ಮಕ್ಕಳಲ್ಲಿನ ಅಪೌಷ್ಠಿಕತೆ ನಿವಾರಣೆಗೆ ಶ್ರಮಿಸಿ: ಇಒ ಕಟ್ಟಿಮನಿ

ಆಳಂದ:ಅ.19:ಅಂಗನವಾಡಿ ಮಕ್ಕಳಿಗೆ ಮತ್ತು ಗರ್ಭೀಣಿಯರಿಗೆ ಹಾಗೂ ಮಕ್ಕಳ ತಾಯಂದಿರಿಗೆ ಸರ್ಕಾರ ನೀಡುತ್ತಿರುವ ಪೌಷ್ಠಿಕ ಆಹಾರ ಸಾಮಗ್ರಿಯನ್ನು ಸಮರ್ಪವಾಗಿ ಒದಗಿಸುವ ಮೂಲಕ ಮಕ್ಕಳಲ್ಲಿನ ಹಾಗೂ ಗರ್ಭಿಣಿಯರಲ್ಲಿನ ಅಪೌಷ್ಠಿಕತೆ ನಿವಾರಣೆಗೆ ಎಲ್ಲಾ ಅಂಗನವಾಡಿ ಕಾರ್ಯಕರ್ತೆಯರು ಶ್ರಮಿಸಬೇಕು ಎಂದು ತಾಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಮಾನಪ್ಪ ಕಟ್ಟಿಮನಿ ಅವರು ಹೇಳಿದರು.
ತಾಲೂಕಿನ ಖಜೂರಿ ಗ್ರಾಮದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆ ಆಯೋಜಿಸಿದ್ದ ಪೋಷಣ ಅಭಿಯಾನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಅವರು ಮಾತನಾಡಿದರು.
ಅಂಗನವಾಡಿ ಕೇಂದ್ರಗಳಿಗೆ ಸಕಾಲಕ್ಕೆ ಆಹಾರ ಸಾಮಗ್ರಿ ಪೂರೈಕೆ ಆಗಬೇಕು. ಪೂರೈಕೆಯಾದ ಸಾಮಗ್ರಿಯನ್ನು ಸಕಾಲಕ್ಕೆ ವಿತರಣೆ ಕೈಗೊಳ್ಳಬೇಕು. ಯಾವ ಅಂಗನವಾಡಿ ಕೇಂದ್ರದ ವ್ಯಾಪ್ತಿಯಲ್ಲೂ ಸಹ ಬಡವರು ಅಪೌಷ್ಠಿಕ ಕೊರತೆಯಿಂದ ಬಳಲಬಾರದು ಎಂಬ ಸರ್ಕಾರದ ಉದ್ದೇಶವನ್ನು ಈಡೇರಿಸಬೇಕು ಎಂದು ಹೇಳಿದ ಅವರು, ಅಂಗನವಾಡಿ ಕೇಂದ್ರಗಳಿಗೆ ಅಗತ್ಯ ಸೌಲಭ್ಯಗಳ ಬೇಡಿಕೆಯನ್ನು ಗ್ರಾಪಂಗೆ ಕೋರಿದರೆ ಆದ್ಯತೆಯ ಮೇಲೆ ಈಡೇರಿಸಲಾಗುವುದು. ಸರ್ಕಾರಿ ಯೋಜನೆಗಳ ಸಂಬಂಧಿತ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ನಡುವೆ ಸಮನ್ವಯತೆ ಸಾಧಿಸಿಕೊಂಡು ಅನುಷ್ಠಾನಕ್ಕೆ ಮುಂದಾಗಬೇಕು ಎಂದು ಸಲಹೆ ನೀಡಿದರು.
ಗ್ರಾಪಂ ಅಧ್ಯಕ್ಷೆ ಸುನಿತಾ ಮಗರೆ ಅವರು ಕಾರ್ಯಕ್ರಮ ಉದ್ಘಾಟಿಸಿದರು. ಗುರುಬಸಪ್ಪ ಢಗೆ, ಮಾರುತಿ ಶಿವಬಸಗೊಳ, ಪಿಡಿಒ ಪಾರ್ವತಿ ಪೂಜಾರಿ, ಮೇಲ್ವಿಚಾರಕಿ ಕಲಾವತಿ, ಅಂಗನವಾಡಿ ಕಾರ್ಯಕರ್ತೆ ಸಿದ್ಧಮ್ಮ ಚಂಗಳೆ, ಶಾಂತಬಾಯಿ ಭದ್ರೆ, ಮಲ್ಲಮ್ಮ ಕಲಶೆಟ್ಟಿ, ಸಿದ್ದಮ್ಮ ಸುತಾರ, ನಾಗಮ್ಮ ಕಲಶೆಟ್ಟಿ, ಎನ್‍ಆರ್‍ಎಲ್‍ಎಂ ಸ್ತ್ರೀ ಶಕ್ತಿ ಸಂಘದ ಅಧಕ್ಷೆ ಲಕ್ಷ್ಮೀ ಪೂಜಾರಿ, ಕಿರಣಾ ಬಂಡೆ ಸೇರಿದಂತೆ ಗರ್ಭೀಣಿಯರು, ಮಕ್ಕಳ ತಾಯಂದಿರು ಗ್ರಾಪಂ ಸದಸ್ಯರು ಫಲಾನುಭವಿಗಳು ಇನ್ನಿತರು ಉಪಸ್ಥಿತರಿದ್ದರು.