ಮಕ್ಕಳಲ್ಲಿ ವೈಜ್ಞಾನಿಕ ಬೆಳವಣಿಗೆ ಮುಖ್ಯ : ಡಾ.ಅಳ್ಳೊಳ್ಳಿ


ಬಾಗಲಕೋಟೆ, ಸೆ 24 : ಮೂಡ ನಂಬಿಕೆ, ಅಂಧಕಾರ ಹಾಗೂ ಅನಾಚಾರವು ಮಾನವನ ಅಭಿವೃದ್ಧಿಯ ಕಂಟಕಗಳಾಗಿದ್ದು, ಮಕ್ಕಳಲ್ಲಿ ಸಂಪೂರ್ಣ ಧನಾತ್ಮಕ, ವೈಜ್ಞಾನಿಕ ಚಿಂತನೆಗಳ ಸವಿಚಾರಗಳನ್ನು ಇಂದಿನ ಪಾಠಮಾಲಿಕೆಗಳಲ್ಲಿ ಮೂಡಿಬಂದಾಗ ಮಾತ್ರ ಮಕ್ಕಳು ಸಂಪೂರ್ಣ ವಿಕಸನ ಹೊಂದಿ, ವೈಜ್ಞಾನಿಕ ಮನೋಭಾವನೆ ಬೆಳೆಸಿಕೊಳ್ಳಲು ಸಾಧ್ಯವೆಂದು ತೋಟಗಾರಿಕೆ ವಿ.ವಿಯ ಕುಲಸಚಿವ ಹಾಗೂ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರದ ಸದಸ್ಯ ಕಾರ್ಯದರ್ಶಿ ಡಾ.ಟಿ.ಬಿ.ಅಳ್ಳೊಳ್ಳಿ ತಿಳಿಸಿದರು.
ವಿದ್ಯಾಗಿರಿಯ ಬಸವೇಶ್ವರ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯ (ಪ್ರೌಢಶಾಲೆ) ದಲ್ಲಿ ಮಕ್ಕಳಿಗಾಗಿ ವೈಜ್ಞಾನಿಕ ಚಿಂತನಾ ಕಾರ್ಯಕ್ರಮಗಳ ಅಡಿಯಲ್ಲಿ ನಡೆದ ಜೀವ ವೈವಿಧ್ಯತೆಯ ಅವಶ್ಯಕತೆ ಎಂಬ ನಿಬಂಧ ಸ್ಪರ್ಧೆ ಹಾಗೂ ವಾತಾವರಣ ವೈಪರೀತ್ಯಕ್ಕೆ ಕಾರಣಗಳು ಕುರಿತು ನಡೆದ ಭಾಷಣ ಸ್ಪರ್ಧೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ತೋವಿವಿಯ ಪ್ರಾದ್ಯಾಪಕ ಡಾ.ವಸಂತ ಗಾಣಗೇರ ಮಾತನಾಡಿ ತೋ.ವಿ.ವಿಯ ಆವರಣದಲ್ಲಿ ನೂತನವಾಗಿ ಸ್ಥಾಪಿಸಿದ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ಹೊರ ವಿಜ್ಞಾನ ಪರಿಕರಗಳನ್ನು ಸ್ಥಾಪನೆ ಮಾಡಲಾಗಿದ್ದು, ಜಿಲ್ಲೆಯ ವಿದ್ಯಾರ್ಥಿಗಳು ಹಾಗೂ ಜನ ಸಾಮಾನ್ಯರು ವಿಜ್ಞಾನದ ಅನೇಕ ವಿಷಯಗಳನ್ನು ಅರಿಯಬಹುದಾಗಿದೆ. ಅನೇಕ ವಿಜ್ಞಾನ ಚಿಂತನ-ಮಂಥನ ಕಾರ್ಯಾಗಾರವನ್ನು ಹೆಚ್ಚು ಹೆಚ್ಚು ಕೈಗೊಳ್ಳಲಾಗುವುದೆಂದರು.
ಬಸವೇಶ್ವರ ವಿದ್ಯಾವರ್ಧಕ ಸಂಘದ ಮಾನವ ಸಂಪನ್ಮೂಲ ಅಭಿವೃದ್ಧಿ ಸಂಶೋಧನಾ ಕೇಂದ್ರದ ನಿರ್ದೇಶಕ ಎಸ್.ಆರ್.ಮನಹಳ್ಳಿ ಮಾತನಾಡಿ ಹೊಸ ಶಿಕ್ಷಣ ಆಯೋಗವು ಮಕ್ಕಳ ಪಾಠ ಮಾಲಿಕೆಗಳಲ್ಲಿ ನೀತಿ ಪಾಠಗಳ ಜೊತೆಗೆ ವೈಜ್ಞಾನಿಕ ಮನೋವೃದ್ಧಿಗಾಗಿ ವಿಜ್ಞಾನ ಪಾಠಗಳು ಹೆಚ್ಚು ಕೊಡುಗೆಯನ್ನು ನೀಡಿವೆ. ವಿಜ್ಞಾನವು ಪ್ರತಿಯೊಬ್ಬರ ಸ್ವತ್ತು. ಅದರ ಸದುಪಯೋಗ ಮಕ್ಕಳಿಗೆ ಅವಶ್ಯಕ ಎಂದು ತಿಳಿಸಿದರು.
ವೇದಿಕೆಯಲ್ಲಿ ತೋಟಗಾರಿಕೆ ವಿವಿಯ ಕ್ಯುರೇಟರ್ ಡಾ.ಶೃತಿ.ಪಿ.ಗೊಂದಿ ಸೇರಿದಂತೆ ಇತರರು ಉಪಸ್ಥಿತರಿದ್ದರು. ಪ್ರಾರಂಭದಲ್ಲಿ ಮಹಾವಿದ್ಯಾಲಯದ ಮುಖ್ಯೋಪಾಧ್ಯಾಯ ಎಮ್.ವೈ.ಕೂಗನವರ ಸ್ವಾಗತಿಸಿದರು. ಮಕ್ಕಳಿಗಾಗಿ ಜೀವ ವೈವಿಧ್ಯತೆಯ ಅವಶ್ಯಕತೆ ನಿಬಂಧ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ವಿಜೇತ ಮಡಿವಾಳ, ದ್ವಿತೀಯ ಸ್ಥಾನ ನಟತಾರ ಮೋಮಿನ ಹಾಗೂ ತೃತೀಯ ಸ್ಥಾನವನ್ನು ಚೈತ್ರಾ ದೊಡಮನಿ ಪಡೆದುಕೊಂಡರು. ಅದರಂತೆ ವಾತಾವರಣ ವೈಪರೀತ್ಯಕ್ಕೆ ಕಾರಣಗಳು ಎಂಬ ಭಾಷಣ ಸ್ಪರ್ಧೆಯಲ್ಲಿ ದಾನೇಶ್ವರಿ ಮನಗುಳಿ ಪ್ರಥಮ ಸ್ಥಾನ, ಚೈತ್ರ ದೊಡಮನಿ ದ್ವಿತೀಯ ಹಾಗೂ ನಾಗರತ್ನ ಮೇಟಿ ತೃತೀಯ ಸ್ಥಾನವನ್ನು ಪಡೆದುಕೊಂಡರು.