ಮಕ್ಕಳಲ್ಲಿರುವ ಪ್ರತಿಭೆಗಳನ್ನು ಹೊರತನ್ನಿ: ಸುರೇಶ್

ಚಾಮರಾಜನಗರ, ನ.24:- ಮಕ್ಕಳಲ್ಲಿರುವ ಪರಿಪೂರ್ಣವಾದ ಉತ್ತೇಜನ ನೀಡಿ ಪ್ರತಿಭೆಗಳನ್ನು ಹೊರತರುವಂತಹ ಕೆಲಸ ಮಾಡಬೇಕು ಎಂದು ಉಪನ್ಯಾಸಕ ಹಾಗೂ ರಾಷ್ಟ್ರೀಯ ಯುವ ಪ್ರಶಸ್ತಿ ವಿಜೇತ ಸುರೇಶ್. ಎನ್. ಋಗ್ವೇದಿ ಕರೆ ನೀಡಿದರು.
ಅವರು ಡಾ.ಬಿ.ಆರ್. ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾ ಅಥ್ಲೆಟಿಕ್ಸ್ ಅಸೋಸಿಯೇಷನ್ ವತಿಯಿಂದ ನಡೆದ ಜಿಲ್ಲಾ ಅಥ್ಲೆಟಿಕ್ಸ್ ಕಿರಿಯರ ಕ್ರೀಡಾಕೂಟದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿ, ಮಕ್ಕಳಲ್ಲಿ ಸುಪ್ತವಾದ ಪ್ರತಿಭೆ ಅಡಗಿರುತ್ತದೆ. ಅದನ್ನು ಹೊರತೆಗೆದು ಅವರನ್ನು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳನ್ನು ಮಾಡಬೇಕು. ಈ ನಿಟ್ಟಿನಲ್ಲಿ ತರಬೇತಿ ನೀಡುವ ಗುರುವಿನ ಅಗತ್ಯವಿರುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.
ಇಂದಿನ ದಿನಗಳಲ್ಲಿ ಮಕ್ಕಳು ಟಿ.ವಿ., ಮೊಬೈಲ್‍ನಲ್ಲಿಯೇ ಮುಳುಗಿದ್ದು, ಅವರುಗಳನ್ನು ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳುವ ನಿಟ್ಟಿನಲ್ಲಿ ಜಿಲ್ಲಾ ಅಥ್ಲೆಟಿಕ್ಸ್ ಅಸೋಸಿಯೇಷನ್ ರವರು ಕಿರಿಯರ ಕ್ರೀಡಾಕೂಟವನ್ನು ಏರ್ಪಡಿಸುವ ಮೂಲಕ ಮಕ್ಕಳಿಗೆ ಉತ್ತೇಜನ ನೀಡುವ ಕಾರ್ಯ ಮಾಡುತ್ತಿದ್ದಾರೆ. ಇದರಿಂದ ಮಕ್ಕಳಲ್ಲಿ ಉತ್ಸಾಹ ತುಂಬಿ ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಪ್ರೋತ್ಸಾಹಿಸುತ್ತಿದ್ದಾರೆ ಎಂದು ಅವರು ಅಸೋಸಿಯೇಷನ್ ರವರ ಕಾರ್ಯವನ್ನು ಅವರು ಶ್ಲಾಘಿಸಿದರು.
ಇದಕ್ಕೂ ಮೊದಲು ಶಾಟ್‍ಫುಟ್ ಎಸೆಯುವ ಮೂಲಕ ಕ್ರೀಡಾಕೂಟ ಉದ್ಘಾಟನೆ ಮಾಡಿ ಮಾತನಾಡಿದ ಹೆಚ್ಚುವರಿ ಜಿಲ್ಲಾಧಿಕಾರಿ ಎಸ್. ಕಾತ್ಯಾಯಿನಿದೇವಿ ಅವರು, ಮಕ್ಕಳು ಕ್ರೀಡೆಗಳಲ್ಲಿ ಭಾಗವಹಿಸಬೇಕು. ಸೋಲು ಗೆಲುವಿನ ಬಗ್ಗೆ ಚಿಂತಿಸಬಾರದು. ಮಕ್ಕಳು ಆಟೋಟಗಳಲ್ಲಿ ತೊಡಗಿಸಿಕೊಳ್ಳಿ, ಕಷ್ಟಪಟ್ಟರೆ ಫಲ ಸಿಕ್ಕೇ ಸಿಗುತ್ತೆ. ಈಗಿನಿಂದಲೇ ಮಕ್ಕಳಿಗೆ ಉತ್ತಮ ತರಬೇತಿ ನೀಡಿದರೆ, ಮುಂದಿನ ರಾಷ್ಟ್ರೀಯ ಕ್ರೀಡಾಕೂಟ, ಏಷ್ಯನ್ ಹಾಗೂ ಒಲಂಪಿಕ್ ಕ್ರೀಡೆಗಳಲ್ಲಿ ಭಾಗವಹಿಸಿ ಚಿನ್ನದ ಪದಕ ಗೆಲ್ಲುವಂತೆ ಮಾಡಬಹುದು. ಇದಕ್ಕಾಗಿ ಸರ್ಕಾರದಿಂದ ದೊರೆಯುವ ಸಹಾಯವನ್ನು ಪಡೆದುಕೊಳ್ಳಿ ಎಂದು ಕರೆ ನೀಡಿದರು.
ಸಮಾರಂಭದಲ್ಲಿ ಜಿಲ್ಲಾ ಅಥ್ಲೆಟಿಕ್ಸ್ ಅಸೋಸಿಯೇಷನ್ ಅಧ್ಯಕ್ಷ ಎಲ್. ಸುರೇಶ್, ಕಾರ್ಯದರ್ಶಿ ವೈ.ಆರ್. ಮಹೇಶ್, ಬಿ.ಎಸ್.ವಿ. ಪ್ರತಿಷ್ಠಾನದ ಬಿ.ವಿ. ವೆಂಕಟನಾಗಪ್ಪಶೆಟ್ಟಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಪ್ರಭಾರ ಸಹಾಯಕ ನಿರ್ದೇಶಕ ಹೆಚ್.ಎಸ್. ಗಂಗಾಧರ್ ಹಾಜರಿದ್ದರು.