
ಗೌರಿಬಿದನೂರು,ಸೆ.೪-ನಗರದ ಹೊರವಲಯದಲ್ಲಿರುವ ಲೀಡರ್ ಇಂಟರ್ ನ್ಯಾಷನಲ್ ಶಾಲೆಯಲ್ಲಿ ಶನಿವಾರ ’ಗಣಿತ ಮೇಳ’ ವನ್ನು ಆಯೋಜಿಸಿದ್ದರು.
ಈ ಸಂದರ್ಭದಲ್ಲಿ ಒಂದನೇ ತರಗತಿಯಿಂದ ೧೦ ನೇ ತರಗತಿಯವರೆಗೆ ತರಗತಿವಾರು ವಿದ್ಯಾರ್ಥಿಗಳು ಪಠ್ಯಕ್ಕೆ ಪೂರಕ ಮಾಹಿಯನ್ನಾಧರಿಸಿದ ವಿವಿಧ ಗಣಿತದ ಮಾದರಿ ಮತ್ತು ಚಿತ್ರಗಳನ್ನು ತಯಾರಿಸಿ ಮೇಳದಲ್ಲಿ ಪ್ರದರ್ಶನ ಮಾಡಿ, ಅವುಗಳ ಬಗ್ಗೆ ವಿವರಣೆ ನೀಡಿದರು.
ಈ ವೇಳೆ ಉಪನ್ಯಾಸಕರಾದ ಎ.ಎಸ್.ಜಗನ್ನಾಥ್ ಮಾತನಾಡಿ, ಮಕ್ಕಳಲ್ಲಿನ ಆಸಕ್ತಿ ಮತ್ತು ಅವದಾನಕ್ಕೆ ತಕ್ಕಂತೆ ಶಿಕ್ಷಕರು ಕಲಿಸುವ ಪ್ರಯತ್ನ ಮಾಡಬೇಕಾಗಿದೆ. ವರ್ಷದಲ್ಲಿ ಒಮ್ಮೆ ಮಕ್ಕಳು ಪಠ್ಯಕ್ಕೆ ಅನುಗುಣವಾಗಿ ಸಿದ್ಧಪಡಿಸಿರುವ ಮಾದರಿಗಳನ್ನು ಪೋಷಕರು ಬಂದು ವೀಕ್ಷಿಸಿ ಪ್ರೋತ್ಸಾಹಿಸುವ ಪ್ರಯತ್ನ ಮಾಡಬೇಕಾಗಿದೆ. ಮಕ್ಕಳಲ್ಲಿನ ಕ್ರಿಯಾತ್ಮಕ ಶಕ್ತಿಗೆ ಪ್ರೇರಣೆ ನೀಡುವ ಜವಾಬ್ದಾರಿ ಪ್ರತೀ ಪೋಷಕರದ್ದಾಗಿರುತ್ತದೆ. ಇದರಿಂದ ಮಕ್ಕಳಲ್ಲಿ ಕಲಿಕಾಸಕ್ತಿ ಹೆಚ್ಚಾಗಿ ಸರ್ವಾಂಗೀಣ ಬೆಳವಣಿಗೆಗೆ ಸಹಕಾರಿಯಾಗಲಿದೆ ಎಂದು ಹೇಳಿದರು.
ಶಾಲಾ ಆಡಳಿತ ಮಂಡಳಿಯ ಮುಖ್ಯಸ್ಥರಾದ ಬಿ.ಎಲ್.ಶಿವರಾಮರೆಡ್ಡಿ ಮಾತನಾಡಿ, ವಿದ್ಯಾರ್ಥಿಗಳ ಶೈಕ್ಷಣಿಕ ಬದುಕಿಗೆ ಭದ್ರ ಬುನಾದಿಯನ್ನು ಹಾಕುವ ಉದ್ದೇಶದಿಂದ ಶಾಲೆಯಲ್ಲಿ ಪ್ರತೀ ವರ್ಷವೂ ವಿಜ್ಞಾನ, ಗಣಿತ ಮತ್ತು ಸಾಂಸ್ಕೃತಿಕ ಮೇಳವನ್ನು ಆಯೋಜಿಸಲಾಗುವುದು. ಇದರಿಂದಾಗಿ ಪ್ರತೀ ಹಂತದಲ್ಲೂ ಮಕ್ಕಳ ಪೂರ್ವ ಪ್ರಾಥಮಿಕ ಮತ್ತು ಪ್ರಾಥಮಿಕ ಹಂತದಲ್ಲಿ ಕಲಿತ ಶಿಕ್ಷಣವು ಪ್ರತೀ ಮಗುವಿನ ಭವಿಷ್ಯಕ್ಕೆ ಆಸರೆಯಾಗಲಿದೆ. ಪೋಷಕರು ಕಲಿಕಾ ಹಂತದಲ್ಲಿ ಮಕ್ಕಳಿಗೆ ಮಾನಸಿಕ ಮತ್ತು ದೈಹಿಕ ಒತ್ತಡಗಳಿಂದ ದೂರ ಮಾಡಿ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಬೇಕಾಗಿದೆ.
ಇದಕ್ಕೆ ಇಂತಹ ಮೇಳಗಳು ಸಹಕಾರಿಯಾಗಲಿವೆ ಎಂದು ಹೇಳಿದರು.
ಇದೇ ವೇಳೆ ಶಾಲಾ ಆಡಳಿತ ಮಂಡಳಿಯ ಕಾರ್ಯದರ್ಶಿ ಬಿ.ಎನ್.ನರಸಿಂಹಮೂರ್ತಿ, ಟ್ರಸ್ಟಿ ಚಂದನ್, ಉಪಪ್ರಾಂಶುಪಾಲೆ ರೇಷ್ಮಾತಾಜ್, ಪೂರ್ವ ಪ್ರಾಥಮಿಕ ಶಾಲೆಯ ಮುಖ್ಯಸ್ಥೆ ವಿ.ಎಂ.ಪಲ್ಲವಿ, ತೀರ್ಪುಗಾರರಾಗಿ ಶ್ರೀನಿವಾಸ್, ರವಿ ಸೇರಿದಂತೆ ಶಾಲಾ ಶಿಕ್ಷಕರು ಭಾಗವಹಿಸಿದ್ದರು.