ಮಕ್ಕಳಲ್ಲಿ ದೇಶಪ್ರೇಮದ ಕಿಚ್ಚು ಹೊತ್ತಿಸಿ: ನಿವೃತ್ತ ಯೋಧ ಜಟ್ಟೆಪ್ಪ ನಾವಿ ಕರೆ

ಸಂಜೆವಾಣಿ ವಾರ್ತೆ,
ವಿಜಯಪುರ, ಮೇ.29:ತಂದೆ- ತಾಯಿ , ಬಂಧು-ಬಳಗ, ಹುಟ್ಟಿದ ಊರನ್ನು ತೊರೆದು ದೇಶ ಸೇವೆಯೇ ಈಶ ಸೇವೆ ಸೇವೆ ಎಂದು ದೇಶಕ್ಕಾಗಿ ತನ್ನ ಪ್ರಾಣವನ್ನೇ ಒತ್ತೆ ಇಟ್ಟು ದೇಶದ ಜನರ ಸುರಕ್ಷತೆಗಾಗಿ ವೈರಿಗಳೊಂದಿಗೆ ಸದಾ ಹೋರಾಡಲು ಸಿದ್ದನಿರುವವನು ಭಾರತ ಮಾತೆ ಹೆಮ್ಮೆಯ ಸುಪುತ್ರ ವೀರ ಯೋಧ ಎಂದು ಇಂಡಿ ತಾಲೂಕಿನ ಶಿರಕನಹಳ್ಳಿ ಗ್ರಾಮದ ನಿವೃತ್ತ ಯೋಧ ಜಟ್ಟೆಪ್ಪ ನಾವಿ ಹೇಳಿದರು.
ವಿಜಯಪುರ ನಗರದ ಕನಕದಾಸ ಬಡಾವಣೆಯಲ್ಲಿರುವ ಸಿದ್ದೇಶ್ವರ ಕೋಚಿಂಗ್ ಕ್ಲಾಸೆಸ್ ಹಾಗೂ ಶಿರಕನಹಳ್ಳಿ ಗ್ರಾಮದ ಗೆಳೆಯರ ಬಳಗ ಹಾಗೂ ಗುರು ಹಿರಿಯರ ವತಿಯಿಂದ ಹಮ್ಮಿಕೊಂಡ ಸನ್ಮಾನ ಕಾರ್ಯಕ್ರಮದಲ್ಲಿ ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದರು. ಸೈನಿಕರು ಅನುಭವಿಸುವ ಕಷ್ಟಗಳು ಅವರ ಜೀವನ ಪರಿಸ್ಥಿತಿಯನ್ನು ನೆನೆಸಿಕೊಂಡರೆ ಕಣ್ಣಂಚಿನಲ್ಲಿ ನೀರು ಬರುತ್ತದೆ. ಆದರೆ ದೇಶ ಸೇವೆಗಾಗಿ ಮಿಡಿಯುವ ಅವರ ಹೃದಯ ಎಂತಹ ಕಠಿಣ ಪರಿಸ್ಥಿತಿಯನ್ನು ಎದುರಿಸಬಲ್ಲದು. ದೇಶ ಸೇವೆ ಮಾಡುವುದು ನಮ್ಮ ಪೂರ್ವಜನ್ಮದ ಪುಣ್ಯ. ಇಂದಿನ ಮಕ್ಕಳಿಗೆ ದೇಶಪ್ರೇಮ ಮೂಡಿಸುವ ಕಥೆ ಕವನಗಳನ್ನು ಹೇಳಿ ಮಕ್ಕಳಲ್ಲಿ ದೇಶ ಪ್ರೇಮದ ಕಿಚ್ಚನ್ನು ಹೊತ್ತಿಸುವ ಕೆಲಸ ಶಾಲಾ ಕಾಲೇಜುಗಳು ಮಾಡಬೇಕಿದೆ. ಒಬ್ಬ ಸೈನಿಕ ಸೈನ್ಯಕ್ಕೆ ಸೇರುವುದು ತುತ್ತು ಅನ್ನಕ್ಕಾಗಿ ಅಲ್ಲ, ದೇಶದ ಜನತೆ ನಿಶ್ಚಿಂತೆಯಿಂದ ತುತ್ತು ಅನ್ನ ತಿನ್ನಲಿ ಎನ್ನುವ ಸದುದ್ದೇಶದಿಂದ ಎಂದರು.
ಶ್ರೀ ಸಿದ್ದೇಶ್ವರ ಕೋಚಿಂಗ್ ಕ್ಲಾಸೆಸ್ ನ ಸಂಸ್ಥಾಪಕ ಅಧ್ಯಕ್ಷ ಸುರೇಶ ಜತ್ತಿ ಮಾತನಾಡಿ, ಪ್ರತಿಷ್ಠಿತ ಸೈನಿಕ ಶಾಲೆಯಲ್ಲಿ ಕಲಿತು ಸೈನಿಕರಾಗಲು ಈಗಿನ ಮಕ್ಕಳಿಗೆ ವಿಫಲವಾದ ಅವಕಾಶಗಳಿವೆ. ಅದಲ್ಲದೆ ವಿವಿಧ ಪರೀಕ್ಷೆಗಳನ್ನು ಎದುರಿಸಿ ಸೇನೆಯಲ್ಲಿ ಉನ್ನತ ಹುದ್ದೆ ಅಲಂಕರಿಸಲು ವ್ಯವಸ್ಥೆ ಇದೆ. ಅದಕ್ಕಾಗಿ ಇಂದಿನ ಮಕ್ಕಳು ದೇಶ ಸೇವೆ ಮಾಡುವ ಅಚಲವಾದ ಗಟ್ಟಿ ಮನಸ್ಸು ಮಾಡಬೇಕು. ಇಂದಿನ ಮಕ್ಕಳಿಗೆ ಶಿಕ್ಷಣ ಜೊತೆಗೆ ಸಂಸ್ಕಾರ ಮತ್ತು ಶಿಸ್ತು ಮುಖ್ಯ ಅದು ಸೈನಿಕ ಶಾಲೆಯಲ್ಲಿ ಹಾಗೂ ಮಿಲಿಟರಿಯಲ್ಲಿ ಸಾಧ್ಯ. ಜಾತಿ, ಮತ, ಪಂಥ ಮೀರಿದ ನಾವುಗಳು ಭಾರತ ಮಾತೆ ಹೆಮ್ಮೆಯ ಸುಪುತ್ರರಾಗಿ ಬಾಳಬೇಕು. ಯೋಧರು ನಿಮ್ಮೆಲ್ಲರ ಜೀವನಕ್ಕೆ ಪ್ರೇರಣೆಯಾಗಬೇಕು ಎಂದರು.
ಮುಖ್ಯ ಅತಿಥಿಗಳಾಗಿ ನಿವೃತ್ತ ಕರ್ನಲ್ ಸಂಗಪ್ಪ ಮಾತನಾಡಿ, ತ್ಯಾಗ, ಬಲಿದಾನದಿಂದ ನಮಗೆ ಸ್ವಾತಂತ್ರ್ಯ ಸಿಕ್ಕಿದೆ. ಮಳೆ, ಚಳಿ ಬಿಸಿಲಿನಲ್ಲಿ ವಾತಾವರಣದೊಂದಿಗೆ ಹೋರಾಡುತ್ತಾ, ವೈರಿಗಳೊಂದಿಗೆ ಹೋರಾಡದೇ ಒಂದು ದೊಡ್ಡ ಸವಾಲು. ಸೈನಿಕ ನಿವೃತ್ತಿ ಹೊಂದಿ ಮರಳಿ ತಾಯ್ನಾಡಿಗೆ ಬಂದರೆ ಅದು ಅವರ ಪುನರ್ಜನ್ಮ. ದೇಶ ರಕ್ಷಣೆಗೆ ಹಿಂಜರಿಯಬಾರದು. ದೇಶ ಸೇವೆ ಮಾಡುವುದು ಅದೃಷ್ಟ ಎಂದು ಹೇಳಿದರು.
ಅತಿಥಿಗಳಾಗಿ ಭಾಗವಹಿಸಿದ ಖ್ಯಾತ ಸಾಹಿತಿ ರೇವಣಸಿದ್ದಪ್ಪ ಪಟ್ಟಣಶೆಟ್ಟಿ ಮಾತನಾಡಿ,
ಹೆತ್ತ ತಾಯಿ ಹೊತ್ತ ನಾಡು ಸ್ವರ್ಗಕ್ಕಿಂತ ಮಿಗಿಲು ಎನ್ನುವ ಹಾಗೆ ಪ್ರತಿಯೊಬ್ಬರೂ ತಮ್ಮ ದೇಶ ಹಾಗೂ ದೇಶ ಕಾಯುವ ಯೋಧರನ್ನು ಅತ್ಯಂತ ಗೌರವದಿಂದ ಕಾಣಬೇಕು. ಯಾವುದೋ ಸಿನೆಮಾ ನೋಡಿ ಯಾರನ್ನೋ ಹೀರೋ ಮಾಡಿ ನಮ್ಮತನವನ್ನು ಬಿಟ್ಟು ಬದುಕುವುದು ನಮ್ಮ ದೇಶದ ಸಂಸ್ಕøತಿಯಲ್ಲ.
ನಾವು ಮನೆಯಲ್ಲಿ ನೆಮ್ಮದಿಯಿಂದ ನಿದ್ದೆ ಮಾಡಬೇಕಾದರೆ, ತಮ್ಮೆಲ್ಲ ಸರ್ವಸ್ವವನ್ನೂ ತ್ಯಾಗ ಮಾಡಿ ದೇಶವೇ ಉಸಿರು ಭಾರತಮಾತೆಯ ರಕ್ಷಣೆಯೇ ನಮ್ಮ ಹೊಣೆಯೆಂದು,ತಮ್ಮ ಕುಟುಂಬವನ್ನು ತೊರೆದು, ಇಡೀ ದೇಶವೇ ನಮ್ಮ ಕುಟುಂಬ ದೇಶದ ಜನರೇ ನಮ್ಮ ಬಂದು ಬಾಂಧವರು ಎಂದು ಬಂಧನ ಬೆಸೆಯುವವರು ನಮ್ಮ ಹೆಮ್ಮೆಯ ಯೋಧರು ಎಂದರು.
ಮುಖ್ಯ ಅತಿಥಿ ಎಸ್.ಎಸ್. ದೊಡ್ಡಮನಿ, ನಿವೃತ್ತ ಯೋಧರಾದ ಲೆಫ್ಟಿನೆಂಟ್ ಕರ್ನಲ್ ಸಂಗಪ್ಪ, ಎಂ.ಎಂ. ಲೋಣಿ ಮಾತನಾಡಿದರು.
ಇದೇ ಸಂದರ್ಭದಲ್ಲಿ ವೀರ ಯೋಧನ ಮಾತಾ ಪಿತರಾದ ಭೀಮರಾಯ ಮತ್ತು ನೀಲಮ್ಮ ನಾವಿ ದಂಪತಿಗಳಿಗೆ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ನೀಲಾ ಜತ್ತಿ, ಶಿವಕುಮಾರ ನಾವಿ, ಜ್ಯೋತಿ ಪ್ರಕಾಶ, ಸಂಗೊಂಡ ಕೋರಿ, ಮಂಜು ಸೇರಿದಂತೆ ಶಿರಕನಹಳ್ಳಿ ಗ್ರಾಮದ ಗೆಳೆಯರ ಬಳಗ ಹಾಗೂ ಗುರುಹಿರಿಯರು ಉಪಸ್ಥಿತರಿದ್ದರು.