
ಲಿಂಗಸೂಗೂರು,ಏ.೧೦- ಮಕ್ಕಳಲ್ಲಿ ಬಾಲ್ಯದಿಂದಲೇ ಸಂಸ್ಕಾರ, ಜೀವನ ಮೌಲ್ಯಗಳೊಂದಿಗೆ ದೇಶಾಭಿಮಾನ ಮೂಡಿಸುವ ಅಗತ್ಯವಿದೆ ಎಂದು ಹಮ್ ಫೌಂಡೇಶನ್ ಭಾರತ್ ಸಂಸ್ಥೆಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಜಗದೀಶ ಮಳಗಿ ಹೇಳಿದರು.
ಲಿಂಗಸೂಗೂರು ಪಟ್ಟಣದ ಶ್ರೀ ಸಂಗಮೇಶ್ವರ ಕಾಲೋನಿಯಲ್ಲಿ ನಡೆದ ಹಮ್ ಫೌಂಡೇಶನ್ ಭಾರತ್ ನೂತನ ಶಾಖೆಯ ಪೂರ್ವಭಾವಿ ಸಭೆಯಲ್ಲಿ ಭಾರತಾಂಬೆ ಮತ್ತು ಶಿವಶರಣೆ ಅಕ್ಕಮಹಾದೇವಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ಮಾತನಾಡಿದ ಅವರು, ಶಿಕ್ಷಣದ ಜೊತೆಯಲ್ಲೇ ದೇಶ, ಭಾಷೆ, ಸಂಸ್ಕೃತಿಗಳ ಕುರಿತು ಆಳವಾಗಿ ಪರಿಚಯಿಸಿ, ಮಕ್ಕಳನ್ನು ಸಚ್ಛಾರಿತ್ರ್ಯವಂತರನ್ನಾಗಿ ರೂಪಿಸಬೇಕು. ಈ ದಿಶೆಯಲ್ಲಿ ಹಮ್ ಫೌಂಡೇಶನ್ ಭಾರತ್ ಸಂಸ್ಥೆಯು ದೇಶಾದ್ಯಂತ ಹಲವಾರು ಶಾಖೆಗಳನ್ನು ಸ್ಥಾಪಿಸಿ, ಮಹಿಳೆಯರ, ಮಕ್ಕಳ ಮತ್ತು ಸಮಾಜದ ಸರ್ವತೋಮುಖ ಪ್ರಗತಿಗೆ ಶ್ರಮಿಸುತ್ತಿದೆ ಎಂದರು.
ಪ್ರಾಚಾರ್ಯ ಬಸವರಾಜ ವೈ ಮಾತನಾಡಿ, ಸಂಸ್ಕಾರವಂತ ಸಮಾಜ ಕಟ್ಟುವ ಹಮ್ ಫೌಂಡೇಶನ್ ಭಾರತ್ ಸಂಸ್ಥೆಯ ಕಾರ್ಯ ಶ್ಲಾಘನೀಯ. ಸಮಾಜ ಸುಧಾರಣೆಯಲ್ಲಿ ಇಂಥ ಎನ್.ಜಿ.ಓ ಗಳ ಪಾತ್ರ ಹಿರಿದಾಗಿದೆ ಎಂದರು.
ಸ್ತ್ರೀಶಕ್ತಿ ಒಕ್ಕೂಟದ ಜಿಲ್ಲಾಧ್ಯಕ್ಷೆ ಶ್ರೀಮತಿ ಶರಣಮ್ಮ ಹೂನೂರು ಕಾರ್ಯಕ್ರಮ ಉದ್ಘಾಟಿದರು. ಶ್ರೀಮತಿ ಸರೋಜಿನಿದೇವಿ ಆರ್ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಮಾತಾ ಮಾಣಿಕೇಶ್ವರಿ ಆಶ್ರಮದ ಪೂಜ್ಯ ಶ್ರೀ ನಂದೀಶ್ವರಿ ಅಮ್ಮನವರು ಸಾನಿಧ್ಯ ವಹಿಸಿದ್ದರು.
ಶ್ರೀಮತಿ ಉಮಾ ಕುಲಕರ್ಣಿ, ಶ್ರೀಮತಿ ವಿಶಾಲಾಕ್ಷಿ ಪ್ರಾರ್ಥಿಸಿದರು. ದುರ್ಗಾಸಿಂಗ್ ನಿರೂಪಿಸಿದರು. ಬಸವರಾಜ ಖೈರವಾಡಗಿ ಸ್ವಾಗತಿಸಿದರು. ಬೀರಪ್ಪ ಜಗ್ಗಲ್ ವಂದಿಸಿದರು.