
ರಾಯಚೂರು,ಏ.೧೫- ಮಕ್ಕಳಲ್ಲಿ ನಮ್ಮ ದೇಶದ ಸಂಸ್ಕೃತಿಯ ಬಗ್ಗೆ ಅರಿವು ಮೂಡಿಸುವುದು ಅಗತ್ಯವಾಗಿದೆ ಎಂದು ಉಡುಪಿ ಅದಮಾರು ಮಠಾಧೀಶರಾದ ಶ್ರೀ ವಿಶ್ವಪ್ರಿಯ ತೀರ್ಥ ಶ್ರೀ ಪಾದಂಗಳವರು ನುಡಿದರು.
ಅವರಿಂದು ನಗರದ ಕಾಡ್ಲೂರು ದೇಸಾಯಿಯವರ ನಿವಾಸದಲ್ಲಿ ಪಾದಪೂಜೆ ಸ್ವೀಕರಿಸಿ ಮನೆಯ ಆವರಣದಲ್ಲಿ “ರಂಗ ದೇ” ಮತ್ತು ಕಾಡ್ಲೂರು ಸಂಸ್ಥಾನದಿಂದ ನಡೆಯುವ ಮಹಾನ ಪುರುಷರ, ದಾರ್ಶನಿಕರ, ಸ್ವಾತಂತ್ರ್ಯ ಹೋರಾಟಗಾರರ ಇತರ ಮಹನೀಯರ ಪುಸ್ತಕವುಳ್ಳ ಕಿರಿ ಗ್ರಂಥಾಲಯ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿ ಮಕ್ಕಳಲ್ಲಿ ಶಾಲೆಯ ಪಠ್ಯದ ಜೊತೆಗೆ ನಮ್ಮ ದೇಶದ ಕಲೆ ಸಂಸ್ಕೃತಿ ಆಚಾರ ವಿಚಾರಗಳ ಬಗ್ಗೆ ಅರಿವು ಮೂಡಿಸುವುದ ಅತ್ಯವಶ್ಯಕವೆಂದ ಅವರು ನಮ್ಮ ದೇಶವು ಅನೇಕ ಪುಣ್ಯ ಪುರುಷರು, ಮಹಾತ್ಮರ ಪುಣ್ಯ ಭೂಮಿಯಾಗಿದೆ ಅನೇಕರು ಸಮಾಜ ಸುಧಾರಣೆ ಮಾಡಿದ್ದಾರೆ ಅವರ ಬಗ್ಗೆ ಇಂದಿನ ಮಕ್ಕಳಲ್ಲಿ ಪ್ರಜ್ಞೆ ಮೂಡಿಸಬೇಕಿದೆ ಎಂದರು.
ಈ ಕಿರು ಗ್ರಂಥಾಲಯದಲ್ಲಿ ನೂರಾರು ಪುಸ್ತಕಗಳಿದ್ದು ಅವುಗಳನ್ನು ದಿನದಲ್ಲಿ ಒಮ್ಮೆ ಕಿಂಚಿತ್ತು ಸಮಯ ಓದಿದರು ನಮ್ಮಲ್ಲಿ ಚೈತನ್ಯ ಮೂಡುತ್ತದೆ ಎಂದ ಅವರು ಓದುವ ಹವ್ಯಾಸ ಮಕ್ಕಳು ಬೆಳೆಸಿಕೊಳ್ಳಬೇಕೆಂದರು.
ಈ ಸಂದರ್ಭದಲ್ಲಿ ಜಯಕುಮಾರ್ ದೇಸಾಯಿ ಕಾಡ್ಲೂರು, ವಿಜಯ ಕುಮಾರ್ ದೇಸಾಯಿ ಕಾಡ್ಲೂರು, ವೇಣುಗೋಪಾಲ ಆಚಾರ್, ರಾಮರಾವ್ ಗಣೇಕಲ್, ಪವನ್ ಆಚಾರ್, ಸುವರ್ಣಬಾಯಿ ದೇಸಾಯಿ, ಬಿಂದು, ಮಾಧವಿ, ಪಲ್ಲವಿ ಇನ್ನಿತರರು ಇದ್ದರು.