
ರಾಯಚೂರು,ಆ.೦೫- ಮಕ್ಕಳನ್ನು ಕೆಲಸಕ್ಕೆ ನೇಮಿಸಿಕೊಳ್ಳದಂತೆ ಮುಂಜಾಗ್ರತೆ ವಹಿಸಬೇಕು, ದುಡಿಯುವ ಮಕ್ಕಳನ್ನು ರಕ್ಷಿಸಿ ಶಿಕ್ಷಣದ ಮುಖ್ಯವಾಹಿನಿಗೆ ಕರೆ ತರಬೇಕು ಹಾಗೂ ಮಕ್ಕಳನ್ನು ಕೆಲಸಕ್ಕೆ ನೇಮಿಸಿಕೊಳ್ಳುವ ಮಾಲೀಕರ ವಿರುದ್ದ ಪ್ರಕರಣ ದಾಖಲಿಸಬೇಕು ಎಂದು ಲಿಂಗಸುಗೂರು ತಹಶೀಲ್ದಾರ ಶಂಶಾಲಂ ಅವರು ಹೇಳಿದರು.
ಅವರು ಆ.೪ರ(ಶುಕ್ರವಾರ) ಬಾಲಕಾರ್ಮಿಕ ಮತ್ತು ಕಿಶೋರ ಕಾರ್ಮಿಕ (ನಿಷೇಧ ಮತ್ತು ನಿಯಂತ್ರಣ) ತಿದ್ದುಪಡಿ ಕಾಯ್ದೆಯ ಕಲಂ ೧೭ರ ಅಡಿಯಲ್ಲಿ ನೇಮಕಗೊಂಡಿರುವ ಇಲಾಖೆಯ ಅಧಿಕಾರಿಗಳು ಹಠಾತ್ ದಾಳಿಯಲ್ಲಿ ಕಡ್ಡಾಯವಾಗಿ ಭಾಗವಯಿಸಬೇಕೆಂದು ತಾಲೂಕ ಮಟ್ಟದ ಟಾಸ್ಕಪೋರ್ಸ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ತಾಲೂಕಿನ ವಿವಿಧ ಹೋಟೆಲ್, ಗ್ಯಾರೇಜ್, ಬೇಕರಿ, ಅಂಗಡಿ, ಬಾರ್&ರೆಸ್ಟೋರೆಂಟ್, ಡಾಬಾ, ಇಟ್ಟಿಗೆ ಭಟ್ಟಿ ಮತ್ತು ಇನ್ನಿತರೆ ವಾಣಿಜ್ಯ ಉದ್ದಿಮೆಗಳಲ್ಲಿ ತಪಾಸಣೆ ಕೈಗೊಂಡಿದ್ದು ಯಾವುದೇ ದುಡಿಯುವ ಮಕ್ಕಳು ಕಂಡು ಬಂದಿರುವುದಿಲ್ಲ. ಯಾವುದೇ ಕಾರಣಕ್ಕೂ ಮಕ್ಕಳನ್ನು ಕೆಲಸಕ್ಕೆ ನೇಮಿಸಿಕೊಳ್ಳಬಾರದೆಂದು ತಿಳಿಸಿ, ಸ್ಟಿಕರ್‍ಸ್ ಮತ್ತು ಕರಪತ್ರಗಳನ್ನು ಹಂಚುವುದರ/ಅಂಟಿಸುವುದರ ಮೂಲಕ ಜಾಗೃತಿ ಮೂಡಿಸಲಾಯಿತು.
ಬಾಲಕಾರ್ಮಿಕ ಮತ್ತು ಕಿಶೋರ ಕಾರ್ಮಿಕ (ನಿಷೇಧ ಮತ್ತು ನಿಯಂತ್ರಣ) ತಿದ್ದುಪಡಿ ಕಾಯ್ದೆ ೨೦೧೬ ರಂತೆ ೧೪ ವರ್ಷದೊಳಗಿನ ಮಕ್ಕಳ ದುಡಿಮೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಹಾಗೂ ೧೫ ರಿಂದ ೧೮ ವರ್ಷದೊಳಗಿನ ಮಕ್ಕಳನ್ನು ಅಪಾಯಕಾರಿ ಕ್ಷೇತ್ರದಲ್ಲಿ ದುಡಿಸಿಕೊಳ್ಳುವುದು ಶಿಕ್ಷಾರ್ಹ ಅಪರಾಧವಾಗುತ್ತದೆ ಎಂದರು.
ಒಂದು ವೇಳೆ ದುಡಿಸಿಕೊಂಡಲ್ಲಿ ರೂ. ೫೦,೦೦೦/- ದಂಡ ಹಾಗೂ ೨ ವರ್ಷ ಜೈಲು ಶಿಕ್ಷೆ ಇರುತ್ತದೆ. ವಾಹನಗಳಲ್ಲಿ ಮಕ್ಕಳನ್ನು ಕೃಷಿ ಚಟುವಟಿಕೆಗಳಿಗಾಗಿ ಅಕ್ರಮ ಮತ್ತು ಕಾನೂನು ಬಾಹಿರವಾಗಿ ಸಾಗಾಣಿಕೆ ಮಾಡುವುದು ಶಿಕ್ಷಾರ್ಹ ಅಪರಾಧವಾಗಿರುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾ ಬಾಲಕಾರ್ಮಿಕ ಯೋಜನೆಯ ಯೋಜನಾ ನಿರ್ದೇಶಕರು ಮಂಜುನಾಥ ರೆಡ್ಡಿ, ಮಕ್ಕಳ ರಕ್ಷಣಾಧಿಕಾರಿ(ಅಸಂಸ್ಥಿಕ) ಕಿರಲಿಂಗಪ್ಪ, ಕಾರ್ಮಿಕ ಇಲಾಖೆಯ ಮೌನೇಶ, ಎಸ್.ಎಸ್. ಮಾಜಿಗೌಡರ, ವಿರೇಶ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.