟೇ ಮಹತ್ವದ್ದಾಗಿದೆ ಎಂದರು.
“ಆರೋಗ್ಯ ಮತ್ತು ಯೋಗಕ್ಷೇಮಕ್ಕಾಗಿ ಜೀವಿ ಪರಿಸರ ವ್ಯವಸ್ಥೆಯನ್ನು ಅರ್ಥ ಮಾಡಿಕೊಳ್ಳೋಣ” ವಿಷಯವಾಗಿ ವಿಜ್ಞಾನ ಶಿಕ್ಷಕರಿಗೆ ಕಾರ್ಯಾಗಾರ ನಡೆಸಿದ್ದು ಸ್ವಾಗತಾರ್ಹ, ಮಕ್ಕಳಿಂದ ವೃದ್ಧರವರೆಗೂ ನಮ್ಮ ಆರೋಗ್ಯವನ್ನು ಕಾಪಾಡಿಕೊಂಡು ನಿತ್ಯ ನಮ್ಮ ದೈನಂದಿನ ಚಟುವಟಿಕೆಗಳನ್ನು ಕ್ರಮಬದ್ಧವಾಗಿ ಅನುಸರಿಸಿದಲ್ಲಿ ಸದೃಢ ಆರೋಗ್ಯ ಪಡೆಯಲು ಸಾಧ್ಯವಿದೆ, ಸದೃಢ ಆರೋಗ್ಯದಿಂದ ಸದೃಢ ದೇಶ ನಿರ್ಮಾಣಗೊಳ್ಳುವದು ಎಂದರು.
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪನಿರ್ದೆಶಕ ಜಿ.ಬಸವಲಿಂಗಪ್ಪ ಮಾತನಾಡಿ ಶಿಕ್ಷಕರು ವಿದ್ಯಾರ್ಥಿಗಳಿಗೆ ಸರಳ ಹಾಗೂ ತಿಳಿಯುವ ರೀತಿಯಲ್ಲಿ ಬೋಧನೆ ಮಾಡಬೇಕು. ವಿದ್ಯಾರ್ಥಿಗಳು ಕಲಿಕೆಯಲ್ಲಿ ಕಠಿಣ ವಿಷಯವನ್ನು ಸರಳೀಕರಣವಾಗುವ ರೀತಿಯಲ್ಲಿ ಶಿಕ್ಷಕರಿಂದ ತಿಳಿದುಕೊಳ್ಳಬೇಕು ಎಂದರಲ್ಲದೆ ಶಿಕ್ಷಕರೊಂದಿಗೆ ಸಂವಾದ ನಡೆಸಿದರು.
ಕ.ರಾ.ವಿ.ಪ ಜಿಲ್ಲಾಧ್ಯಕ್ಷ ರಮೇಶ ರಿತ್ತಿ ಮಾತನಾಡಿ ವಿಜ್ಞಾನ ಸಮಾವೇಶದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ವಿದ್ಯಾರ್ಥಿಗಳು ಪಾಲ್ಗೋಳ್ಳಲು ಈ ತರಬೇತಿ ಪೂರಕವಾಗಲಿ ಆ ರೀತಿಯ ಪ್ರೋತ್ಸಾಹ, ಮಾರ್ಗದರ್ಶನ ಶಿಕ್ಷಕ ಸಮುದಾಯದಿಂದ ಸಿಗಲೆಂದರು.
ಕಳೆದ ವರ್ಷ ವಿಜ್ಞಾನ ಸಮಾವೇಶದಲ್ಲಿ ರಾಷ್ಟ್ರಮಟ್ಟದಲ್ಲಿ ಗದಗ ಜಿಲ್ಲೆಯನ್ನು ಪ್ರತಿನಿಧಿಸಿದ ವಿಜ್ಞಾನ ಮಾರ್ಗದರ್ಶಿ ಶಿಕ್ಷಕರಾದ ಏಕಾಂತ, ಲೋಹಾನಿ ಹಾಗೂ ಫ್ರಾನ್ಸಿಸ್ ಅವರನ್ನು ಸಮಾರಂಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
ವೇದಿಕೆಯ ಮೇಲೆ ಜಿಲ್ಲಾ ಶಿಕ್ಷಣ ಹಾಗೂ ತರಬೇತಿ ಸಂಸ್ಥೆಯ ಪ್ರಾಂಶುಪಾಲರಾದ ಎಸ್.ಡಿ.ಗಾಂಜಿ, ಅನ್ನದಾನೇಶ್ವರ ಹಳ್ಳಿಕೇರಿ, ಶೇಷಾಚಲ ಕುಲಕರ್ಣಿ, ಪಿ.ಎಚ್.ಕಡಿವಾಳ, ಡಾ.ಎಸ್.ಬಿ.ಹಿರೇಮಠ, ಚಂದ್ರಕಾಂತ ಮಟ್ಟಿ, ಶಂಕರಗೌಡ ಮರಿಗೌಡರ ಉಪಸ್ಥಿತರಿದ್ದರು.
ಮಕ್ಕಳ ವಿಜ್ಞಾನ ಸಮಾವೇಶದ ಜಿಲ್ಲಾ ಸಂಯೋಜಕ ಜಗದೀಶ ಎಸ್.ಯಾಳಗಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು, ಕ.ರಾ.ವಿ.ಪ ಜಿಲ್ಲಾ ಕಾರ್ಯದರ್ಶಿ ವೀರನಗೌಡ ಮರಿಗೌಡ್ರ ನಿರೂಪಿಸಿದರು ಕೊನೆಗೆ ಶಿಕ್ಷಕ ಆರ್.ಬಿ.ಗುಡಗೂರ ವಂದಿಸಿದರು.