ಮಕ್ಕಳಲ್ಲಿ ಆದರ್ಶ ಮೌಲ್ಯಗಳನ್ನು ರೂಢಿಸಿ : ದಾಸರಿ


ಗದಗ, ನ. 25 : ಮಕ್ಕಳಲ್ಲಿ ಶೈಕ್ಷಣಿಕ ಮೌಲ್ಯಗಳೊಂದಿಗೆ ಸಾಮಾಜಿಕ, ನೈತಿಕ, ಸಾಂಸ್ಕøತಿಕ ಮೌಲ್ಯಗಳನ್ನು ಬಿತ್ತುತ್ತಾ ಅವರನ್ನು ಮೌಲ್ಯಯುತ ವ್ಯಕ್ತಿಗಳನ್ನಾಗಿ ಬೆಳೆಸೋಣ ಎಂದು ಸಂಪನ್ಮೂಲ ವ್ಯಕ್ತಿ ವ್ಹಿ.ಟಿ.ದಾಸರಿ ಹೇಳಿದರು.
ಅವರು ಗದುಗಿನ ಹೊಂಬಳ ನಾಕಾದ ಅಂಬೇಡ್ಕರ್ ನಗರದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ನಂ. 17 ರಲ್ಲಿ ಮಕ್ಕಳಿಗೆ ದಾನಿಗಳು ನೀಡಿದ ಟೈ ಬೆಲ್ಟ್ ವಿತರಿಸಿ ಮಾತನಾಡಿದರು.
ಮಕ್ಕಳ ಬೆಳವಣಿಗೆಯಲ್ಲಿ ಶಿಸ್ತು ಪ್ರಮುಖ ಪಾತ್ರ ವಹಿಸುತ್ತದೆ. ಬಾಲ್ಯದಲ್ಲಿಯೇ ಮಕ್ಕಳಲ್ಲಿ ಶಿಸ್ತಿನ ಕುರಿತು ತಿಳುವಳಿಕೆ ನೀಡಿ ಅದನ್ನು ಅಳವಡಿಸಿಕೊಳ್ಳಲು ಪ್ರೇರಣೆ ನೀಡಬೇಕೆಂದರು.
ಶಾಲಾ ಮುಖ್ಯೋಪಾಧ್ಯಾಯನಿ ಎಸ್.ಆರ್.ಭೋವಿ ಪ್ರಾಸ್ತಾವಿಕವಾಗಿ ಮಾತನಾಡಿ ಸರಕಾರಿ ಶಾಲೆಗಳೊಂದಿಗೆ ಪಾಲಕರು ನಿಕಟ ಸಂಪರ್ಕ ಹೊಂದಿ ಶಾಲಾ ಪ್ರಗತಿಗೆ ಸಂಪೂರ್ಣ ಸಹಕಾರ ನೀಡಬೇಕೆಂದರು.
ಕರ್ನಾಟಕ ರಕ್ಷಣಾ ವೇದಿಕೆ (ಸ್ವಾಭಿಮಾನ ಬಣ) ಗದಗ ಜಿಲ್ಲಾ ಉಪಾಧ್ಯಕ್ಷ ರಮೇಶ ನಿಂಬನಗೌಡ್ರ ಮಾತನಾಡಿ ಕನ್ನಡ ಶಾಲೆಗಳ ಸಬಲೀಕರಣಕ್ಕೆ ನಾವೆಲ್ಲರೂ ಒತ್ತು ಕೊಡಬೇಕಾಗಿದ್ದು ಮಕ್ಕಳಲ್ಲಿ ಶಿಸ್ತು ಮೂಡಿ ಬರುವಲ್ಲಿ ಪ್ರಯತ್ನಿಸಬೇಕು, ಇದೀಗ ಟೈ ಬೆಲ್ಟ್‍ನ್ನು ನಮ್ಮ ಸಂಘಟನೆಯ ಮೂಲಕ ಮಕ್ಕಳಿಗೆ ವಿತರಿಸಿದ್ದು ಪ್ರತಿ ವರ್ಷ ನೀಡುವದಾಗಿ ಹೇಳಿದರು.
ಸಂಪನ್ಮೂಲ ವ್ಯಕ್ತಿ ಶಶಿಧರ ಚಳಗೇರಿ ಮಾತನಾಡಿ ವಿಶೇಷ ಅಗತ್ಯತೆಯುಳ್ಳ ಮಕ್ಕಳು ಸಹ ಇಂದಿನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಂತಸ ಹಂಚಿಕೊಂಡಿದ್ದು ಈ ಮಕ್ಕಳ ಬಗೆಗೆ ನಾವೆಲ್ಲರೂ ವಿಶೇಷ ಕಾಳಜಿ ವಹಿಸಬೇಕೆಂದರು.
ವೇದಿಕೆಯ ಮೇಲೆ ಪರಶುರಾಮ ಸಾಠೆ, ಗಂಗವ್ವ ಕುಷ್ಟಗಿ, ಮಧುಮತಿ ಮಾಲೀಪಾಟೀಲ, ಸುವರ್ಣಾ ಮೆಣಸಿನಕಾಯಿ ಹಾಗೂ ಅಂಗನವಾಡಿ ಕಾರ್ಯಕರ್ತೆಯರಾದ ರೇಖಾ ಚಲವಾದಿ, ನೇತ್ರಾ ಉಪಸ್ಥಿತರಿದ್ದರು. ಎನ್.ಎಸ್.ಚಿಟ್ಟಿ ಸ್ವಾಗತಿಸಿ ವಂದಿಸಿದರು.