ಮಕ್ಕಳಲ್ಲಿ ಗ್ರಂಥಾಲಯ ಆಸಕ್ತಿ ಬೆಳಸಲು ಸಲಹೆ

ಕೋಲಾರ.ನ,೨೧-ಜಿಲ್ಲೆಯ ಎಲ್ಲ ಗ್ರಾಪಂಗಳಲ್ಲಿ ಮಕ್ಕಳ ಗ್ರಾಮ ಸಭೆಯನ್ನು ಕಡ್ಡಾಯವಾಗಿ ನಡೆಸುವ ಜತೆಗೆ ಓದುವ ಬೆಳಕು ಕಾರ್ಯಕ್ರಮದಡಿ ಮಕ್ಕಳನ್ನು ಗ್ರಂಥಾಲಯಕ್ಕೆ ಸೆಳೆಯುವ ಕಾರ್ಯ ಆಗಬೇಕೆಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಉಮಾಮಹದೇವನ್ ಪಿಡಿಒ ಹಾಗೂ ಗ್ರಾಪಂ ಆಡಳಿತಾಧಿಕಾರಿಗಳಿಗೆ ಸೂಚನೆ ನೀಡಿದರು
ಜಿಪಂ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿ ಮಕ್ಕಳು ಇಂದಿನ ಪ್ರಜೆಗಳು, ಅವರಿಗೂ ಹಕ್ಕುಗಳು ಇದೆ.ಮಕ್ಕಳ ಹಕ್ಕುಗಳ ಕುರಿತು ಗ್ರಾಮ ಸಭೆಗಳನ್ನು ನಡೆಸಬೇಕು ಎಂದು ಸೂಚಿಸಿದ ಅವರು ಗ್ರಾಪಂ. ಮಟ್ಟದ ಶಿಕ್ಷಣ ಕಾರ್ಯಪಡೆ ಸಕ್ರೀಯವಾಗಿ ಕಾರ್ಯನಿರ್ವಹಿಸುವ ಜತೆಗೆ ಮಕ್ಕಳ ಹಕ್ಕುಗಳ ಕುರಿತು ಗಮನಹರಿಸಬೇಕು ೦ರಿಂದ ೧೮ ವರ್ಷದ ಮಕ್ಕಳ ಆರೋಗ್ಯ ಸೇವೆ, ಶಾಲಾ ದಾಖಲಾತಿ ಮಾಡುವುದು ಕಾರ್ಯಪಡೆಯ ಜವಾಬ್ದಾರಿಯಾಗಿದೆ ಎಂದರು.
ರಾಜ್ಯ ಸರ್ಕಾರ ಜಾರಿಗೆ ತಂದಿರುವ ಓದುವ ಬೆಳಕು ಕಾರ್ಯಕ್ರಮದಡಿ ಗ್ರಂಥಾಲಯಗಳನ್ನು ಮಕ್ಕಳ ಸ್ನೇಹಿಯನ್ನಾಗಿಸುವುದು, ಉಚಿತ ಸದಸ್ಯತ್ವ ನೀಡುವ ಮೂಲಕ ಮಕ್ಕಳಿಗೆ ಗ್ರಂಥಾಲಯದ ಸೌಲಭ್ಯವನ್ನು ಒದಗಿಸಲಾಗುತ್ತಿದೆ. ಗ್ರಂಥಾಲಯಗಳು ಜ್ಞಾನ ಕೇಂದ್ರಗಳಾಗಬೇಕು. ವಾರದಲ್ಲಿ ಒಂದು ಕಾರ್ಯಕ್ರಮಗಳನ್ನು ಆಯೋಜಿಸಿ ಮಕ್ಕಳನ್ನು ಆಕರ್ಷಿಸಬೇಕು ಎಂದು ಹೇಳಿದರು.
ನರೇಗಾ ಯೋಜನೆಯನ್ನು ಬಳಸಿಕೊಂಡು ರಾಜೀವ್‌ಗಾಂಧಿ ಸೇವಾ ಕೇಂದ್ರಗಳನ್ನು ನಿರ್ಮಿಸಿದರೆ ಇದರಲ್ಲೇ ಗ್ರಂಥಾಲಯ, ಮಹಿಳಾ ಸ್ವಸಹಾಯ ಸಂಘಗಳಿಗೆ ಕಚೇರಿಯನ್ನು ಒದಗಿಸಲು ಅವಕಾಶವಿದೆ. ನರೇಗಾದಡಿ ೫ ಲಕ್ಷ ರೂ, ಪಂಚಾಯಿತಿಯ ಹಣಕಾಸು ಆಯೋಗದ ಅನುದಾನ, ಸ್ವಂತ ಸಂಪನ್ಮೂಲ ೫ ಲಕ್ಷ ರೂ. ಬಳಸಿಕೊಂಡು ಅಂಗನವಾಡಿ ಕೇಂದ್ರಗಳಿಗೆ ಕಟ್ಟಡ ನಿರ್ಮಿಸಲು ಗ್ರಾಪಂ ಆಡಳಿತಾಧಿಕಾರಿಗಳು ವಿಶೇಷ ಗಮನ ಹರಿಸಬೇಕೆಂದರು.
ಅಭಿವೃದ್ಧಿ ಕಾರ್ಯಗಳಿಗೆ ಆದಾಯ ಸಂಗ್ರಹಣೆ ಸರ್ಕಾರದ ಪ್ರಾಥಮಿಕ ಕರ್ತವ್ಯ. ವೈಜ್ಞಾನಿಕವಾಗಿ ತೆರಿಗೆ ಪರಿಷ್ಕರಣೆ ಮಾಡಿ ಸಿಇಒ ಸಮಿತಿಗೆ ಕಳುಹಿಸಿಕೊಡಿ, ಈ ಕೆಲಸ ಸಮರೋಪಾದಿಯಲ್ಲಿ ನಡೆಯಬೇಕು ಎಂದರಲ್ಲದೆ ಡಿಸೆಂಬರ್ ತಿಂಗಳಾಂತ್ಯದೊಳಗೆ ಪರಿಷ್ಕರಣೆ ಮಾಡಿದರೆ ವಸೂಲಾತಿಗೆ ಮುಂದಿನ ಮೂರು ತಿಂಗಳಷ್ಟೇ ಸಿಗುತ್ತದೆ. ಹಾಗಾಗಿ ಈ ಕೆಲಸವನ್ನು ತ್ವರಿತಗತಿಯಲ್ಲಿ ಮಾಡಬೇಕು ಎಂದು ಸೂಚಿಸಿದರು.
ನರೇಗಾ ಯೋಜನೆಯಲ್ಲಿ ಮಹಿಳೆಯರ ಭಾಗವಹಿಸುವಿಕೆಯನ್ನು ಹೆಚ್ಚು ಮಾಡಬೇಕು. ಜಿಲ್ಲೆಯಲ್ಲೂ ಮಹಿಳೆಯರು ಅದರಲ್ಲೂ ಎಸ್ಸಿಎಸ್ಟಿ ಸಮುದಾಯದ ಮಹಿಳೆಯರ ಪಾಲ್ಗೊಳ್ಳುವಿಕೆ ಕಡಿಮೆ ಇದೆ. ಈ ದಿಸೆಯಲ್ಲಿ ಪ್ರತಿ ಪಂಚಾಯಿತಿಯಲ್ಲಿ ವಿಶೇಷ ಪ್ರಯತ್ನ ಮಾಡಬೇಕು ಎಂದು ಸಲಹೆ ನೀಡಿದರು.
೧೪ನೇ ಹಣಕಾಸು ಆಯೋಗದಡಿ ಬಿಡುಗಡೆಯಾದ ಅನುದಾನ ಬಳಸಲು ಇದು ಕಡೇ ಅವಕಾಶ. ಉಳಿಕೆ ಅನುದಾನದ ಬಗ್ಗೆ ಇ ಗ್ರಾಮ ಸ್ವರಾಜ್ ಪೋರ್ಟಲ್‌ನಲ್ಲಿ ದಾಖಲಿಸಿ ಮನವಿ ಕಳುಹಿಸಿಕೊಡಿ, ಡಿಸೆಂಬರ್ ೧೫ರ ಒಳಗೆ ಅನುದಾನ ಖರ್ಚು ಮಾಡಬೇಕಿದೆ ಎಂದರು.ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿನ ೧೭೬೯ ಅಂಗನವಾಡಿ ಕೇಂದ್ರದ ಪೈಕಿ ೧೦೧೩ ಸ್ವಂತ ಕಟ್ಟಡ ಹೊಂದಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕಿ ಎಂಜಿ ಪಾಲಿ ಮಾಹಿತಿ ನೀಡಿದಾಗ ಸ್ಪಂದಿಸಿದ ಉಸ್ತುವಾರಿ ಕಾರ್ಯದರ್ಶಿಗಳು ೪೦/೫೦ ಅಳತೆಯ ನಿವೇಶನ ಗುರುತಿಸಿ ನರೇಗಾದಡಿ ಕಟ್ಟಡ ನಿರ್ಮಿಸಿಕೊಳ್ಳಲು ಕ್ರಮ ವಹಿಸುವಂತೆ ಸೂಚಿಸಿದರು.
ಆರ್‌ಡಿಪಿಆರ್ ನಿರ್ದೇಶಕ ಅಶ್ರುಫುಲ್ ಹಸನ್ ಮಾತನಾಡಿ ಮಕ್ಕಳ ಗ್ರಾಮಸಭೆಗಳು ವೃತ್ತಿಮಾರ್ಗದರ್ಶನ, ಕೌಶಲ್ಯ ಅಭಿವೃದ್ಧಿ ಕುರಿತು ಮಾಹಿತಿ ನೀಡಬೇಕು, ಮಹಿಳಾ ಗ್ರಾಮ ಸಭೆಗಳಲ್ಲಿ ಸಬಲೀಕರಣ , ಮಹಿಳೆಯರ ಹಕ್ಕುಗಳ ಕುರಿತು ಚರ್ಚೆ ಆಗಬೇಕು ಎಂದು ತಿಳಿಸಿದರು.ಜಿಪಂ ಸಿಇಒ ಎಂ.ಆರ್. ರವಿಕುಮಾರ್ ಅವಶ್ಯವಿರುವ ಅನುದಾನಕ್ಕೆ ತಾವು ಒತ್ತಾಸೆಯಾಗಿ ನಿಲ್ಲುತ್ತೇವೆ ಎಂದು ತಿಳಿಸಿದರು.ಜಿಲ್ಲಾಧಿಕಾರಿ ಸಿ ಸತ್ಯಭಾಮ ಮಾತನಾಡಿ, ಜಿಲ್ಲೆಯಲ್ಲಿ ಕರೊನಾ ನಿಯಂತ್ರಣದಲ್ಲಿದೆ. ಕೋವಿಡ್ ಮಾರ್ಗಸೂಚಿ ಉಲ್ಲಂಘನೆ ಸಂಬಂಧ ಗ್ರಾಮೀಣ ಭಾಗದಲ್ಲಿ ಈವರೆಗೆ ೨೧೮೭ ಕೇಸ್‌ಗಳನ್ನು ಹಾಕಿ ೧.೦೩ ಲಕ್ಷ ದಂಡ ವಸೂಲಿ ಮಾಡಲಾಗಿದೆ. ಆದರೂ ಗ್ರಾಮೀಣ ಮಟ್ಟದ ಟಾಸ್ಕ ಫೊರ್ಸ್ ಸಮಿತಿ ಸಕ್ರೀಯವಾಗಿ ಕೆಲಸ ನಿರ್ವಹಿಸುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಜಿಪಂ ಉಪಕಾರ್ಯದರ್ಶಿ ಕೆ.ಪಿ. ಸಂಜೀವಪ್ಪ, ಎಡಿಸಿ ಡಾ. ಸ್ನೇಹ ಸೇರಿದಂತೆ ಜಿಲ್ಲಾ ಮಟ್ಟದ ಎಲ್ಲ ಇಲಾಖೆ ಅಧಿಕಾರಿಗಳು, ಗ್ರಾಪಂ ಆಡಳಿತಾಧಿಕಾರಿ ಮತ್ತು ಪಿಡಿಒಗಳು ಇದ್ದರು.