ಮಕ್ಕಳಲ್ಲಿ ಪ್ರಶ್ನಿಸುವ ಪ್ರವೃತ್ತಿ ಹೆಚ್ಚುವುದು ಅವಶ್ಯಕ: ಕೆ. ರಾಧಾಕೃಷ್ಣ ಬೋರ್ಕರ್

ಜನಪ್ರತಿನಿಧಿ-ಇಲಾಖಾಧಿಕಾರಿಗಳೊಂದಿಗೆ ಮಕ್ಕಳ ಸಂವಾದ

ಪುತ್ತೂರು, ನ.೨೦- ಉತ್ತಮ ಅವಕಾಶಗಳು ಸಿಕ್ಕಿದಾಗ ಸಮಾಜದಲ್ಲಿ ಮಕ್ಕಳು ಉತ್ತಮ ರೀತಿಯಲ್ಲಿ ಬೆಳದು ಮುಂದೆ ಉತ್ತಮ ಸಮಾಜವಂತರಾಗಲು ಸಾಧ್ಯವಿದೆ. ಮಕ್ಕಳಲ್ಲಿ ಪ್ರಶ್ನಿಸುವ ಪ್ರವೃತ್ತಿ ಹೆಚ್ಚಾಗಬೇಕು ಎಂದು ಪುತ್ತೂರು ತಾಪಂ ಅಧ್ಯಕ್ಷ ಕೆ. ರಾಧಾಕೃಷ್ಣ ಬೋರ್ಕರ್ ಹೇಳಿದರು.

ಅವರು ದ.ಕ.ಜಿಲ್ಲಾ ಮಕ್ಕಳ ಮಾಸೋತ್ಸವದ ಅಂಗವಾಗಿ ಪುತ್ತೂರಿನ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಗುರುವಾರ ನಡೆದ ಜನಪ್ರತಿನಿಧಿಗಳೊಂದಿಗೆ ಮತ್ತು ಇಲಾಖಾ ಅಧಿಕಾರಿಗಳೊಂದಿಗೆ ಮುಖಾಮುಖಿ ಮಕ್ಕಳ ಸಂವಾದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಮಕ್ಕಳಲ್ಲಿ ರಚನಾತ್ಮಕ ಪ್ರಶ್ನೆಗಳು ಮೂಡಿ ಬರುವ ನಿಟ್ಟಿನಲ್ಲಿ ಶಿಕ್ಷಕರು ಮತ್ತು ಹೆತ್ತವರು ಪ್ರಯತ್ನಿಸಬೇಕು. ಅವರ ಹಕ್ಕುಗಳ ಆಧಾರಿತ ಬದುಕನ್ನು ಕಟ್ಟಿಕೊಡುವಲ್ಲಿ ಎಲ್ಲರೂ ಸಹಕರಿಸಬೇಕು ಎಂದರು.

ಅತಿಥಿಯಾಗಿ ಭಾಗವಹಿಸಿದ್ದ ಪುತ್ತೂರು ನಗರಸಭಾ ಅಧ್ಯಕ್ಷ ಜೀವಂಧರ್ ಜೈನ್ ಮಾತನಾಡಿ ಮಕ್ಕಳಿಗೆ ಅವರದೇ ಆಗಿರುವ ಹಕ್ಕುಗಳಿದ್ದು, ಅದನ್ನು ಸಮರ್ಪಕವಾಗಿ ದೊರಕಿಸಿಕೊಡುವಲ್ಲಿ ಎಲ್ಲರ ಪ್ರಯತ್ನಗಳಾಗಬೇಕು. ಇದಕ್ಕೆ ಮಕ್ಕಳ ಮಾಸೋತ್ಸವವು ಪ್ರೇರಣೆಯಾಗಲಿ ಎಂದರು.

ಪುತ್ತೂರು ಶಿಕ್ಷಣ ಸಂಪನ್ಮೂಲ ಕೇಂದ್ರದ ಅಧ್ಯಕ್ಷೆ ನಯನ ರೈ ಅಧ್ಯಕ್ಷತೆ ವಹಿಸಿದ್ದರು. ಕ್ಷೇತ್ರ ಶಿಕ್ಷಣಾಧಿಕಾರಿ ಸಿ. ಲೋಕೇಶ್ ಉಪಸ್ಥಿತರಿದ್ದರು.

ಸಂಪನ್ಮೂಲ ವ್ಯಕ್ತಿಯಾಗಿದ್ದ ಪತ್ರಕರ್ತ ಸಂಶುದ್ದೀನ್ ಸಂಪ್ಯ ಮಕ್ಕಳ ಹಕ್ಕುಗಳ ಬಗ್ಗೆ ಮಾಹಿತಿ ನೀಡಿದರು.

ಅಪರಾಹ್ನ ನಡೆದ ಮಕ್ಕಳ ಸಂವಾದ ಕಾರ್ಯಕ್ರಮದಲ್ಲಿ ತಾಪಂ ಅಧ್ಯಕ್ಷ ಕೆ. ರಾಧಾಕೃಷ್ಣ ಬೋರ್ಕರ್, ಕ್ಷೇತ್ರ ಶಿಕ್ಷಣಾಧಿಕಾರಿ ಸಿ. ಲೋಕೇಶ್, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶ್ರೀಲತಾ, ನಗರ ಠಾಣಾ ಎಸ್‌ಐ ಜಂಬೂರಾಜ್ ಮಹಾಜನ್, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಸುರೇಶ್ ಉಪಸ್ಥಿತರಿದ್ದು ಮಕ್ಕಳ ಪ್ರಶ್ನೆಗಳಿಗೆ ಉತ್ತರಿಸಿದರು.