ಮಕ್ಕಳಲ್ಲಿ ಉತ್ತಮ ಆಚಾರ ವಿಚಾರ ಬಿತ್ತಿ : ಹಿರೇಮಠ


ಲಕ್ಷ್ಮೇಶ್ವರ,ಆ.29: ಶ್ರೀ ಸಿದ್ದೇಶ್ವರ ಸತ್ಸಂಗ ಬಳಗ, ಜಿಲ್ಲಾ ಮತ್ತು ತಾಲೂಕು ಕದಳಿ ಮಹಿಳಾ ವೇದಿಕೆ, ಶರಣ ಸಾಹಿತ್ಯ ಪರಿಷತ್ತು, ರಾಜರಾಜೇಶ್ವರಿ ಮಹಿಳಾ ಸಾಹಿತ್ಯ ಮತ್ತು ಸಂಸ್ಕøತಿ ವೇದಿಕೆ, ಅಕ್ಕನ ಬಳಗ, ಪ್ರೇಮಕ್ಕ ಅಭಿಮಾನಿ ಬಳಗದ ಸಂಯುಕ್ತಾಶ್ರಯದಲ್ಲಿ ನಡೆದ 17 ವರ್ಷದ “ಶ್ರಾವಣ ಸಂಜೆ ” ಕಾರ್ಯಕ್ರಮದ ಸಮಾರೋಪ ಅಕ್ಕಮಹಾದೇವಿ ದೇವಸ್ಥಾನದಲ್ಲಿ ನೆರವೇರಿತು.
ಸಮಾರಂಭದಲ್ಲಿ ಸಾಹಿತಿ, ಶಿಕ್ಷಕಿ ಮೈತ್ರಾದೇವಿ ಹಿರೇಮಠ ಅವರು “ಸಜ್ಜನರ ಸಂಘ ಹೆಜ್ಜೇನು ಸವಿದಂತೆ” ವಿಷಯ ಕುರಿತು ಉಪನ್ಯಾಸ ನೀಡಿ, ಮನೆಯೇ ಮೊದಲ ಪಾಠಶಾಲೆ ತಾಯಿಯೇ ಮೊದಲ ಗುರು ಎಂಬಂತೆ ಮಕ್ಕಳಿಗೆ ಚಿಕ್ಕಂದಿನಲ್ಲಿಯೇ ಧರ್ಮ ಮಾರ್ಗ, ಸಂಸ್ಕøತಿ ಮತ್ತು ಉತ್ತಮ ಆಚಾರ-ವಿಚಾರಗಳನ್ನು ಬಿತ್ತಬೇಕು. ಮಾನವ ಜನ್ಮ ಸಾರ್ಥಕತೆಗೆ ದಯೆ, ದಾನ, ಧರ್ಮಮಾರ್ಗದ ಜೊತೆಗೆ ತಂದೆ-ತಾಯಿಯರ, ಸಮಾಜದ ಹಾಗೂ ಜನ್ಮಭೂಮಿಯ ಋಣಬಾರ ತೀರಿಸಲು ಸಮಾಜೋಪಯೋಗಿ ಕಾರ್ಯ ಮಾಡಬೇಕು. ತಾಂತ್ರಿಕತೆಯ ಪ್ರಭಾವದ ನಡುವೆಯೂ ನಮ್ಮ ಸಂಪ್ರದಾಯ, ಸಂಸ್ಕøತಿ, ಆಚಾರ-ವಿಚಾರಗಳೊಂದಿಗೆ ಹಿರಿಯರು ನಡೆದು ಬಂದ ದಾರಿಯಲ್ಲಿ ಸಾಗಬೇಕು. ಬದುಕು ಸುಮಧುರ ಗಾನಸುಧೆಯನ್ನು ನೀಡುವ ದಿವ್ಯ ವೀಣೆಯಾಗಿದ್ದು ಅದರಿಂದ ಸುಮಧುರ ನಾದ ಹೊಮ್ಮಲು ಸಂತರ, ಶರಣರ, ಸಾತ್ವಿಕ ಜೀವಿಗಳ ಸಂತ್ಸಂಗ ಬೇಕು. ಇಂತಹ ಸತ್ಸಂಗ ಕಾರ್ಯಕ್ರಮಗಳು ಜನರ ಮನಸ್ಸನ್ನು ಕಟ್ಟಿ ಸುಸಂಸ್ಕøತ ಸಮಾಜ ನಿರ್ಮಾಣಕ್ಕೆ ಸಹಾಯಕಾರಿಯಾಗಿವೆ. ಈ ನಿಟ್ಟಿನಲ್ಲಿ ಪ್ರತಿವರ್ಷ ಶ್ರಾವಣ ಮಾಸದಂದು ಧಾರ್ಮಿಕ, ಸಾಹಿತ್ತಿಕ ಕಾರ್ಯಕ್ರಮ ಮಾಡುವ ಮೂಲಕ ಸಾಮಾಜಿಕ ಬದಲಾವಣೆಗೆ ಶ್ರಮಿಸುತ್ತಿರುವ ಅಕ್ಕನ ಬಳಗದ ಕಾರ್ಯ ಶ್ಲಾಘನೀಯ ಎಂದು ಹೇಳಿದರು.
ಸಾನಿಧ್ಯವಹಿಸಿದ್ದ ಮುಕ್ತಿಮಂದಿರ ಧರ್ಮಕ್ಷೇತ್ರದ ಪಟ್ಟಾಧ್ಯಕ್ಷರಾದ ಶ್ರೀ ವಿಮಲರೇಣುಕ ವೀರಮುಕ್ತಿಮುನಿ ಶಿವಾಚಾರ್ಯರು ಆಶೀರ್ವಚನ ನೀಡಿ, ಶ್ರಾವಣ ಮಾಸದ ಪುಣ್ಯಕಾಲದಲ್ಲಿ ಪುರಾಣ, ಪುಣ್ಯಕಥೆ, ಪ್ರವಚನ, ಧರ್ಮ ಸಂದೇಶ, ಶರಣ ಆಚಾರ- ವಿಚಾರಗಳನ್ನು ತಿಳಿಯುವುದರಿಂದ ಮನಸ್ಸಿನ ಬೇಗುದಿಗಳು ದೂರವಾಗಿ ಸಂತೃಪ್ತಿ ದೊರಕುತ್ತದೆ ಎಂದರು.
ಅಧ್ಯಕ್ಷತೆವಹಿಸಿದ್ದ ಜಿಪಂ ಮಾಜಿ ಅಧ್ಯಕ್ಷ ಎಸ್.ಪಿ. ಬಳಿಗಾರ ಅವರು ಮಾತನಾಡಿ, ಶ್ರಾವಣಮಾಸದ ಪುಣ್ಯಕಾಲದಲ್ಲಿ ಅಕ್ಕನ ಬಳಗದವರು ನಡೆಸುವ ಧಾರ್ಮಿಕ, ಸಾಹಿತ್ಯಿಕ ಮತ್ತು ಸಾಮಾಜಿಕ ಕಳಕಳಿಯ ಚಿಂತನಗೋಷ್ಠಿ, ಉಪನ್ಯಾಸ ಕಾರ್ಯಕ್ರಮಗಳು ಸಾಮಾಜಿಕ ಬದಲಾವಣೆಗೆ ಕಾರಣವಾಗಿವೆ. ಸಮಾಜೋಪಯೋಗಿ ಕಾರ್ಯಕ್ರಮಗಳು ಇತರರ ಬದುಕಿಗೆ ಪ್ರೇರಣೆ, ಮಾರ್ಗದರ್ಶನವಾಗಿವೆ ಎಂದರು.
ದೇವಣ್ಣ ಬಳಿಗಾರ, ಡಾ. ಎಸ್.ಜಿ. ಹೂವಿನ, ಕೆ.ಎಸ್. ಕೊಡ್ಲಿವಾಡ, ನಿರ್ಮಲಾ ಅರಳಿ, ಲಲಿತಾ ಕೆರಿಮನಿ, ಪ್ರತಿಮಾ ಮಹಾಜನಶೆಟ್ಟರ, ಶಕುಂತಲಾ ತಟ್ಟಿ, ರೇಖಾ ವಡಕಣ್ಣವರ, ಅನ್ನಪೂರ್ಣ ಓದುನವರ, ಲತಾ ತಟ್ಟಿ, ಈಶ್ವರ ಮೆಡ್ಲೇರಿ, ಎಂ.ಎಸ್.ಚಾಕಲಬ್ಬಿ, ಎಂ.ಕೆ.ಕಳ್ಳಿಮಠ, ಶಿವಯೋಗಿ ಗಾಂಜಿ, ಗಂಗಾಧರ ಅರಳಿ, ರತ್ನಾ ಕರ್ಕಿ, ವೀಣಾ ಹತ್ತಿ, ಎಲ್.ಎಸ್. ಅರಳಹಳ್ಳಿ,ಶೋಭಾ ಗಾಂಜಿ, ಮಧುಮತಿ ಹತ್ತಿಕಾಳ ಸೇರಿ ಹಲವರಿದ್ದರು. ಡಿ.ಎಫ್.ಪಾಟೀಲ ನಿರೂಪಿಸಿದರು.