ಕೋಲಾರ,ಜು,೧೦-ವಿದ್ಯಾರ್ಥಿಗಳಿಗೆ ಮತದಾನದ ಮಹತ್ವ ತಿಳಿಸಿಕೊಡುವುದರ ಜತೆಗೆ ನಾಯಕತ್ವ ಗುಣ ಬೆಳೆಸಲು ಶಾಲಾ ಸಂಸತ್ ಚುನಾವಣೆ ಪ್ರಕ್ರಿಯೆ ಹೆಚ್ಚು ಪರಿಣಾಮಕಾರಿ ಎಂದು ನಗರದ ಸರ್ಕಾರಿ ಬಾಲಕಿಯರ ಪಿಯು ಕಾಲೇಜಿನ ಪ್ರೌಢಶಾಲಾ ವಿಭಾಗದ ಉಪ ಪ್ರಾಂಶುಪಾಲ ಕೆ.ವಿ.ವೆಂಕಟೇಶಪ್ಪ ತಿಳಿಸಿದರು.
ಶಾಲೆಯಲ್ಲಿ ಶಾಲಾ ಸಂಸತ್ ರಚನೆಗಾಗಿ ನಡೆದ ಚುನಾವಣೆ ಪ್ರಕ್ರಿಯೆಯ ನೇತೃತ್ವ ವಹಿಸಿದ್ದ ಅವರು, ಇತ್ತೀಚಿನ ದಿನಗಳಲ್ಲಿ ಜನತೆ ಮತದಾನದಿಂದ ದೂರ ಉಳಿಯುವ ಮೂಲಕ ಪ್ರಜಾಪ್ರಭುತ್ವದ ಗಟ್ಟಿತನಕ್ಕೆ ಏಟು ನೀಡುತ್ತಿದ್ದಾರೆ ಇದು ಮಾರಕವಾಗಿದ್ದು, ಶಾಲಾ ಹಂತದಿಂದಲೇ ಚುನಾವಣೆ, ಮತದಾನ ದೇಶದ ಅಭಿವೃದ್ದಿಯಲ್ಲಿ ಎಂತಹ ಪಾತ್ರ ವಹಿಸುತ್ತದೆ ಎಂಬುದರ ಕುರಿತು ಅರಿವು ಮೂಡಿಸುವ ಕೆಲಸವಾಗಿದೆ ಎಂದರು.
ವಿದ್ಯಾರ್ಥಿಗಳು ಗುರುತಿನ ಚೀಟಿ ತೋರಿಸಿ ಮತದಾನದ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದು, ಒಟ್ಟು ೧೮೭ ವಿದ್ಯಾರ್ಥಿಗಳು ಮತದಾನ ಮಾಡಿದರು. ಚುನಾವಣೆ ಪ್ರಕ್ರಿಯೆಯು ಶಾಲೆಯ ಸಮಾಜವಿಜ್ಞಾನ ಶಿಕ್ಷಕರಾದ ಎನ್.ಎಸ್.ಭಾಗ್ಯ, ಎಂ.ಎಸ್.ಮಾಧವರಾವ್, ಅನಿಸಾ ಸುಲ್ತಾನ ಅವರ ಮಾರ್ಗದರ್ಶನದಲ್ಲಿ ನಡೆಯಿತು.
ಚುನಾವಣಾ ಸಿಬ್ಬಂದಿಯಾಗಿ ಶಾಲೆಯ ಶಿಕ್ಷಕರು ಕಾರ್ಯನಿರ್ವಹಿಸಿದ್ದು, ಮತದಾನದ ನಂತರ ನಡೆದ ಮತ ಎಣಿಕೆ ಪ್ರಕ್ರಿಯೆಯಲ್ಲಿ ಶಾಲೆಯ ಮೆಹವೀಷ್ ಮುಸರತ್, ಕೋನಿಯನ ಜವೇರಿಯಾ, ಹಮ್ರೈನ್ ಉಮ್ಮೇಕುಲ್ಸುಂ ಜಯ ಗಳಿಸಿದ್ದಾರೆಂದು ಘೋಷಿಸಲಾಯಿತು. ಮತ ಎಣಿಕೆ ಕಾರ್ಯ ಗಣಿತ ಶಿಕ್ಷಕ ಲೋಕೇಶಪ್ಪ ದಟ್ಟೇರ್ ನಿರ್ವಹಿಸಿದರು.