ಮಕ್ಕಳನ್ನೇ ದೇಶದ ಅಮೂಲ್ಯ ಆಸ್ತಿಯನ್ನಾಗಿಸುವ ಕಾರ್ಯ ಜರುಗಲಿ

ಕಲಬುರಗಿ,ನ.14: ಪಾಲಕ-ಪೋಷಕ ವರ್ಗದವರು ಮಕ್ಕಳಿಗಾಗಿ ಹಗಲು-ರಾತ್ರಿಯೆನ್ನದೆ ದುಡಿದು, ಭೌತಿಕ ಸಂಪತ್ತು ಮಾಡಿದರೆ ಸಾಲದು. ಮಕ್ಕಳು ಅದನ್ನು ಮಾರಬಹುದು. ಇಂದಿನ ಮಕ್ಕಳೇ ನಾಳಿನ ನಾಗರಿಕರಾಗಿರುವದರಿಂದ, ಮಕ್ಕಳಿಗೆ ಬಾಲ್ಯದಲ್ಲಿಯೇ ಉತ್ತಮವಾದ ಜ್ಞಾನ, ಬುದ್ದಿ, ಸಂಸ್ಕಾರ ನೈತಿಕ ಮೌಲ್ಯಗಳನ್ನು ಬೆಳೆಸಬೇಕು. ಇದರಿಂದ ಅವರು ದೇಶದ ಅಮೂಲ್ಯವಾದ ಆಸ್ತಿಯಾಗಲು ಸಾಧ್ಯವಾಗುತ್ತದೆ ಎಂದು ಪ್ರಾಚಾರ್ಯ ಮಹಮ್ಮದ್ ಅಲ್ಲಾಉದ್ದೀನ್ ಸಾಗರ ಹೇಳಿದರು.
ಜೇವರ್ಗಿ ಪಟ್ಟಣದ ಬಸವೇಶ್ವರ ವೃತ್ತದ ಬಳಿಯಿರುವ ಸರ್ಕಾರಿ ಪಿಯು ಕಾಲೇಜಿನಲ್ಲಿ ಎನ್.ಎಸ್.ಎಸ್ ಘಟಕದ ಸಹಯೋಗದೊಂದಿಗೆ ಸೋಮವಾರ ಜರುಗಿದ ‘ಮಕ್ಕಳ ದಿನಾಚರಣೆ’ಯ ಕಾರ್ಯಕ್ರಮದಲ್ಲಿ ನೆಹರು ಭಾವಚಿತ್ರಕ್ಕೆ ಪುಷ್ಪ ನಮನಗಳನ್ನು ಸಲ್ಲಿಸಿ, ಪ್ರತಿಭಾವಂತ ಮಕ್ಕಳಿಗೆ ಸತ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಉಪನ್ಯಾಸಕಿಯರಾದ ಚಂದ್ರಪ್ರಭ ಕಮಲಾಪುಕರ್, ನಯಿಮಾ ನಾಹಿದ್ ಮಾತನಾಡಿ, ನೆಹರು ಅವರು ದೇಶದ ಸ್ವಾತಂತ್ರ್ಯಕ್ಕಾಗಿ ದುಡಿದು, ಸ್ವಾತಂತ್ರ್ಯ ನಂತರ ದೇಶದ ಪ್ರಥಮ ಪ್ರಧಾನಿಯಾಗಿ ಭಾರತ ಸರ್ವತೋಮುಖ ಬೆಳವಣಿಗೆಗೆ ಸಾಕಷ್ಟು ಶ್ರಮಿಸಿದ್ದಾರೆ. ಕೃಷಿ, ಕೈಗಾರಿಕೆ ಮತ್ತು ಸೇವಾ ಕ್ಷೇತ್ರದ ಬೆಳವಣಿಗೆಗೆ ಪೂರಕವಾದ ನೀತಿಗಳನ್ನು ರಚಿಸಿ ಆಧುನಿಕ ಭಾರತದ ನಿರ್ಮಾತೃರಾಗಿದ್ದಾರೆ. ಮಕ್ಕಳ ಮೇಲಿರುವ ಅಪಾರವಾದ ಪ್ರೀತಿಯಿಂದ ನೆಹರು ಜನ್ಮದಿನವನ್ನು ಮಕ್ಕಳ ದಿನಾಚರಣೆಯನ್ನಾಗಿ ಆಚರಿಸಲಾಗುತ್ತದೆ ಎಂದರು.
ಪ್ರತಿಭಾವಂತ ಮಕ್ಕಳಾದ ಕೀರ್ತನಾ, ಬಾಬಾ, ಶ್ವೇತಾ, ಶ್ರೀನಿವಾಸ ಅವರಿಗೆ ಸನ್ಮಾನಿಸಲಾಯಿತು. ಎಲ್ಲಾ ವಿದ್ಯಾರ್ಥಿಗಳಿಗೆ ಪ್ರಾಚಾರ್ಯರು ಕೇಕ್‍ನ್ನು ತಿನಿಸಿ ಶುಭಾಷಯ ಕೋರಿದರು. ಎನ್.ಎಸ್.ಎಸ್ ಅಧಿಕಾರಿ ಎಚ್.ಬಿ.ಪಾಟೀಲ, ಶಂಕ್ರೆಪ್ಪ ಹೊಸದೊಡ್ಡಿ, ಪ್ರಕಾಶ ಪಾಟೀಲ, ರೇಣುಕಾ ಚಿಕ್ಕಮೇಟಿ, ಪ್ರ.ದ.ಸ ನೇಸರಎಂ.ಬೀಳಗಿಮಠ, ನಿಯೋಜಿತ ಉಪನ್ಯಾಸಕರಾದ ಬಸಲಿಂಗಪ್ಪ ನಾಡಗೋಳ್, ಯಶವಂತ ಗಾಣಿಗೇರ್, ಜಮೀಲ್ ಅಹಮ್ಮದ್, ಅತಿಥಿ ಉಪನ್ಯಾಸಕರಾದ ರಂಜಿತಾ ಠಾಕೂರ್, ಸಮೀನಾ ಬೇಗಂ ಸೇರಿದಂತೆ ಕಾಲೇಜಿನ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.