ಮಕ್ಕಳನ್ನು ದೈಹಿಕವಾಗಿ, ನೈತಿಕವಾಗಿ, ಮಾನಸಿಕವಾಗಿ ಹಾಗೂ ಆರ್ಥಿಕ ಶೋಷಣೆ ಒಳಪಡಿಸಲಾಗುತ್ತಿದೆ:ನ್ಯಾ.ಮಹಮ್ಮದ್ ಅನ್ವರ್ ಹುಸೇನ್ ಮೊಗಲಾನಿ

ಕಲಬುರಗಿ,ಜೂ.12:ಬಾಲ್ಯಾವಸ್ಥೆಯ ಹಾಗೂ ಕಿಶೋರಾವಸ್ಥೆಯ ಕಾರ್ಮಿಕ ಪದ್ಥತಿಯ ಮಕ್ಕಳನ್ನು ದೈಹಿಕವಾಗಿ, ನೈತಿಕವಾಗಿ, ಮಾನಸಿಕವಾಗಿ ಹಾಗೂ ಆರ್ಥಿಕ ಶೋಷಣೆ ಒಳಪಡಿಸಲಾಗುತ್ತಿದೆ ಇದನ್ನು ತಡೆಗಟ್ಟಲು ಅಧಿಕಾರಿಗಳು ಶ್ರಮಿಸಬೇಕೆಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ಮಹಮ್ಮದ ಅನ್ವರ ಹುಸೇನ ಮೊಗಲಾನಿ ಹೇಳಿದರು.
ಸೋಮವಾರಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಕಾರ್ಮಿಕ ಇಲಾಖೆ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಜಿಲ್ಲಾ ಬಾಲಕಾರ್ಮಿಕ ಯೋಜನಾ ಸೊಸೈಟಿ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಮಕ್ಕಳ ಸಹಾಯವಾಣಿ-1098, ವಿವಿಧ ಸ್ವಯಂ ಸೇವಾ ಸಂಸ್ಥೆಗಳು ಹಾಗೂ ಗ್ರಾಮೀಣ ಶಿಕ್ಷಣ ಮತ್ತು ಆರೋಗ್ಯ ಸಂಸ್ಥೆ ಮೈಸೂರು ಇವುಗಳ ಸಂಯುಕ್ತಾಶ್ರಯದಲ್ಲಿ “ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನ” ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವುದರ ಮೂಲಕ ಉದ್ಫಾಟಿಸಿ ಮಾತನಾಡಿದರು.
2001ರಿಂದ 2011 ನೇ ವರ್ಷದಲ್ಲಿ ಬಾಲಕಾರ್ಮಿಕರು ಕಡಿಮೆಯಾದರು ಇನ್ನೂ ಬಾಲಕಾರ್ಮಿಕರು ದುಡಿಯುತ್ತಿದ್ದಾರೆ ಇನ್ನೂ ಕಡಿಮೆ ಮಾಡಲು ಅಧಿಕಾರಿಗಳು ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಬೇಕೆಂದರು.
ಬಾಲಕಾರ್ಮಿಕರನ್ನು ದೊಡ್ಡ ದೊಡ್ಡ ಕಾರ್ಖಾನೆಗಳಲ್ಲಿ ಬಿಡಿ, ಸಿಗರೇಟ್ ಅನೇಕ ಅಂಗಡಿಗಳಲ್ಲಿ ಮಕ್ಕಳನ್ನು ಬಳಸಿಕೊಂಡು ಅವರು ಕಡಿಮೆ ವೇತನದಲ್ಲಿ ದುಡಿಸಿಕೊಳ್ಳುತ್ತಾರೆ. ಅಂಥವರನ್ನು ಪತ್ತೆ ಹಚ್ಚಿ ಅವರಿಗೆ ಹಿಡಿದು ಕಾನೂನು ರೀತಿಯಲ್ಲಿ ಕ್ರಮ ಜರುಗಿಸಬೇಕೆಂದು ಅಧಿಕಾರಿಗಳಿಗೆ ತಾಖಿತು ಮಾಡಿದರು
ಬಾಲ್ಯಾವಸ್ಥೆ ಹಾಗೂ ಕಿಶೋರಾವಸ್ಥೆಯ ಕಾರ್ಮಿಕ ( ನಿಷೇಧ ಮತ್ತು ನಿಯಂತ್ರಣ ) ಕಾಯ್ದೆ 1986 ರಂತೆ ಬಾಲ್ಯಾವಸ್ಥೆ ಹಾಗೂ ಕಿಶೋರಾವಸ್ಥೆ ಕಾರ್ಮಿಕರನ್ನು ಕೆಲಸಕ್ಕೆ ನಿಯೋಜಿಸಿಕೊಂಡಲ್ಲಿ ಅಂತಹ ಮೊದಲ ಅಪರಾಧಕ್ಕೆ ಮಾಲೀಕರಿಗೆ 6 ತಿಂಗಳುಗಳಿಂದ 2 ವರ್ಷಗಳವರೆಗೆ ಜೈಲು ಶಿಕ್ಷ ಅಥವಾ ರೂ, 20,000 ರಿಂದ 50,000/-ಗಳ ದಂಡ ಅಥವಾ ಎರಡನ್ನ ವಿಧಿಸಲು ಅವಕಾಶವಿರುತ್ತದೆ ಎಂದು ಹೇಳಿದರು.
ಮುಖ್ಯ ಅತಿಥಿಗಳಾದ ಕಲಬುರಗಿ ಉತ್ತರ ವಿಭಾಗದ ಸಹಾಯಕ ಪೋಲಿಸ್ ಆಯುಕ್ತ ಎಮ್.ಎನ್. ದೀಪನ್ ಮಾತನಾಡಿ, ಇಂದಿನ ಯುಗದ ಮಕ್ಕಳ ಅನೇಕ ವಿಷಯಗಳ ಪರಿಣಿತರಾಗಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ, ಟಿ.ವಿ. ಗಳಲ್ಲಿ ಅನೇಕ ವಿಷಯಗಳನ್ನು ತಿಳಿದುಕೊಂಡಿದ್ದಾರೆ. ಇನ್ನೂ ಕೆಲವು ಮಕ್ಕಳ ಹಿಂದೆಯೇ ಉಳಿದಿದ್ದಾರೆ ಎಂದರು.
ಮನೆಯಲ್ಲಿ ಆರ್ಥಿಕ ಪರಿಸ್ಥಿತಿ, ಹಳೆ ಪದ್ಥತಿಗಳನ್ನು ತಡೆಗಟ್ಟಬೇಕು. ಪೊಲೀಸ್ ಹೆಲ್ಪ್ ಲೈನ್ 112 ಕರೆ ಮಾಡಿದ್ದಾರೆ 5-10 ನಿಮಿಷಗಳಲ್ಲಿ ಪೊಲೀಸ್ ಅಧಿಕಾರಿಗಳು ಆಗಮಿಸಿ ನಿಮ್ಮ ಸಮಸ್ಯೆಗಳು ಪರಿಹರಿಸುತ್ತಾರೆ ಎಂದು ಹೇಳಿದರು.
ಕಲಬುರಗಿ ಉಪವಿಭಾಗದ ಸಹಾಯುಕ ಆಯುಕ್ತೆ ಮಮತಾ ಕುಮಾರಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಈಗಾಗಲೇ ನಾವು ಪ್ರತಿಜ್ಞೆ ವಿಧಿ ಬೋಧಿಸಿದ್ದೇವೆ ಅದನ್ನು ಅರಿತುಕೊಂಡು ನಾವು ಜಾಗೃಕರಾಗಿ ನಮ್ಮ ಕೆಲಸ ನಿರ್ವಹಿಸಬೇಕೆಂದರು. ಮಕ್ಕಳಿಗೆ ರಸ್ತೆ ಮೇಲೆ ಭಿಕ್ಷೆ ಬೇಡುವುದನ್ನು ತಡೆಗಟ್ಟಿದ್ದೇವೆ. ಮಕ್ಕಳು ಅನುದಾನಿತ ಶಾಲೆಗಳಲ್ಲಿ ಸರಕಾರಿ ಶಾಲೆಗಳಲ್ಲಿ ಪಂಚಾಯತ್ ಗ್ರಂಥಾಲಯಗಳನ್ನು ನಿರ್ಮಿಸಿ ಒಳ್ಳೆಯ ಶಿಕ್ಷಣವನ್ನು ನೀಡುತ್ತಿದ್ದೇವೆ ಎಂದರು.
ಉಪಕಾರ್ಮಿಕ ಆಯುಕ್ತ ವೆಂಕಟೇಶ ಎ ಶಿಂಧಿಹಟ್ಟಿ ಅವರು ಸ್ವಾಗತಿಸಿ ಪ್ರಸ್ತಾವಿಕವಾಗಿ ಮಾತನಾಡಿದರು.
ಮೈಸೂರು ಆರ್.ಎಲ್.ಹೆಚ್.ಪಿ. ಯೋಜನಾ ಸಂಯೋಜಕ ಸಂಪತ್ ಕಟ್ಟಿ ಅವರು ಬಾಲ್ಯಾವಸ್ಥೆಯ ಹಾಗೂ ಕಿಶೋರಾವಸ್ಥೆಯ ಕಾರ್ಮಿಕ ಪದ್ಥತಿಯ ಮಕ್ಕಳ ಬಗ್ಗೆ ಮಾಹಿತಿ ನೀಡಿದರು.
ಇದಕ್ಕೂ ಮುನ್ನ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ಮಹಮ್ಮದ ಅನ್ವರ ಹುಸೇನ ಮೊಗಲಾನಿ ಪ್ರತಿಜ್ಞೆ ವಿಧಿ ಭೋದಿಸಿದರು. ಸ್ಟೀಕರ್‍ಗಳನ್ನು ಬಿಡುಗಡೆಗೊಳಿಸಿದರು.
ಜಾಥಾಕ್ಕೆ ಚಾಲನೆ: ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ಮಹಮ್ಮದ ಅನ್ವರ ಹುಸೇನ ಮೊಗಲಾನಿ, ಜಾಥಾಕ್ಕೆ ಚಾಲನೆ ನೀಡಿ ಜಗತ್ ವೃತ್ತದಿಂದ ಆರಂಭಗೊಂಡ ಈ ಜಾಥಾವು ಕಲಬುರಗಿ ಜಿಲ್ಲಾಧಿಕಾರಿಗಳ ಕಚೇರಿಗೆ ಬಂದು ಕೊನೆಗೊಂಡಿತ್ತು.
ವೇದಿಕೆ ಮೇಲೆ ಗುಲಬರ್ಗಾ ನ್ಯಾಯವಾದಿಗಳ ಸಂಘದ ಅಧ್ಯಕ್ಷ ಗುಪ್ತಲಿಂಗ ಪಾಟೀಲ, ಕಾರ್ಯಕಾರಿ ಸಮಿತಿ ಜಿಲ್ಲಾ ಬಾಲಕಾರ್ಮಿಕ ಯೋಜನಾ ಸಂಘದ ಕಾರ್ಯದರ್ಶಿ ಸದಸ್ಯರಾದ ಶಿವಕುಮಾರ್ ರೇಷ್ಮೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ರಾಜಶೇಖರ ಮಾಲಿ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಮಂಜುಳಾ ವಿ. ಪಾಟೀಲ, ಸಹಾಯಕ ಕಾರ್ಮಿಕ ಆಯುಕ್ತ ಡಾ. ಅವಿನಾಶ ನಾಯ್ಕ, ಜಿಲ್ಲಾ ಕಾರ್ಮಿಕ ಅಧಿಕಾರಿ ರಮೇಶ ಸುಂಬಡ್,ಹಿರಿಯ ಕಾರ್ಮಿಕ ನಿರೀಕ್ಷಕರುಗಳಾದ ರವೀಂದ್ರ ಕುಮಾರ ಬಲ್ಲೂರ್, ಕೆ.ಎಸ್.ಪ್ರಸನ್ನ, ಕವಿತಾ ಸೇಡಂ ಕಾರ್ಮಿಕ ನಿರೀಕ್ಷಕರಾದ ಶಿವರಾಜ ಪಾಟೀಲ್, ಯೋಜನಾ ನಿರ್ದೇಶಕರಾದ ಸಂತೋಷ ಕುಲಕರ್ಣಿ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ವಿವಿಧ ಸೇವಾ ಸಂಘ-ಸಂಸ್ಥೆಗಳ ಮುಖ್ಯಾಸ್ಥರು ಹಾಗೂ ಪದಾಧಿಕಾರಿಗಳು ಆಶಾ ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.