ಮಕ್ಕಳನ್ನೆ ಆಸ್ತಿಯನ್ನಾಗಿ ಬೆಳೆಸಿ

ಬೆಂಗಳೂರು, ಜು.೩೦-ಮಕ್ಕಳಿಗೆ ಆಸ್ತಿ ಮಾಡುವ ಬದಲು ಮಕ್ಕಳನ್ನೆ ಆಸ್ತಿಯನ್ನಾಗಿ ಮಾಡಿ. ದೇಶಕ್ಕೆ ಅವರು ನೀಡುವ ಕೊಡುಗೆಯೇ ಅಮೂಲ್ಯ ಸಾಧನೆ ಎಂದು ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆ ನಿರ್ದೇಶಕ ಡಾ.ಸಿ.ರಾಮಚಂದ್ರ ಅಭಿಪ್ರಾಯಪಟ್ಟರು.

ನಗರದಲ್ಲಿಂದು ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯಲ್ಲಿ (ಕ್ಯಾನ್ಸರ್ ಸಂಶೋಧನಾ ಮತ್ತು ತರಬೇತಿ ಕೇಂದ್ರ) ಇನ್ಫೋಸಿಸ್ ಸಭಾಂಗಣದಲ್ಲಿ ಆಯೋಜಿಸಿದ್ದ ನೂತನ ವರ್ಷದ ವಿದ್ಯಾರ್ಥಿಗಳಿಗೆ ಆಗಮನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಮಕ್ಕಳನ್ನು ಅಂಗೈನಲ್ಲಿ ಇಟ್ಟು ಬೆಳೆಸಬೇಕು, ಮಕ್ಕಳಿಗೆ ಉತ್ತಮ ಮೌಲ್ಯಗಳನ್ನು ಕಲಿಸಬೇಕು.ಸಾಧನೆಗಳನ್ನು ಮಾಡುವ ಗುಣ ಬೆಳೆಸಬೇಕು.ಮಕ್ಕಳು ನಾಡಿಗೆ ಹಾಗೂ ದೇಶಕ್ಕೆ ಏನಾದರೂ ಕೊಡುಗೆ ನೀಡುವ ಮೂಲಕ ತಮ್ಮನ್ನು ಸಮರ್ಪಿಸಿಕೊಳ್ಳಬೇಕು ಎಂದು ಹೇಳಿದರು.

ನಾಲ್ವಡಿ ಕೃಷ್ಣರಾಜ ಒಡೆಯರ್ ಕನ್ನಂಬಾಡಿ ಅಣೆಕಟ್ಟು ಕಟ್ಟಲು ಹಣ ಇರಲಿಲ್ಲ. ಅವರ ಮಡದಿಯ ಆಭರಣ ಅಡ ಇಟ್ಟಿದ್ದರು. ಇವರಂತಹ ಸೇವಾ ಮನೋಭಾವ ಎಲ್ಲರೂ ಬೆಳೆಸಿಕೊಳ್ಳಬೇಕು. ಅಧಿಕಾರ ಅಂತಸ್ತು ಯಾರಿಗೂ ಶಾಶ್ವತವಲ್ಲ. ನಾವು ಮಾಡಿರುವ ಕೆಲಸ ಕೊನೆಯತನಕ ಶಾಶ್ವತ. ಒಳ್ಳೆಯ ವ್ಯಕ್ತಿತ್ವ ಬೆಳೆಸಿಕೊಂಡು ಸಮಾಜಕ್ಕೆ ಕೊಡುಗೆ ನೀಡಿ ಎಂದು ಸಲಹೆ ನೀಡಿದರು.

ಒಳ್ಳೆಯ ವೃತ್ತಿಪರತೆ ಬೆಳೆಸಿಕೊಳ್ಳಬೇಕು. ವೈದ್ಯ ವೃತ್ತಿ ಅತ್ಯುತ್ತಮವಾದುದು. ಎಲ್ಲೆ ನಾವು ಸೇವೆ ಸಲ್ಲಿಸಿದರೂ ಹೆಮ್ಮೆಯಿಂದ ಕಾರ್ಯನಿರ್ವಹಿಸಬಹುದು. ಕರೋನಾ ಸಂದರ್ಭದಲ್ಲಿ ಲಕ್ಷಾಂತೆ ಜನ ಪ್ರಾಣ ಉಳಿಸಿದವರು ವೈದ್ಯರು ಎಂದು ಹೇಳಿದರು.

ಈ ಸಂದರ್ಭದಲ್ಲಿ ಎಚ್.ಸಿ.ಜಿ ಆಸ್ಪತ್ರೆ ನಿರ್ದೇಶಕ ಗೋಪಿನಾಥ್, ವಿ.ಮ್ಯಾಟ್ ಟೆಕ್ನಾಲಜಿ ಸಲೋಷನ್ ಮುಖ್ಯಸ್ಥ ಸಂಜಯ್ ಭಟ್ ಇದ್ದರು.