ಮಕ್ಕಳಲ್ಲಿ ಕಷ್ಟಗಳನ್ನು ಎದುರಿಸುವ ಮನೋಸ್ಥೈರ್ಯ ಬೆಳೆಸಿ

ಬೀದರ್: ಮಾ.18:ಇಂದಿನ ಮಕ್ಕಳ ಜೀವನದಲ್ಲಿ ಎದುರಾಗುವ ಕಷ್ಟಗಳನ್ನು ಸವಲಾಗಿ ಸ್ವೀಕರಿಸಿಕೊಂಡು ಎದುರಿಸುವ ಮನೋಸ್ಥೈರ್ಯವನ್ನು ಅವರಲ್ಲಿ ಬೆಳೆಸಬೇಕಾದ ಅವಶ್ಯಕತೆಯಿದೆ’ ಎಂದು ಜ್ಞಾನಸುಧಾ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಡಾ. ಪೂರ್ಣಿಮಾ ಜಿ. ಅವರು ಅಭಿಪ್ರಾಯಪಟ್ಟರು.
ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ನಗರದ ಮಾಮನಕೇರೆಯಲ್ಲಿರುವ ಜ್ಞಾನಸುಧಾ ವಿದ್ಯಾಲದಯದ ಜ್ಞಾನರಂಗ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ‘ತಾಯಂದಿರ ದಿನಾಚರಣೆ’ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
‘ಮಕ್ಕಳ ವ್ಯಕ್ತಿತ್ವ ಉತ್ತಮವಾಗಿ ರೂಪಿಸುವಲ್ಲಿ ತಾಯಂದಿರ ಪಾತ್ರ ಬಹಳ ಮಹತ್ವದ್ದಾಗಿದೆ. ಇಂದಿನ ಮಕ್ಕಳು ಹಲವಾರು ರೀತಿಯ ಮಾನಸಿಕ ಒತ್ತಡಕ್ಕೆ ಒಳಗಾಗಿ ಕಲಿಕೆಯಿಂದ ಹಿಂಜರಿಯುತ್ತಿದ್ದಾರೆ. ಆದ್ದರಿಂದ ಅವರ ಜೀವನದಲ್ಲಿ ಎದುರಾಗುವ ಸಮಸ್ಯೆಗಳನ್ನು ಅವರೇ ಬಗೆಹರಿಸಿಕೊಳ್ಳುವ ಆತ್ಮವಿಶ್ವಾಸ ಹೆಚ್ಚಿಸಬೇಕಾಗಿದೆ’ ಎಂದು ತಿಳಿಸಿದರು.
‘ಮಕ್ಕಳನ್ನು ಪಾಲನೆ ಪೋಷಣೆ ಮಾಡುವುದೆಂದರೆ ತಾಯಿ ಪಾಲಿಗೆ ಒಂದು ರೀತಿಯ ತಪಸ್ಸು ಮಾಡಿದ ಹಾಗೆ. ಮಕ್ಕಳ ಪ್ರತಿಯೊಂದು ನಡವಳಿಕೆಯ ಮೇಲೆ ಗಮನವಿಡಬೇಕು. ತಪ್ಪು ಮಾಡಿದಾಗ ತಿದ್ದಿ ಬುದ್ಧಿ ಹೇಳಬೇಕು. ಪಾಲಕರಾದವರು ಮಕ್ಕಳ ಮುಂದೆ ಜಗಳವಾಡಿದರೆ ಅವರು ಅದನ್ನೇ ಹೆಚ್ಚಾಗಿ ಅನುಕರಣೆ ಮಾಡುವ ಸಾಧ್ಯತೆ ಇರುತ್ತದೆ. ಆದ್ದರಿಂದ ಪಾಲಕರು ಎಂದೂ ಮಕ್ಕಳೆದುರು ಜಗಳವಾಡಬಾರದು’ ಎಂದು ಮನವಿ ಮಾಡಿದರು.
‘ಮಕ್ಕಳ ಸರ್ವತೋಮುಖ ಬೆಳೆವಣಿಗೆಯಲ್ಲಿ ಶಾಲೆಯ ಪಾತ್ರ ಎಷ್ಟು ಮುಖ್ಯವೋ, ಪಾಲಕರ ಪಾತ್ರವೂ ಅಷ್ಟೇ ಮುಖ್ಯವಾಗಿದೆ. ಮಕ್ಕಳಲ್ಲಿ ಉತ್ತಮ ಕನಸುಗಳನ್ನು ಬಿತ್ತಿ, ಉದಾತ್ತವಾದ ಆಲೋಚನಾ ಶಕ್ತಿಯನ್ನು ಬೆಳೆಸಿದಾಗ ಮಾತ್ರ ಅವರು ಭವಿಷ್ಯದಲ್ಲಿ ವಿಶ್ವದ ನಾಯಕನಾಗಿ ಹೊರಹೊಮ್ಮಲು ಸಾಧ್ಯವಿದೆ’ ಎಂದು ಹೇಳಿದರು.
ಬೀದರ್ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ವೈದ್ಯಾರಾದ ಡಾ. ಪುಷ್ಪಾ ಅವರು ಮಾತನಾಡಿ, ‘ಮಕ್ಕಳಲ್ಲಿ ಮಾನವೀಯ ಗುಣಗಳನ್ನು ಬೆಳೆಸುವಲ್ಲಿ ತಾಯಿಯ ಪಾತ್ರ ಬಹಳ ಮುಖ್ಯವಾಗಿದೆ. ಇನ್ನೊಬ್ಬರೊಂದಿಗೆ ಯಾವ ರೀತಿ ಮಾತನಾಡಬೇಕು ಎಂಬ ಕೌಶಲ್ಯ ಅವರಲ್ಲಿ ಬೆಳೆಸಬೇಕು. ತಮ್ಮ ಮಕ್ಕಳನ್ನು ಹೆಚ್ಚಿನ ಅಂಕ ಪಡೆದ ಮಗುವಿಗೆ ಹೋಲಿಕೆ ಮಾಡಿ ಅಪಮಾನ ಮಾಡಿದರೆ ಅವರು ಒತ್ತಡಕ್ಕೆ ಒಳಗಾಗಿ ಮಾನಸಿಕ ಖಿನ್ನತೆಗೆ ಒಳಗಾಗುವ ಸಾಧ್ಯತೆ ಇರುತ್ತದೆ’ ಎಂದು ತಿಳಿಸಿದರು.
‘ಮಕ್ಕಳು ಹೆಚ್ಚಾಗಿ ತಾಯಿಯನ್ನೇ ಅನುಕರಣೆ ಮಾಡುತ್ತಾರೆ. ಆದ್ದರಿಂದ ತಾಯಂದಿರು ಮಕ್ಕಳ ಎದುರು ಹೆಚ್ಚಾಗಿ ಪುಸ್ತಕಗಳನ್ನು ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು’ ಎಂದು ಸಲಹೆ ಮಾಡಿದರು.
ಜ್ಞಾನಸುಧಾ ವಿದ್ಯಾಲಯದ ನಿರ್ದೇಶಕರಾದ ಡಾ. ಮುನೇಶ್ವರ ಲಾಖಾ ಅವರು ಮಾತನಾಡಿ, ‘ತಾಯಿ ಜವಾಬ್ದಾರಿ ಕೇವಲ ಮಕ್ಕಳನ್ನು ಶಾಲೆಗೆ ಕಳುಹಿಸುವುದೊಂದೇ ಅಲ್ಲ, ಆ ಜವಾಬ್ದಾರಿಯೊಂದಿಗೆ ಮಕ್ಕಳ ಪ್ರತಿಯೊಂದು ವರ್ತನೆ ಗಮನಿಸಬೇಕು. ಯಾವುದೇ ಕಾರಣಕ್ಕೂ ನಕರಾತ್ಮಕ ವರ್ತನೆಗಳನ್ನು ಮುಚ್ಚಿಡದೆ ಅದನ್ನು ಶಾಲೆಯಲ್ಲಿ ಶಿಕ್ಷಕರಿಗೆ ತಿಳಿಸಿದಾಗ ಮಾತ್ರ ಆ ವರ್ತನೆಯನ್ನು ತಿದ್ದಲು ಸಾಧ್ಯವಾಗುತ್ತದೆ’ ಎಂದು ತಿಳಿಸಿದರು.
‘ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗಾಗಿ ನಮ್ಮ ವಿದ್ಯಾಲಯದಲ್ಲಿ ಪಠ್ಯ ಚಟುವಟಿಕೆಯೊಂದಿಗೆ ಹಲವಾರು ಬಗೆಯ ಪಠ್ಯೇತರ ಚಟುವಟಿಕೆಗಳನ್ನು ಆಯೋಜಿಸಲಾಗುತ್ತಿದೆ. ಪಠ್ಯೇತರ ಚಟುವಟಿಕೆಗಳು ಮಕ್ಕ:ಳಲ್ಲಿ ಕ್ರಿಯಾಶೀಲತೆ ಬೆಳೆಸಲು ಸಹಕಾರಿಯಾಗಿವೆ. ಆದ್ದರಿಂದ ತಮ್ಮ ಮಕ್ಕಳಿಗೆ ಇಂತಹ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಂತೆ ಪ್ರೋತ್ಸಾಹಿಸಬೇಕು’ ಎಂದು ಸಲಹೆ ಮಾಡಿದರು.
‘ಮಕ್ಕಳಲ್ಲಿ ಆತ್ಮವಿಶ್ವಾಸ ಬೆಳೆಸುವ ದಿಸೆಯಲ್ಲಿ ಜ್ಞಾನಸುಧಾ ವಿದ್ಯಾಲಯ ನಿರಂತರವಾಗಿ ಶ್ರಮಿಸುತ್ತಿದ್ದು, ಅದಕ್ಕಾಗಿ ಹಲವಾರು ರೀತಿಯ ಪಠ್ಯೇತರ ಚಟುವಟಿಕೆಗಳನ್ನು ಹಮ್ಮಿಕೊಳ್ಳುತ್ತಿರುವುದು ಬಹಳ ಶ್ಲಾಘನೀಯವಾಗಿದೆ’ ಎಂದು ಜಿಎನ್‍ಡಿ ಎಂಜಿನಿಯರ್ ಕಾಲೇಜಿನ ಉಪನ್ಯಾಸಕರಾದ ಸೋನಿ ಮಾನಕರಿ ಮೆಚ್ಚುಗೆ ವ್ಯಕ್ತಪಡಿಸಿದರು.
ಜ್ಞಾನಸುಧಾ ಶಿಕ್ಷಣ ಸಂಸ್ಥೆಯ ಖಜಾಂಚಿ ಸಂಗೀತಾ ಲಾಖಾ, ಜ್ಞಾನಸುಧಾ ವಿದ್ಯಾಲಯದ ಪ್ರಾಚಾರ್ಯರಾದ ಸುನೀತಾ ಸ್ವಾಮಿ, ಉಪಪ್ರಾಚಾರ್ಯರಾದ ಕಲ್ಪನಾ, ಮೇಲ್ವಿಚಾರಕರಾದ ರಜನಿ, ಸಾಯಿಗೀತಾ, ವಸಿಮಾ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ತಾಯಂದಿಯರಿಗೆ ಮ್ಯೂಜಿಕಲ್ ಚೇರ್ ಸೇರಿದಂತೆ ವಿವಿಧ ಆಟಗಳನ್ನು ಆಯೋಜಿಸಲಾಗಿತ್ತು. ತಾಯಂದಿರು ಆಟಗಳನ್ನು ಆಡಿ ಪಾರಿತೋಷಕಗಳನ್ನು ಪಡೆದು ಸಂಭ್ರಮಿಸಿದರು.