ಮಕ್ಕಳಲ್ಲಿ ದೇಶಪ್ರೇಮ, ದೇಶಭಕ್ತಿ, ಸೇವಾಮನೋಭಾವ ಮೂಡಿಸಿದರೆ ಉತ್ತಮ ನಾಗರಿಕರಾಗಿ ಬೆಳೆಯಲು ಸಾಧ್ಯ

ಸಂಜೆವಾಣಿ ವಾರ್ತೆ,
ವಿಜಯಪುರ,ಫೆ.23 :ಸೇವಾದಳದ ಮೂಲಕ ಮಕ್ಕಳಲ್ಲಿ ದೇಶಪ್ರೇಮ, ದೇಶಭಕ್ತಿ, ಸೇವಾಮನೋಭಾವ ಮೂಡಿಸಿದರೆ ಉತ್ತಮ ನಾಗರಿಕರಾಗಿ ಬೆಳೆಯಲು ಸಾಧ್ಯ. ಎಂದು ಶಾಲಾ ಶಿಕ್ಷಣ ಇಲಾಖೆಯ ಜಿಲ್ಲಾ ದೈಹಿಕ ಶಿಕ್ಷಣ ಅಧಿಕಾರಿ ಎ.ಎಸ್. ಲಾಳಸೇರಿ ಹೇಳಿದರು.
ವಿಜಯಪುರ ತಾಲೂಕಿನ ಕನ್ನೂರ ಗ್ರಾಮದ ಕುವೆಂಪು ಶತಮಾನೋತ್ಸವ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಜಿಲ್ಲಾ ಭಾರತ ಸೇವಾದಳ ಸಮಿತಿÀ, ವಿಜಯಪುರ ಶಾಲಾ ಶಿಕ್ಷಣ ಇಲಾಖೆ ಹಾಗೂ ಕುವೆಂಪು ಶತಮಾನೋತ್ಸವ ಕನ್ನೂರ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ಇವರುಗಳ ಸಹಯೋಗದಲ್ಲಿ ಆಯೋಜಿಸಲಾದ ಜಿಲ್ಲಾ ಮಟ್ಟದ ಮಕ್ಕಳ ನಾಯಕತ್ವ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ದೇಶದ ಸೇವೆಗಾಗಿ ಹುಟ್ಟಿಕೊಂಡಿರುವ ಸೇವಾದಳ ಶಿಸ್ತು, ತಾಳ್ಮೆ,ಸೇವಾಮನೋಭಾವದಿಂದ ಬಲಿಷ್ಠ ಸಂಸ್ಥೆಯಾಗಿ ಬೆಳೆದಿದೆ, ರಾಷ್ಟ್ರದ ಗರಿಮೆಗೆ ಗರಿ ಮೂಡಿಸಿದ್ಧು ಸೇವಾದಳ ವಾಗಿದೆ, ಹಾಗೂ ಶಾಲಾ ವಿದ್ಯಾರ್ಥಿಗಳಲ್ಲಿ ದೇಶಭಕ್ತಿ, ರಾಷ್ಟ್ರೀಯ ಭಾವೈಕ್ಯ, ನಿಸ್ವಾರ್ಥ ಸೇವೆಯಂತಹ ಉದಾತ್ತ ಗುಣಗಳನ್ನು ಮೂಡಿಸುವ ಜೊತೆಗೆ ರಾಷ್ಟ್ರಧ್ವಜ, ರಾಷ್ಟ್ರಗೀತೆ ಕುರಿತಾದ ತರಬೇತಿ ನೀಡುತ್ತಿರುವ ಭಾರತ ಸೇವಾದಳದ ಕಾರ್ಯ ಶ್ಲಾಘನೀಯ ಎಂದರು.
ಇನ್ನೋರ್ವ ಅತಿಥಿ ಪ್ರಾಥಮಿಕ ಶಾಲಾ ದೈಹಿಕ ಶಿಕ್ಷಕರ ಸಂಘದ ಜಿಲ್ಲಾ ಅಧ್ಯಕ್ಷ ಎಸ್.ಎಸ್. ಬೇನೂರ ಮಾತನಾಡಿ, ಸೇವಾದಳ ಚಟುವಟಿಕೆಗಳಿಂದ ಪ್ರತಿಯೊಬ್ಬರು ನಿತ್ಯ ಜೀವನದಲ್ಲಿ ಶಿಸ್ತು, ಸಂಯಮ, ದೇಶಭಕ್ತಿ ಬೆಳೆಸಿಕೊಳ್ಳಲು ಸಾಧ್ಯವಾಗುತ್ತದೆ, ಪ್ರತಿ ಶಾಲೆಗಳಲ್ಲಿ ಮಕ್ಕಳಿಗೆ ರಾಷ್ಟ್ರಗೀತೆ, ನಾಡಗೀತೆಯನ್ನು ಸುಶ್ರಾವ್ಯವಾಗಿ ಹಾಡುವುದನ್ನು ಎಲ್ಲಾ ಶಿಕ್ಷಕರು ಕಲಿಸಬೇಕು ಎಂದರು.
ಅಧ್ಯಕ್ಷತೆಯನ್ನು ವಹಿಸಿದ್ದ ಗ್ರಾಮ ಪಂಚಾಯತಿ ಅಧ್ಯಕ್ಷ ವಿಠ್ಠಲ ಭಜಂತ್ರಿ ಅವರು ಮಾತನಾಡಿ, ಮಕ್ಕಳಲ್ಲಿ ನಾಯಕತ್ವ ಗುಣ, ಸೇವಾಮನೋಭವನೆ, ರಾಷ್ಟ್ರೀಯತೆಯನು ಬೆಳೆಸುವಂತ ಇಂತಹ ಕಾರ್ಯಕ್ರಮ ನಮ್ಮ ಗ್ರಾಮದಲ್ಲಿ ನಡೆಯುತ್ತಿರುವದು ಹೆಮ್ಮೆಯ ವಿಷಯ ಎಂದರು.
ಇದೇ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಸದಸ್ಯರಾದ ಮಾಳು ಅಥಣಿ, ಗಣೇಶ ಕೆಂಗಾರ, ಪ್ರಭಾರಿ ಮುಖ್ಯ ಗುರು ಮಾತೆ ಶಾಂತಾ ಸುಣಗಾರ, ಸೇವಾದಳ ಸಂಪನ್ಮೂಲ ಶಿಕ್ಷಕರಾದ ಸೋಮಶೇಖರ ರಾಠೋಡ, ಎಚ್.ಎಸ್. ನಿಮಾದಾರ, ಎಮ್.ಜಿ. ಫರೀಟ್, ಎಲ್,ಎಲ್. ತೊರವಿ, ಶಾಲಾ ಶಿಕ್ಷಕ ವೃಂದ, ಸೇವಾದಳ ಮಕ್ಕಳು ಉಪಸ್ಥಿತರಿದ್ದರು.
ಭಾರತ ಸೇವಾದಳದ ವಲಯ ಸಂಘಟಕ ನಾಗೇಶ ಡೋಣೂರ ಪ್ರಾಸ್ತಾವಿಕವಾಗಿ ಮಾತನಾಡಿದರು, ಆರ್,ಪಿ ಬೋಗಾರ ಕಾರ್ಯಕ್ರಮ ನಿರೂಪಿಸಿದರು, ಎಮ್.ಎಮ್. ತೆಲಗಿ ವಂದಿಸಿದರು.