
ವಿಜಯಪುರ:ಮಾ.1: ಬದುಕಿನ ಪ್ರತಿ ಸಮಸ್ಯೆಗೂ ವಿಜ್ಞಾನದಲ್ಲಿ ಪರಿಹಾರವಿದೆ. ಆದ್ದರಿಂದ ಮಕ್ಕಳಲ್ಲಿ ಪೂರ್ವ ಪ್ರಾಥಮಿಕ ಹಂತದಿಂದಲೇ ಗಣಿತ ಮತ್ತು ವಿಜ್ಞಾನಗಳ ಬಗ್ಗೆ ಒಲವು ಮೂಡಿಸಬೇಕು.ವಿದ್ಯಾರ್ಥಿಗಳು ಏನನ್ನೇ ಕಲಿತರೂ ವೈಜ್ಞಾನಿಕ ಮನೋಭಾವವನ್ನು ರೂಢಿಸಿಕೊಳ್ಳಬೇಕು. ಜೊತೆಗೆ ವಿಜ್ಞಾನವು ನಮ್ಮ ಸಂಸ್ಕøತಿ ಮತ್ತು ಧರ್ಮಗಳ ಭಾಗವಾಗಬೇಕು ಎಂದು ಶಿಕ್ಷಕ ಆನಂದ ಕಂಬಾರ ಹೇಳಿದರು.
ಅವರು ತಾಲೂಕಿನ ನಾಗಠಾಣ ಗ್ರಾಮದ ಮಲ್ಲಿಕಾರ್ಜುನ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜರುಗಿದ ರಾಷ್ಟ್ರೀಯ ವಿಜ್ಞಾನ ದಿನವನ್ನು ಉದ್ದೇಶಿಸಿ ಮಾತನಾಡಿದರು.
ವಿಜ್ಞಾನ ದಿನವು ಶಾಂತಿ ಮತ್ತು ಅಭಿವೃದ್ಧಿಯನ್ನು ಪ್ರತಿನಿಧಿಸುತ್ತದೆ. ಜನರಿಗೆ ವಿಜ್ಞಾನದ ಪ್ರಾಮುಖ್ಯತೆ ಮತ್ತು ಪ್ರಯೋಜನಗಳನ್ನು ಕಲಿಸಲಾಗುತ್ತದೆ, ವಿಜ್ಞಾನವನ್ನು ಹೇಗೆ ಸದುಪಯೋಗಪಡಿಸಿಕೊಳ್ಳಬೇಕು ಎಂಬ ಜ್ಞಾನವನ್ನು ನೀಡಲಾಗುತ್ತದೆ. ಪ್ರತಿದಿನ ಹೊಸ ಆವಿಷ್ಕಾರಗಳು ಮನುಷ್ಯನಿಗೆ ತನ್ನ ಜೀವನವನ್ನು ಸರಳಗೊಳಿಸುವಂತೆ ಮಾಡಿದೆ ಎಂದು ಹೇಳಿದರು.
ಶಾಲಾ ಮುಖ್ಯ ಶಿಕ್ಷಕ ಸುರೇಶಗೌಡ ಬಿರಾದಾರ ಅಧ್ಯಕ್ಷತೆ ವಹಿಸಿ ಮಾತನಾಡಿ,ದೈನಂದಿನ ಜೀವನದಲ್ಲಿ ವಿಜ್ಞಾನ ಮತ್ತು ಮಾನವ ಕಲ್ಯಾಣಕ್ಕಾಗಿ ವಿಜ್ಞಾನ ಕ್ಷೇತ್ರದಲ್ಲಿನ ಪ್ರಯತ್ನಗಳು ಮತ್ತು ಸಾಧನೆಗಳನ್ನು ಪ್ರದರ್ಶಿಸಲು. ದೇಶದಲ್ಲಿ ವಿಜ್ಞಾನದ ಅಭಿವೃದ್ಧಿಗಾಗಿ ಹೊಸ ತಂತ್ರಜ್ಞಾನಗಳನ್ನು ಚರ್ಚಿಸಲು ಮತ್ತು ಕಾರ್ಯಗತಗೊಳಿಸಲು ಇದು ಒಂದು ಅವಕಾಶವಾಗಿದೆ. ಜನರಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಉತ್ತೇಜಿಸಲು ಮತ್ತು ಜನಪ್ರಿಯಗೊಳಿಸಬೇಕಾಗಿದೆ ಎಂದು ಹೇಳಿದರು.
ಸಂಸ್ಥೆಯ ಕಾರ್ಯದರ್ಶಿ ಸುನಂದಾ ಹುಣಶ್ಯಾಳ, ದೈ.ಶಿ. ಎಂ. ಎಸ್. ಪಾಪನಾಳಮಠ, ಶಿಕ್ಷಕರಾದ ರಾಘು ಮೊಗಳ, ಜಯಶ್ರೀ ಬಂಗಾರಿ, ಬಸಮ್ಮ ವಡಗೇರಿ, ಸ್ನೇಹ ಹಕ್ಕಿ, ಮಧುಮತಿ ನಿಕ್ಕಂ,ಸರೋಜಿನಿ ಕಟ್ಟಿಮನಿ, ಅಂಬಿಕಾ ಶಿರಕನಹಳ್ಳಿ, ರೇಣುಕಾ ಭಜಂತ್ರಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.ಇದೇ ಸಂದರ್ಭದಲ್ಲಿ ವಿಜ್ಞಾನ ವಸ್ತು ಪ್ರದರ್ಶನ ಏರ್ಪಡಿಸಲಾಗಿತ್ತು.