ಮಕ್ಕಳಲ್ಲಿ ಒಳ್ಳೆಯ ಸಂಸ್ಕೃತಿ ಬೆಳೆಸಿ

ರಾಯಚೂರು,ಮಾ.೦೬- ಮಕ್ಕಳಲ್ಲಿ ಒಳ್ಳೆಯ ಸಂಸ್ಕೃತಿಯನ್ನು ಬೆಳೆಸಬೇಕು ಆಗ ಮಾತ್ರ ಮುಂದಿನ ಸಮಾಜದಲ್ಲಿ ಒಳ್ಳೆಯ ಸಂಸ್ಕೃಎತಿ ಉಳಿಯುತ್ತದೆ. ಆದ್ದರಿಂದ ಮಕ್ಕಳಲ್ಲಿ ಉತ್ತಮ ಸಂಸ್ಕೃತಿಯನ್ನು ಬೆಳಸಬೇಕು ಎಂದು ಸೋಮವಾರ ಪೇಟೆ ಮಠದ ಅಭಿನವ ರಾಚೋಟಿವೀರ ಶಿವಾಚಾರ್ಯ ಸ್ವಾಮೀಜಿ ಅವರು ಹೇಳಿದರು.
ಅವರು ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ನಗರಸಭೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಹಮ್ಮಿಕೊಂಡಿದ್ದ ಶ್ರೀ ಜಗದ್ಗುರ ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ ಆಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ರೇಣುಕಾಚಾರ್ಯರು ಸಮಾಜಕ್ಕೆ ಧರ್ಮದ ಹಿನ್ನೆಲೆಯನ್ನು ನೀಡಿ, ಧರ್ಮದ ಕುರಿತು ಮನುಕುಲಕ್ಕೆ ಭೋಧನೆ ಮಾಡಿದವರಾಗಿದ್ದಾರೆ. ಭೋಗ ಮತ್ತು ಮೋಕ್ಷವನ್ನು ನೀಡಿದ್ದಾರೆ. ಶ್ರದ್ಧೆಯಿಂದ ತಮ್ಮ ಜೀವನದಲ್ಲಿ ಯಶಸ್ಸನ್ನು ಕಾಣಬೇಕು ಎಂದರು.
ರೇಣುಕಾಚಾರ್ಯರು ಹಾಕಿಕೊಟ್ಟ ಮಾರ್ಗದಲ್ಲಿ ನಾವೆಲ್ಲರೂ ನಡೆದುಕೊಂಡು ಹೋಗಬೇಕು. ಸ್ವಾರ್ಥವನ್ನು ಬಿಟ್ಟು ಬದುಕನ್ನು ನಡೆಸಬೇಕು. ರೇಣುಕಾಚಾರ್ಯ ಆದರ್ಶಗಳು ಪ್ರತಿಯೊಬ್ಬರಲ್ಲಿಯೂ ಅತ್ಯವಶಕವಾಗಿದೆ ಎಂದು ತಿಳಿಸಿದರು.
ಅಪರ ಜಿಲ್ಲಾಧಿಕಾರಿ ರವೀಂದ್ರ ಕರಲಿಂಗಣ್ಣವರ ಮಾತನಾಡಿ, ಮಕ್ಕಳಲ್ಲಿ ಶಿಕ್ಷಣ ಮತ್ತು ಸಂಸ್ಕೃತಿ ಅತ್ಯಂತ ಮುಖ್ಯವಾದದ್ದು, ಮಕ್ಕಳಲ್ಲಿ ಉತ್ತಮ ಶಿಕ್ಷಣ ಮತ್ತು ಸಂಸ್ಕೃಏತಿಯನ್ನು ನೀಡಿದಾಗ ಮಾತ್ರ ಸಮಾಜ ಅಭಿವೃದ್ಧಿ ಹೊಂದಲು ಸಾಧ್ಯ ಆದ್ದರಿಂದ ಮಕ್ಕಳು ಶಿಕ್ಷಣದಿಂದ ವಂಚಿತವಾಗದಂತೆ ನೋಡಿಕೊಳ್ಳಿ ಎಂದು ತಿಳಿಸಿದರು.
ಇದೇ ವೇಳೆ ವಿಶ್ರಾಂತ ಪ್ರಾಚಾರ್ಯ ಪರಮೇಶ್ವರ ಸಾಲಿಮಠ ಉಪನ್ಯಾಸ ನೀಡಿ, ಧರ್ಮಕ್ಕೆ ಅದರದ್ದೆ ಆದ ಸಿದ್ದಾಂತಗಳಿದ್ದು, ಧರ್ಮದ ಆಧಾರದ ಮೇಲೆ ಸಮಾಜವನ್ನು ಎತ್ತಿ ಹಿಡಿದವರು ರೇಣುಕಾಚಾರ್ಯರು, ಸಮಾಜದಲ್ಲಿದ್ದ ಅಸಮತೋಲನೆಯನ್ನು ಹೋಗಲಾಡಿಸಿದರು.
ಮಹಿಳೆಯರಿಗೆ ಸಮಾನತೆಯನ್ನು ಮತ್ತು ವಿಶೇಷವಾದ ಸ್ಥಾನಮಾನವನ್ನು ನೀಡಿ, ಸಮಾಜದಲ್ಲಿ ಮಹಿಳೆಯರನ್ನು ಸಮಾನವಾಗಿ ಕಂಡರು. ಜೀವನದಲ್ಲಿ ಧರ್ಮ ಎಂಬುವುದು ಭದ್ರಬುನಾದಿಯಾಗಿದೆ. ಆದ್ದರಿಂದ ರೇಣುಕಾಚಾರ್ಯರ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ರೇಣುಕಾಚಾರ್ಯರ ಭಾವಚಿತ್ರ ಮೆರವಣಿಗೆ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ನಗರಸಭೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಹಮ್ಮಿಕೊಂಡಿದ್ದ ಜಗದ್ಗುರು ರೇಣುಕಾಚಾರ್ಯ ಜಯಂತಿಯಂಗವಾಗಿ ನಗರದ ಲಿಂಗಸುಗೂರು ರಸ್ತೆಯ ಬೈಪಾಸ್ ವೃತ್ತದಿಂದ ವೀರಶೈವ ಕಲ್ಯಾಣ ಮಂಟಪದವರೆಗೆ ಬೈಕ್ ರ್‍ಯಾಲಿ ಮೂಲಕ ರೇಣುಕಾಚಾರ್ಯರ ಭಾವಚಿತ್ರ ಮೆರವಣಿಗೆ ಮಾಡಲಾಯಿತು. ಈ ಸಂದರ್ಭದಲ್ಲಿ ಕಿಲ್ಲೆ ಬೃಹನ್ಮಠದ ಶಾಂತಮಲ್ಲ ಶಿವಾಚಾರ್ಯ ಸ್ವಾಮೀಜಿ, ಸೋಮವಾರಪೇಟೆ ಮಠದ ಅಭಿನವ ರಾಚೋಟಿ ವೀರ ಶಿವಾಚಾರ್ಯ ಸ್ವಾಮೀಜಿ, ಮಂಗಳವಾರಪೇಟೆ ಮಠದ ವೀರ ಸಂಗಮೇಶ್ವರ ಸ್ವಾಮೀಜಿ, ನಗರ ಶಾಸಕ ಡಾ.ಶಿವರಾಜ ಪಾಟೀಲ್, ಗ್ರಾಮೀಣ ಶಾಸಕ ಬಸನಗೌಡ ದದ್ದಲ್, ನಗರಸಭೆ ಅಧ್ಯಕ್ಷೆ ಲಲಿತಾ ಕಡಗೋಲ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಮಂಗಳಾ ನಾಯಕ ಸೇರಿದಂತೆ ಸಮಾಜದ ಮುಖಂಡರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಮಂಗಳಾ ನಾಯಕ, ಸಮಾಜದ ಮುಖಂಡರಾದ, ಚಂದ್ರಶೇಖರ ಪಾಟೀಲ್ ಮಿರ್ಜಾಪೂರ, ಎಸ್.ಎಮ್.ಸಿದ್ದಾರೆಡ್ಡಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.