ಮಕ್ಕಳಲ್ಲಿ ಪುಸ್ತಕ ಪ್ರೀತಿ ಬಿತ್ತುವ ಕಾರ್ಯವಾಗಲಿ

ಕಲಬುರಗಿ:ಏ.02: ಪ್ರಸ್ತುತವಾಗಿ ಮಕ್ಕಳು ಮೋಬೈಲ್ ಮತ್ತು ಟಿ.ವಿ ಆಕರ್ಷಣೆಗೆ ಒಳಗಾಗಿ, ಬೇರೆಯದರತ್ತ ಚಿತ್ತಹರಿಸುತ್ತಿಲ್ಲ. ಹಿಂದಿನ ಕಾಲದಲ್ಲಿ ನೀತಿ ಕಥೆಗಳು, ಮೌಲ್ಯಗಳುಳ್ಳ ಚಿಕ್ಕ ಪುಸ್ತಕಗಳನ್ನು ಓದುತ್ತಿದ್ದರು ಹಾಗೂ ಪಾಲಕ-ಪೋಷಕರು ಅವರಿಗೆ ತಿಳಿಸುತ್ತಿದ್ದರು. ಪುನಃ ಇಂತಹ ವಾತಾವರಣ ಸೃಷ್ಟಿಸಿ, ಮಕ್ಕಳಲ್ಲಿ ಪುಸ್ತಕ ಪ್ರೀತಿ ಬಿತ್ತುವ ಕಾರ್ಯವಾಗಬೇಕಾಗಿದೆ ಎಂದು ಉಪನ್ಯಾಸಕ, ಚಿಂತಕ ಎಚ್.ಬಿ.ಪಾಟೀಲ ಅಭಿಪ್ರಾಯಪಟ್ಟರು.
ನಗರದ ಎಸ್.ಬಿ.ಕಾಲೇಜು ಎದುರುಗಡೆಯಿರುವ ‘ಕೊಹಿನೂರ ಕಂಪ್ಯೂಟರ ತರಬೇತಿ ಸಂಸ್ಥೆ’ಯಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಜರುಗಿದ ‘ವಿಶ್ವ ಮಕ್ಕಳ ಪುಸ್ತಕ ದಿನಾಚರಣೆ’ಯ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.
ಇಂದಿನ ಮಕ್ಕಳು ಬಹಳ ಜ್ಞಾನವಂತರು. ಆದರೆ ಸಂಸ್ಕಾರ, ಮಾನವೀಯ ಮೌಲ್ಯಗಳ ಕೊರತೆ ಕಂಡುಬರುತ್ತಿದೆ. ಮಕ್ಕಳ ಸರ್ವತೋಮುಖ ಬೆಳವಣಿಗೆಯ ದೃಷ್ಟಿಯಿಂದ ಉತ್ತಮ ಪುಸ್ತಕಗಳನ್ನು ಪ್ರಕಟಿಸಿ, ಮಕ್ಕಳಿಗೆ ಮುಟ್ಟಿಸುವ ಕೆಲಸವಾಗಬೇಕಾಗಿದೆ. ಶಿಕ್ಷಕರು, ಪಾಲಕ-ಪೋಷಕರು, ಮಕ್ಕಳ ಸಾಹಿತಿಗಳು ಇದರತ್ತ ಗಮನಹರಿಸಬೇಕು. ಮಕ್ಕಳನ್ನು ಮೋಬೈಲ್ ಚಟದಿಂದ ಪಠ್ಯದ ಜೊತೆ ಪಠ್ಯೇತರ ನೀತಿಕಥೆಗಳುಳ್ಳ ಪುಸ್ತಕ ಓದುವ ಚಟಕ್ಕೆ ಹಚ್ಚಿದ್ದೇ ಆದರೆ, ಖಂಡಿತವಾಗಿಯೂ ಅವರ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾಗುತ್ತದೆ. ವಿಶ್ವದ ಪ್ರಸಿದ್ಧ ಮಕ್ಕಳ ಸಾಹಿತಿ ಹಾನ್ಸ್ ಕ್ರಿಶ್ಚಿಯನ್ ಆಂಡರ್ಸನ್ ಅವರ ಜನ್ಮದಿನಾಚರಣೆಯ ನಿಮಿತ್ಯ ಈ ದಿನವನ್ನು ಆಚರಿಸಲಾಗುತ್ತದೆ. ಮಕ್ಕಳ ಸಾಹಿತ್ಯಕ್ಕೆ ಅವರ ಕೊಡುಗೆಯನ್ನು ಸ್ಮರಿಸುವುದು ಮತ್ತು ಮಕ್ಕಳಲ್ಲಿ ಸಾಹಿತ್ಯ ಬಗ್ಗೆ ಒಲವನ್ನು ಮೂಡಿಸುವ ಉದ್ದೇಶ ದಿನಾಚರಣೆಯ ಹಿನ್ನಲೆಯಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಪ್ರಾಂಶುಪಾಲ ಭೀಮಾಶಂಕರ ಎಸ್.ಘತ್ತರಗಿ, ಕಸಾಪ ಉತ್ತರ ವಲಯದ ಗೌರವ ಅಧ್ಯಕ್ಷ ಶಿವಯೋಗೆಪ್ಪಾ ಎಸ್.ಬಿರಾದಾರ, ಉಪನ್ಯಾಸಕಿ ಅಶ್ವಿನಿ ಪಾಟೀಲ ಹಾಗೂ ವಿದ್ಯಾರ್ಥಿಗಳಿದ್ದರು.