ಮಕ್ಕಳನ್ನು ಸರ್ಕಾರಿ ಶಾಲೆಯಲ್ಲೇ ಓದುವುದು ಕಡ್ಡಾಯಗೊಳಿಸಿ

ಕೋಲಾರ, ಆ.೩- ಗ್ರಾ.ಪಂ ಸದಸ್ಯರಿಂದ ಮುಖ್ಯಮಂತ್ರಿವರೆಗೂ ನೌಕರರೂ ಸೇರಿದಂತೆ ಸರ್ಕಾರಿ ಸೌಲಭ್ಯ ಪಡೆಯುವ ಪ್ರತಿಯೊಬ್ಬರೂ ತಮ್ಮ ಮಕ್ಕಳನ್ನು ೧ ರಿಂದ ೧೦ನೇ ತರಗತಿವರೆಗೂ ಕಡ್ಡಾಯವಾಗಿ ಸರ್ಕಾರಿ ಶಾಲೆಯಲ್ಲೇ ಓದಿಸಬೇಕು ಎಂಬ ಕಾನೂನು ಜಾರಿಗೊಳಿಸಿ ಬಡವರಿಗಾಗಿ ಶಾಲೆ ಉಳಿಸಬೇಕು ಎಂದು ಕೋಲಾರ,ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಒತ್ತಾಯಿಸಿದರು.
ತಾಲ್ಲೂಕಿನ ಅರಾಭಿಕೊತ್ತನೂರು ಸರ್ಕಾರಿ ಪ್ರೌಢಶಾಲೆಯ ಎಲ್ಲಾ ೧೩೦ ಮಕ್ಕಳಿಗೆ ಸ್ವತಃ ಕೊಡುಗೆಯಾಗಿ ನೀಡಿರುವ ಟ್ರ್ಯಾಕ್‌ಸೂಟ್ ವಿತರಿಸಿದ ಅವರು, ಸಮಾನ ಶಿಕ್ಷಣದ ಪರಿಕಲ್ಪನೆಯೊಂದಿಗೆ ಬಡವರ ಕನಸಿನ ದೇಗುಲಗಳಾದ ಸರ್ಕಾರಿ ಶಾಲೆಗಳನ್ನು ಉಳಿಸಲು ಕಠಿಣ ಕಾನೂನು ಅಗತ್ಯವಿದೆ ಎಂದರು.
ಶಾಸಕ,ಅಧಿಕಾರಿಗಳ ಮಕ್ಕಳು ಸರ್ಕಾರಿ ಶಾಲೆಗಳಲ್ಲೇ ಓದುವಂತಾದರೆ ತಾನಾಗಿಯೇ ಈ ಶಾಲೆಗಳ ಅಭಿವೃದ್ದಿ, ಗುಣಮಟ್ಟದ ಶಿಕ್ಷಣ ನೀಡಿಕೆಗೆ ವೇಗ ಸಿಗುತ್ತದೆ, ಖಾಸಗಿ ಶಾಲೆಗಳಲ್ಲಿ ಸಿಗುವ ಎಲ್ಲಾ ಸೌಲಭ್ಯಗಳೂ ಸರ್ಕಾರಿ ಶಾಲೆಯಲ್ಲಿ ಸಿಗುವಂತೆ ಮಾಡಿ, ಬಡ ಮಕ್ಕಳಿಗೂ ಗುಣಮಟ್ಟದ ಶಿಕ್ಷಣ ಸಿಗುವಂತೆ ಮಾಡಬೇಕು ಎಂದರು.
ಸರ್ಕಾರಿ ಶಾಲೆಗಳಲ್ಲಿ ಕೆಲಸ ಸಿಗದೇ ತಿರಸ್ಕೃತಗೊಂಡವರೇ ಖಾಸಗಿ ಶಾಲೆಗಳಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿ ಉತ್ತಮ ಫಲಿತಾಂಶ ತರುತ್ತಿದ್ದಾರೆ, ಬಡವರ ಶಿಕ್ಷಣಕ್ಕಾಗಿಯಾದರೂ ಸರ್ಕಾರಿ ಶಾಲೆಗಳು ಉಳಿಯಬೇಕು, ಈ ನಿಟ್ಟಿನಲ್ಲಿ ಶಿಕ್ಷಕರಲ್ಲೂ ಬದ್ದತೆ ಮೂಡಲಿ ಎಂದರು.
ಸರ್ಕಾರಿ ಶಾಲೆಗಳಿಗೆ ನೆರವು ನೀಡಲು ತಾನು ಬದ್ದ, ಆದರೆ ಮಕ್ಕಳು ಚೆನ್ನಾಗಿ ಓದಿ ಸಾಧಕರಾಗಬೇಕು, ಮೊಬೈಲ್,ಟಿವಿಯಿಂದ ದೂರಿವಿರಿ ಮತ್ತು ಶ್ರದ್ಧೆಯಿಂದ ಸಾಧನೆ ಮಾಡಿ ಎಂದು ಕಿವಿಮಾತು ಹೇಳಿ, ಕಲಿಕೆಗೆ ಬಡತನ ಅಡ್ಡಿಯಾಗದು ನಿಮ್ಮಲ್ಲಿ ಗುರಿ ಮುಖ್ಯ ಎಂದರು.
ಡಿಸಿಸಿ ಬ್ಯಾಂಕ್ ನಿರ್ದೇಶಕ,ಟಿಎಪಿಸಿಎಂಎಸ್ ಅಧ್ಯಕ್ಷ ನಾಗನಾಳ ಸೋಮಣ್ಣ ಮಾತನಾಡಿ, ಶಿಕ್ಷಕರಲ್ಲಿ ಬದ್ದತೆ, ಶಾಲೆಯ ಅಭಿವೃದ್ದಿಯ ಸಂಕಲ್ಪವಿದ್ದರೆ ದಾನಿಗಳ ನೆರವು ಪಡೆದು ಅಭಿವೃದ್ದಿಪಡಿಸಬಹುದು ಎಂಬುದಕ್ಕೆ ಅರಾಭಿಕೊತ್ತನೂರು ಶಾಲೆ ನಿದರ್ಶನವಾಗಿದೆ, ಗೋವಿಂದಗೌಡರು ಈ ಶಾಲೆಯ ಅಭಿವೃದ್ದಿಗೆ ಅಪಾರ ಕೊಡುಗೆ ನೀಡಿದ್ದಾರೆ ಎಂದು ಅಭಿನಂದಿಸಿದರು.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ವಿ.ಗೋಪಿನಾಥ್ ಮಾತನಾಡಿ, ನರೇಗಾ ಯೋಜನೆಯನ್ನು ಸದ್ಬಳಕೆ ಮಾಡಿಕೊಂಡರೆ ಶಾಲೆಗಳನ್ನು ನಂದನವನದ ರೀತಿ ಅಭಿವೃದ್ದಿಗೊಳಿಸಬಹುದು. ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ಸಿಗುತ್ತಿದ್ದು, ಇದನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದರು.
ಪತ್ರಕರ್ತರ ಸಂಘದ ನಿಕಟಪೂರ್ವ ಅಧ್ಯಕ್ಷ ವಿ.ಮುನಿರಾಜು, ಸರ್ಕಾರಿ ಶಾಲೆಗಳಲ್ಲಿ ಬಿಸಿಯೂಟ,ಹಾಲು, ಮೊಟ್ಟೆ ಎಲ್ಲಾ ಸೌಲಭ್ಯಗಳಿವೆ, ಗೋವಿಂದಗೌಡರಂತಹ ದಾನಿಗಳ ನೆರವು ಹರಿದು ಬರುತ್ತಿದೆ, ಖಾಸಗಿ ಶಾಲೆ ಎಂದರೆ ಡಾಕ್ಟರ್,ಇಂಜಿನಿಯರ್ ಮಾತ್ರ ಆಗಬಹುದು ಆದರೆ ಸರ್ಕಾರಿ ಶಾಲೆಗಳಲ್ಲಿ ಓದಿದವರೇ ಐಎಎಸ್,ಐಪಿಎಸ್ ಸಾಧಕರು,ನಾಯಕರು ಆಗಿದ್ದಾರೆ ಎಂದು ತಿಳಿಸಿದರು.
ಪತ್ರಕರ್ತರ ಸಂಘದ ರಾಜ್ಯ ಕಾರ್ಯಕಾರಿ ಸದಸ್ಯ ಕೆ.ಎಸ್.ಗಣೇಶ್, ಪಿಂಗಳ ವೆಂಕಯ್ಯ ರಾಷ್ಟ್ರಧ್ವಜದ ವಿನ್ಯಾಸ ಮಾಡಿದರು, ಆ.೨ ಅವರ ಹುಟ್ಟುಹಬ್ಬವಾದ ಇಂದು ಈ ಕಾರ್ಯಕ್ರಮ ನಡೆಯುತ್ತಿದೆ ಎಂದ ಅವರು, ಬ್ಯಾಲಹಳ್ಳಿ ಗೋವಿಂದಗೌಡರು ಸತತ ೧೦ ವರ್ಷಗಳಿಂದ ಈ ಶಾಲೆಯ ಮಕ್ಕಳಿಗೆ ಬಟ್ಟೆ, ಪುಸ್ತಕ,ಶೂ ನೀಡಿದ್ದು, ಅವರ ಸಹಾಯ ಎಂದಿಗೂ ಮರೆಯಬಾರದು ಎಂದರು.
ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಎಸ್.ಕೆ.ಚಂದ್ರಶೇಖರ್, ಹಣದ ವ್ಯಾಮೋಹ ಇರುವ ಖಾಸಗಿ ಶಾಲೆಗಳಿಗಿಂತ ಸರ್ಕಾರಿ ಶಾಲೆಗಳಲ್ಲಿ ಉತ್ತಮ ಕಲಿಕೆ ಇದೆ, ಈ ಶಾಲೆ ಇಷ್ಟೊಂದು ಸುಂದರವಾಗಿರಲು ದಾನಿಗಳ ನೆರವು ಮರೆಯುವಂತಿಲ್ಲ, ಬ್ಯಾಲಹಳ್ಳಿ ಗೋವಿಂದಗೌಡರು ಬಡವರಿಗೆ,ವಿದ್ಯಾರ್ಥಿಗಳಿಗೆ,ರೋಗ ಪೀಡಿತರಿಗೆ ನೀಡುತ್ತಿರುವ ಸಹಾಯ ಎಲ್ಲರಿಂದಲೂ ಸಾಧ್ಯವಿಲ್ಲ ಎಂದರು.
ಗ್ರಾ.ಪಂ ಸದಸ್ಯ ಎ.ಎಸ್.ನಂಜುಂಡಗೌಡ, ನಮ್ಮೂರಿನವರಲ್ಲದಿದ್ದರೂ ಕಳೆದ ೧೦ ವರ್ಷಗಳಿಂದ ಶಾಲೆಗೆ ನೆರವು ನೀಡುತ್ತಿದ್ದಾರೆ, ನಮ್ಮೂರಿನಲ್ಲಿನ ಸಮುದಾಯ ಭವನದಲ್ಲಿ ಬಡವರ ಮದುವೆಗೆ ಅಗತ್ಯವಾದ ಪಾತ್ರೆಸಾಮಾನು ಕೊಡಿಸಿ ನೆರವಾಗಲು ಮನವಿ ಮಾಡಿದರು.
ಪ್ರಭಾರ ಮುಖ್ಯಶಿಕ್ಷಕ ಭವಾನಿ ಮಾತನಾಡಿ, ಗೋವಿಂದಗೌಡರು ಕಳೆದ ೧೦ ವರ್ಷಗಳಿಂದ ಪ್ರತಿ ವರ್ಷವೂ ಶಾಲೆಗೆ ತಲಾ ೬೦ ಸಾವಿರಕ್ಕೂ ಹೆಚ್ಚಿನ ನೆರವು ಒದಗಿಸಿದ್ದಾರೆ, ಕೋವಿಡ್ ಸಂದರ್ಭದಲ್ಲೂ ಶಾಲೆಯ ಕಂಪ್ಯೂಟರ್ ಕೊಠಡಿಗೆ ಟೈಲ್ಸ್, ಶೌಚಾಲಯಕ್ಕೆ ಮೇಲ್ಚಾವಣಿ, ಗಣಪತಿ ಮೂರ್ತಿ ಕೊಡಿಸಿದ್ದಾರೆ, ಅದೇ ರೀತಿ ಗ್ರಾ.ಪಂ ಸದಸ್ಯ ಎ.ಎಸ್.ನಂಜುಂಡಗೌಡರು ಸ್ವಂತಹಣದಿಂದ ಗಣಪತಿ ದೇಗುಲ ನಿರ್ಮಿಸಿಕೊಟ್ಟಿದ್ದಾರೆ, ಶಾಲೆಯ ಸಮಗ್ರ ಅಭಿವೃದ್ದಿಗೆ ನೆರಾಗುತ್ತಿದ್ದು, ಇವರೆಲ್ಲರ ನೆರವನ್ನು ಮರೆಯಲು ಸಾಧ್ಯವಿಲ್ಲ ಎಂದು ತಿಳಿಸಿ ಶಾಲೆ ಪರವಾಗಿ ಧನ್ಯವಾದ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಗ್ರಾ.ಪಂ ಮಾಜಿ ಸದಸ್ಯ ಎ.ಶ್ರೀಧರ್, ಸದಸ್ಯೆ ರೇಣುಕಾಂಭ, ಎಸ್‌ಡಿಎಂಸಿ ಅಧ್ಯಕ್ಷ ಎ.ಮಹೇಂದ್ರ,ಸದಸ್ಯರಾದ ರಾಮಚಂದ್ರಪ್ಪ, ರಾಘವೇಂದ್ರ, ಮಂಜುನಾಥ್,ನಾರಾಯಣಸ್ವಾಮಿ, ಮುಖಂಡರಾದ ನಾರಾಯಣಶೆಟ್ಟಿ, ಕಂಡಕ್ಟರ್ ಮುನಿಯಪ್ಪ,ವೆಂಕಟೇಶಪ್ಪ, ವಿವಿಧ ಶಾಲೆಗಳ ಮುಖ್ಯಶಿಕ್ಷಕರಾದ ಓ.ಮಲ್ಲಿಕಾರ್ಜುನ್, ಗೋಪಿನಾಥ್,ಕೆಂಪೇಗೌಡ, ಕಾಳಿದಾಸ,ಡಾ.ಶ್ರೀನಿವಾಸ್,ಆನಂದ್ ಕುಮಾರ್,ನಾರಾಯಣಸ್ವಾಮಿ, ಶಾಲೆಯ ಶಿಕ್ಷಕರಾದ ಎಂ.ಆರ್.ಗೋಪಾಲಕೃಷ್ಣ, ಕೆ.ಲೀಲಾ, ಫರೀದಾ, ವೆಂಕಟರೆಡ್ಡಿ, ಶ್ರೀನಿವಾಸಲು, ಡಿ.ಚಂದ್ರಶೇಖರ್ ಮತ್ತಿತರರು ಉಪಸ್ಥಿತರಿದ್ದರು.