ಬಳ್ಳಾರಿ,ಜೂ.04 : ಮಕ್ಕಳಿಗೆ ಪಠ್ಯೇತರ ಚಟುವಟಿಕೆ ಜೊತೆಗೆ ಕೌಶಲ್ಯ ತರಬೇತಿಗಳಾದ ಚಿತ್ರಕಲೆ, ಕರಕುಶಲ, ಯೋಗ ಕರಾಟೆ, ಸಮೂಹ ನೃತ್ಯ, ಸಮೂಹ ಸಂಗೀತ, ಜೇಡಿಮಣ್ಣಿನಕಲೆ, ಮುಂತಾದ ಚಟುವಟಿಕೆಗಳ ಮುಖಾಂತರ ತಮ್ಮಲ್ಲಿರುವ ಪ್ರತಿಭೆ ಹೊರಹಾಕಲು ಬೇಸಿಗೆ ಶಿಬಿರವು ಸಹಕಾರಿಯಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಿಲ್ಲಾ ನಿರೂಪಣಾಧಿಕಾರಿ ರಾಮಕೃಷ್ಣ ನಾಯಕ.ಎಮ್ ಹೇಳಿದರು.
ಬೆಂಗಳೂರಿನ ರಾಜ್ಯ ಬಾಲಭವನ ಸೊಸೈಟಿ(ರಿ), ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಕನ್ನಡ ಮತ್ತು ಸಂಸ್ಕೃತ ಇಲಾಖೆ, ಯುವಜನ ಸೇವಾ ಹಾಗೂ ಕ್ರೀಡಾ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಜಿಲ್ಲಾ ಬಾಲಭವನ ಸಮಿತಿ ಇವರ ಸಂಯುಕ್ತಾಶ್ರಯದಲ್ಲಿ ನಗರದ ಕಂಟೋನ್‍ಮೆಂಟ್‍ನ ಶಾಂತಿಧಾಮ ಆವರಣದಲ್ಲಿನ ಸರ್ಕಾರಿ ಬಾಲಕಿಯರ ಬಾಲಮಂದಿರದಲ್ಲಿ ಶುಕ್ರವಾರ ನಡೆದ 2023-24ನೇ ಸಾಲಿನ ಜಿಲ್ಲಾ ಮಟ್ಟದ “ಬೇಸಿಗೆ ಶಿಬಿರ” ಸಮಾರೋಪ ಸಮಾರಂಭ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮಕ್ಕಳ ಸೃಜನಾತ್ಮಕತೆಗೆ ಸಹಕಾರಿಯಾಗಿ ಬೇಸಿಗೆ ಶಿಬಿರಗಳು ಉತ್ತಮ ವೇದಿಕೆಯಾಗಿದ್ದು, ಇಂತಹ ಶಿಬಿರಗಳನ್ನು ಏರ್ಪಡಿಸಿ ಮಕ್ಕಳಿಗೆ ವಿವಿಧ ತರಬೇತಿಯನ್ನು ನೀಡುವುದರಿಂದ ಮಕ್ಕಳ ಭವಿಷ್ಯವು ರೂಪುಗೊಳ್ಳಲು ಸಹಾಯಕಾರಿಯಾಗುತ್ತದೆ ಎಂದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ಜಲಾಲಪ್ಪ ಎ.ಕೆ ಅವರು ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ದೈಹಿಕ ಹಾಗೂ ದೈಹಿಕೇತರ ಚಟುವಟಿಕೆಗಳನ್ನು ಪ್ರತಿದಿನ ಅಳವಡಿಸಿಕೊಂಡು ಉತ್ತಮ ಜೀವನ ನಿರ್ವಹಣೆ ರೂಢಿಸಿಕೊಳ್ಳುವುದರಿಂದ ಮುಂದಿನ ದಿನಗಳಲ್ಲಿ ಮಕ್ಕಳಿಗೆ ಅನೇಕ ರೀತಿಯ ಹೊಸ-ಹೊಸ ಚಟುವಟಿಕೆಗಳಿಗೆ ಮಾರ್ಗದರ್ಶನವಾಗುತ್ತದೆ ಎಂದು ಸಲಹೆ ನೀಡಿದರು.
ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷರಾದ ವಿಜಯಲಕ್ಷ್ಮೀ ಮೈದೂರು ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಮಕ್ಕಳಿಗೆ ಬೇಸಿಗೆ ಶಿಬಿರದಲ್ಲಿ 15 ದಿನಗಳ ಕಾಲ ಪ್ರತಿದಿನ ಕರಾಟೆ, ಯೋಗ, ಚಿತ್ರಕಲೆ, ಕರಕುಶಲೆ, ಜೇಡಿ ಮಣ್ಣಿನ ಕಲೆ, ಸಮೂಹ ಸಂಗೀತಾ, ಸಮೂಹ ನೃತ್ಯಗಳನ್ನು ಹಾಗೂ ಇನ್ನೀತರೆ ಚಟುವಟಿಕೆಗಳನ್ನು ಮಕ್ಕಳಿಗೆ ತರಬೇತಿ ನೀಡಲಾಯಿತು.
ಮಕ್ಕಳು ಉತ್ತಮ ರೀತಿಯಲ್ಲಿ ತರಬೇತಿ ಪಡೆದು, ಉತ್ಸಾಹದಿಂದ ಸಮಾರೋಪ ಸಮಾರಂಭದಲ್ಲಿ ತರಬೇತಿ ಪಡೆದ ಚಟುವಟಿಕೆಗಳನ್ನು ಪ್ರದರ್ಶನ ಮಾಡುವುದರ ಮೂಲಕ ಮಕ್ಕಳು ಸಂತೋಷಪಟ್ಟರು ಎಂದು ತಿಳಿಸಿದರು.
ಬೇಸಿಗೆ ಶಿಬಿರದ ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಯೋಗ ಶಿಕ್ಷಕರಾದ ಜಗನ್ನಾಥ.ಕೆ, ಚಿತ್ರಕಲೆ ಮತ್ತು ಕರ-ಕುಶಲೆ ಶಿಕ್ಷಕರಾದ ನಾಗೇಶ್ ರಾವ್, ಸಮೂಹ ಸಂಗೀತ ಹಾಗೂ ನೃತ್ಯ ಶಿಕ್ಷಕರಾದ ಎರೇಗೌಡ, ಪೇಪರ್ ಕಟ್ಟಿಂಗ್ ಶಿಕ್ಷಕರಾದ ಕುಸುಮ, ಜನಪದ ಹಾಡು ಶಿಕ್ಷಕರಾದ ಹೆಚ್.ಎಂ.ಹಿರೇಮಠ ಅವರು ಉಪಸ್ಥಿತಿಯಲ್ಲಿದ್ದರು.
ಕಾರ್ಯಕ್ರಮದಲ್ಲಿ ಶಿಶು ಅಭಿವೃದ್ಧಿ ಯೋಜನಾಧಿಕಾರಿ ನಾಗರಾಜ.ಪಿ, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ಸದಸ್ಯರಾದ ಮಂಜುನಾಥ, ಸರ್ಕಾರಿ ಬಾಲಕರ ಬಾಲಮಂದಿರ ಹಾಗೂ ಸರಕಾರಿ ಬಾಲಕಿಯರ ಬಾಲಮಂದಿರದ ಅಧೀಕ್ಷಕರಾದ ಗುರುಬಸವ, ನಾಗಮ್ಮ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಗಂಗಾಧರ, ಶಾಲಾ ಪೂರ್ವ ಶಿಕ್ಷಣ ಬಲವರ್ಧನೆ ಕಾರ್ಯಕ್ರಮದ ಸಂಯೋಜಕ ಜಗನ್ನಾಥ.ಕೆ, ಜಿಲ್ಲಾ ಬಾಲ ಭವನ ಕಚೇರಿಯ ಸಹಾಯಕ ಮಲ್ಲಿಕಾರ್ಜುನ ಸೇರಿದಂತೆ ಮಕ್ಕಳ ಜಾಗೃತಿ ಸಂಸ್ಥೆಯ ಸಿಬ್ಬಂದಿಗಳು, ಸರ್ಕಾರಿ ಬಾಲಕರ/ಬಾಲಕಿಯರ ಸಿಬ್ಬಂದಿಗಳು, ವಿವಿಧ ಶಾಲಾ ಮಕ್ಕಳು, ಪಾಲಕರು ಹಾಗೂ ಇಲಾಖೆಯ ಸಿಬ್ಬಂದಿಗಳು ಹಾಜರಿದ್ದರು.