ಸೈದಾಪುರ:ಜೂ.14:ವ್ಯಕ್ತಿತ್ವ ವಿಕಸನದಲ್ಲಿ ಶಿಕ್ಷಣ ಅತ್ಯವಶ್ಯಕವಾಗಿದೆ. ಈ ಹಿನ್ನಲೆಯಲ್ಲಿ ಪಾಲಕರು ತಮ್ಮ ಮಕ್ಕಳ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿ ಅವರನ್ನು ದೇಶದ ಆಸ್ತಿಯನ್ನಾಗಿ ಮಾಡಿ ಎಂದು ಗುರುಮಠಕಲ್ ಮತಕ್ಷೇತ್ರದ ನೂತನ ಶಾಸಕ ಶರಣಗೌಡ ಕಂದಕೂರು ಅಭಿಪ್ರಾಯಪಟ್ಟರು.
ಸಮೀಪದ ಬಾಡಿಯಾಲ ಗ್ರಾಮದಲ್ಲಿ 2017-18ನೇ ಸಾಲಿನ ಕೆಕೆಆರ್‍ಡಿಬಿಯ 1 ಕೋಟಿ ಅನುದಾನದಲ್ಲಿ ಉನ್ನತಿಕರಿಸಿದ ಪ್ರೌಢ ಶಾಲೆಯ ನೂತನ ಕೊಠಡಿಗಳ ಉದ್ಘಾಟನೆ ಮತ್ತು ಮತಕ್ಷೇತ್ರದ ವಿವಿಧ ಗ್ರಾಮಗಳಲ್ಲಿ ಕೆಕೆಆರ್‍ಡಿಬಿಯ ಅಂದಾಜು 4.17 ಕೋಟಿ ಅನುದಾನದ ಬೃಹತ್ ಯೋಜನೆಯಡಿ ಮಂಜೂರಾದ ಶಾಲಾ ಕಟ್ಟಡದ ಕಾಮಗಾರಿಗಳ ಅಡಿಗಲ್ಲು ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮುಂದಿನ ಐದು ವರ್ಷದಲ್ಲಿ ಆರೋಗ್ಯ ಮತ್ತು ಶಿಕ್ಷಣಕ್ಕೆ ಹೆಚ್ಚಿನ ಅನುದಾನ ನೀಡುತ್ತೇನೆ. ಕ್ಷೇತ್ರದಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿ ಶಿಕ್ಷಕರ ಕೊರತೆಯಿದೆ ಇದರನ್ನು ಸರಿಪಡಿಸುವ ಕೆಲಸ ಶಿಕ್ಷಣ ಇಲಾಖೆ ಮಾಡಬೇಕು ಎಂದು ಅಧಿಕಾರಿಗಳಿಗೆ ಸಲಹೆ ನೀಡಿದರು.
ಈ ವೇಳೆ ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಮಂಜುನಾಥ, ಬಾಡಿಯಾಲ ಗ್ರಾ.ಪಂ ಅಧ್ಯಕ್ಷ ಮಲ್ಲಪ್ಪ ಬೊಂಬಾಯಿ, ಮಾಳಪ್ಪ ಅರಿಕೇರಿ, ಸಂಗೀತಾ ರಾಘವಾಂಕ ಪಾಟೀಲ್, ರೋಜಮ್ಮ ಜಾಕಾ, ಗ್ರಾಮದ ಶಾಲಾ ಭೂಧಾನಿ ಶ್ರೀಧರ ಘಂಟಿ, ಚಂದ್ರುಗೌಡ ಸೈದಾಪುರ, ನಿಂಗಣ್ಣಗೌಡ ದಳಪತಿ, ದೇವು ಘಂಟಿ, ಹನುಮಂತ್ರಾಯ, ವೆಂಕಟೇಶ ಕಾವಲಿ, ತಿಪ್ಪಣ್ಣ ಗಡದ್, ಶಿವಾಜಿ ಮರಾಠ, ಬಡೇಸಾಬ್, ರಾಮಣ್ಣ ಗೂಡೂರು, ಕ್ಷೇತ್ರ ಶಿಕ್ಷಣಾಧಿಕಾರಿ ಅಮೃತಬಾಯಿ ಸೇರಿದಂತೆ ಗ್ರಾಮದ ಮುಖಂಡರು, ಶಿಕ್ಷಣ ಇಲಾಖೆಯ ಅಧಿಕಾರಿಗಳು, ಪಾಲಕರು ಸೆರಿದಂತೆ ಇತರರಿದ್ದರು.
ತಿನ್ನುವುದಕ್ಕೆ ಬಿಡುವುದಿಲ್ಲ: ನಮ್ಮ ಮತಕ್ಷೇತ್ರದಲ್ಲಿ ಭ್ರಷ್ಟಚಾರ ಮುಕ್ತ ಆಡಳಿತ ನಡೆಯುವುದಕ್ಕೆ ಪ್ರತಿಯೊಬ್ಬರ ಸಹಕಾರ ಅವಶ್ಯಕ. ನಾನು ತಿನ್ನುವುದಿಲ್ಲ, ತಿನ್ನುವುದಕ್ಕೆ ಬಿಡುವುದಿಲ್ಲ, ಅದರಂತೆ ಇಲ್ಲಿನ ಅಧಿಕಾರಿಗಳು ಜನರ ಸೇವೆ ಮಾಡುವುದಕ್ಕೆ ಮನಸ್ಸು ಇದ್ದರೆ ಇರಬಹುದು ಇಲ್ಲದಿದ್ದರೆ ಇಲ್ಲಿಂದ ತೆರಳಿ ಎಂದು ತಾಕೀತು ಮಾಡಿದರು.
ಪೋಲಿಸರಿಗೆ ಖಡಕ್ ಸಂದೇಶ: ಸೈದಾಪುರ ಪೋಲಿಸ ಠಾಣೆ ವ್ಯಾಪ್ತಿಯಲ್ಲಿ ಅಕ್ರಮ ಮರಳು ದಂಧೆ, ಮಟ್ಕಾ, ಕಡೇಚೂರು-ಬಾಡಿಯಾಲ ಕೈಗಾರಿಕ ಪ್ರದೇಶದಲ್ಲಿ ಜೂಜಾಟ ಸೇರಿದಂತೆ ಕಾನೂನು ಬಾಹಿರ ಚಟುವಟಿಕೆಗಳಿಗೆ ಪೋಲಿಸರೇ ರಕ್ಷೆಣೆಯಾಗಿ ನಿಂತಿರುವುದು ಅತ್ಯಂತ ನಾಚಿಗೇಡಿನ ಸಂಗತಿಯಾಗಿದೆ. ಈ ವ್ಯವಸ್ಥೆ ಬದಲಾಗಬೇಕು, ದಯವಿಟ್ಟು ನಿವುಗಳು ಬದಲಾಗಿ, ಇಲ್ಲದಿದ್ದರೆ ನಿಮ್ಮನ್ನು ಬದಲು ಮಾಡಲು ಜನರು ನಮನ್ನು ಆಯ್ಕೆ ಮಾಡಿದ್ದಾರೆ ಎಂದು ಖಡಕ ಸಂದೇಶ ನೀಡಿದರು.