ಮಕ್ಕಳಲ್ಲಿ  ಕಲಿಕೆಗೆ ಅಗತ್ಯವಿರುವ ಏಕಾಗ್ರತೆ ಬೇಕಿದೆ

ಸಂಜೆವಾಣಿ ವಾರ್ತೆ

ಶಿವಮೊಗ್ಗ.ಮಾ.೧೦ :ಮಕ್ಕಳ ಕಲಿಕೆ ಮತ್ತು ಶಿಕ್ಷಣ ವ್ಯವಸ್ಥೆಯ ಕರ್ತವ್ಯದಲ್ಲಿ ದೈಹಿಕ ಶಿಕ್ಷಕರ ಪಾತ್ರ ಅತಿ ಮುಖ್ಯ, ಪ್ರಾತ್ಯಕ್ಷಿಕೆಯ ದೈಹಿಕ ಶ್ರಮದಿಂದ ಮಾತ್ರ ಹಾಗೂ ದೈಹಿಕ ಕಸರತ್ತುಗಳಿಂದ ಮಕ್ಕಳ ಮನೋವಿಜ್ಞಾನ ವೃದ್ಧಿಸಲು ಹೇಗೆ ಸಾಧ್ಯವೋ ಅದರಲ್ಲಿ ಸಕ್ರಿಯರಾಗುವ ದೈಹಿಕ ಶಿಕ್ಷಕರ ಪಾತ್ರ,ಶಿಕ್ಷಣ ವ್ಯವಸ್ಥೆಯಲ್ಲಿ ಅತಿ ಮುಖ್ಯ ಎಂದು ಶಿವಮೊಗ್ಗ ಕ್ಷೇತ್ರಶಿಕ್ಷಣಾಧಿಕಾರಿ  ಪಿ. ನಾಗರಾಜ್  ತಿಳಿಸಿದರು.ಅವರು ಶಾಲಾ ಶಿಕ್ಷಣ ಇಲಾಖೆ, ಶಿವಮೊಗ್ಗ. ಹಾಗೂ ಜಿಲ್ಲಾ ಪ್ರಾಥಮಿಕ ಶಾಲಾ ದೈಹಿಕ ಶಿಕ್ಷಣ ಶಿಕ್ಷಕರ  ಸಂಘ, ಶಿವಮೊಗ್ಗ. ಇವರ ಸಂಯುಕ್ತ ಆಶ್ರಯದಲ್ಲಿ ರಾಜ್ಯ ಸರ್ಕಾರಿ ನೌಕರರ ಭವನದಲ್ಲಿ ಜಿಲ್ಲಾ ದೈಹಿಕ ಶಿಕ್ಷಣ ಶಿಕ್ಷಕರಿಗೆ ಒಂದು ದಿನದ ಕಾರ್ಯಾಗಾರದಲ್ಲಿ ಮಾತನಾಡುತ್ತಾ, ಪ್ರತಿದಿನ ಮಕ್ಕಳಿಗೆ ಕನಿಷ್ಠ 60 ನಿಮಿಷಗಳ ಕಾಲ ದೈಹಿಕ ಕಾರ್ಯ ಚಟುವಟಿಕೆಯಲ್ಲಿ ತೊಡಗಿಸಿದಾಗ ಮಕ್ಕಳಲ್ಲಿ ಕಲಿಕೆಯ ಕಲಿಕೆಗೆ ಅಗತ್ಯವಿರುವ ಏಕಾಗ್ರತೆ ಸಾಧಿಸಿ, ಜ್ಞಾಪಕ ಶಕ್ತಿ ಬೆಳೆಯಲು ಸಹಾಯವಾಗುತ್ತದೆ.ಆಗ ಮಕ್ಕಳು ಕಲಿಕೆಯಲ್ಲಿ ಫೋಕಸ್ ಆಗಲು ಸಾಧ್ಯ. ಇದು ಅಧ್ಯಯನದಿಂದ ಸಾಬೀತಾಗಿದೆ ಎಂದು ಅವರು ಹೇಳಿದರು.  ಶಾಲೆಯಲ್ಲಿ ಎಲ್ಲಾ ಶಿಕ್ಷಕರು ಆಯಾ ವಿಷಯಗಳಿಗೆ ಅವುಗಳ ಬೋಧನೆಗೆ ಸಂಬಂಧ ಪಟ್ಟವರಿರುತ್ತಾರೆ. ಆದರೆ ದೈಹಿಕ ಶಿಕ್ಷಕರಿಂದ ಶಾಲೆಯಲ್ಲಿ ಶಿಸ್ತು ಮಾತ್ರವಲ್ಲ ಮಕ್ಕಳ ಅಚ್ಚುಮೆಚ್ಚಿನ ಶಿಕ್ಷಕರಾಗಿ ಗುರುತಿಸಿಕೊಳ್ಳುವ ಅವಕಾಶ ಪಡೆದಿರುತ್ತಾರೆ.ಅವರ ಕಲಿಕೆಯಿಂದ ಹಾಗೂ ಅವರ ತರಬೇತಿಯಿಂದ ಮಕ್ಕಳ ಕಲಿಕೆ ಉನ್ನತ ಮಟ್ಟಕ್ಕೆ ತಲುಪಲು ಮೆಟ್ಟಿಲಾಗುತ್ತದೆ ಎಂದು ಹೇಳಿದರು. ಮಕ್ಕಳಲ್ಲಿ ದೈಹಿಕ ಶ್ರಮದ ಜೊತೆ ಮನೋವಿಜ್ಞಾನದ ಭಾವನೆಗಳನ್ನು ವೃದ್ಧಿಸಿ ಮಾನಸಿಕವಾದ ಸ್ಥಿತಿ ಆತ್ಮಸ್ಥೈರ್ಯ,ಆತ್ಮವಿಶ್ವಾಸ ಮೂಡಿಸುವ ಜೊತೆ ಮಕ್ಕಳ ಕಲಿಕೆಗೆ ಭದ್ರಬುನಾದಿ ಹಾಕಿ ಕೊಡುವ ಏಕಾಗ್ರತೆಯನ್ನು ಇಲ್ಲಿ ಕಲಿಯಲು, ರೂಪಿಸಿಕೊಳ್ಳಲು ಸಾಧ್ಯ ಎಂದರು. ದೈಹಿಕ ಶಿಕ್ಷಕರು ಈ ಬಗ್ಗೆ ಅತ್ಯಂತ ವಿಶೇಷವಾಗಿ ಗಮನಿಸಬೇಕು ತಮ್ಮನ್ನು ಮಕ್ಕಳು ಅತ್ಯಂತ ಸೂಕ್ಷ್ಮವಾಗಿ ಗುರುತಿಸುತ್ತಾರೆ ಎಂಬುದನ್ನು ಮರೆಯದಿರಿ ತಮ್ಮ ಒಳ್ಳೆಯ ಗುಣಗಳು ಮಕ್ಕಳಿಗೆ ಮಾರ್ಗದರ್ಶಿಯಾಗಲಿ ಎಂದು ಹೇಳಿದರು.ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ರುದ್ರಪ್ಪ, ತಾಲ್ಲೂಕು ಸಂಘದ ಅಧ್ಯಕ್ಷ,ದಿನೇಶ್, ದೈಹಿಕ ಶಿಕ್ಷಣ ಅಧಿಕಾರಿ,ಬಿ ಎಚ್.ನಿರಂಜನ್ ಮೂರ್ತಿ. ಸಂಪನ್ಮೂಲ ವ್ಯಕ್ತಿಗಳಾದ ಹರಿಪ್ರಸಾದ್,ಜಿಲ್ಲಾ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ್, ಜಿಲ್ಲಾ ಕಾರ್ಯದರ್ಶಿ ಡಿ.ಪಿ.ರವಿಕುಮಾರ್. ಅನುದಾನ ರಹಿತ ಶಾಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ರಾ.ಹ.ತಿಮ್ಮನಹಳ್ಳಿ, ಲಕ್ಷ್ಮಣ್, ಆನಂದಪ್ಪ, ಸಿಂಗ್ ಇನ್ನು ಮುಂತಾದವರು ಉಪಸ್ಥಿತರಿದ್ದರು.ಇದೇ ಸಂದರ್ಭದಲ್ಲಿ ತಾಲ್ಲೂಕು ಸಂಘದ ಅಧ್ಯಕ್ಷರಾಗಿ , ಜಿಲ್ಲಾ ಪ್ರಾಥಮಿಕ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿ, ಈಗ ಪ್ರಸ್ತುತ ಪ್ರೌಢಶಾಲೆಯಲ್ಲಿ ದೈಹಿಕ ಶಿಕ್ಷಣ ಶಿಕ್ಷಕರಾಗಿ ಹಾಗೂ ಪ್ರೌಢಶಾಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿರುವ ಎಸ್. ಕಾಳನಾಯ್ಕ್ ಹಾಗೂ ಹಿರಿಯ ದೈಹಿಕ ಶಿಕ್ಷಣ ಶಿಕ್ಷಕರಾದ ಗಿರೀಶ್ ಇವರನ್ನು   ಸನ್ಮಾನಿಸಿ, ಗೌರವಿಸಲಾಯಿತು.