ಮಕ್ಕಳನ್ನು ಒಳ್ಳೆಯ ಸಂಸ್ಕಾರವಂತರನ್ನಾಗಿ ಮಾಡಿ

ಕಲಬುರಗಿ,ನ.19-ಇಂದಿನ ಯುವಕ ಯುವತಿಯರು ಮೊಬೈಲ್, ಟಿವಿ ಕಡೆಗೆ ಹೆಚ್ಚು ಗಮನ ಕೊಡುತ್ತಿರುವುದರಿಂದ ಸಮಾಜ ಅವನತಿಯತ್ತ ಸಾಗುತ್ತಿದೆ. ಊಟ ಇಲ್ಲದಿದ್ದರೂ ಪರ್ವಾಗಿಲ್ಲ, ಕೈಯಲ್ಲಿ ದೊಡ್ಡ ಮೊಬೈಲ್ ಬೇಕು ಅನ್ನುವ ಹಾಗೆ ಆಗಿದೆ. ಇದಕ್ಕೆ ಕಡಿವಾಣ ಹಾಕಲು ಮನೆಯಿಂದಲೇ ಒಳ್ಳೆಯ ಸಂಸ್ಕಾರ ನೀಡಬೇಕು. ಅಂದಾಗ ಮಾತ್ರ ಜೀವನದಲ್ಲಿ ಒಳ್ಳೆಯವರಾಗಿ ಬದುಕಲು ಸಾಧ್ಯವೆಂದು ಅಂಬೆಜೋಗಾಯ ಹಾಗೂ ಚಿಂಚನೂರಿನ ಗಂಗಾಧರ ಶಿವಾಚಾರ್ಯ ಮಹಾಸ್ವಾಮೀಜಿ ಹೇಳಿದರು.
ಜಿಲ್ಲೆಯ ಸುಕ್ಷೇತ್ರ ಮುತ್ಯಾನ ಬಬಲಾದ ಗ್ರಾಮದಲ್ಲಿ ನಡೆದ ಲಿಂ.ಶ್ರೀಗುರು ಚನ್ನವೀರ ಶಿವಾಚಾರ್ಯರ 38ನೇ ಪುಣ್ಯ ಸ್ಮರಣೆ ಹಾಗೂ ಗುರುಪಾದಲಿಂಗ ಮಹಾ ಶಿವಯೋಗಿಗಳ 111 ನೇ ಅನುಷ್ಠಾನ ಮಹಾಮಂಗಲ ಅಂಗವಾಗಿ ನಡೆದ ಶ್ರೀಗುರು ಚೆನ್ನವೀರೇಶ್ವರ ಮಹಾಪುರಾಣ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದ ಅವರು, ಮನುಷ್ಯನು ತನ್ನ ಜೀವನದಲ್ಲಿ ಒಳ್ಳೆಯ ಪದ್ಧತಿ ಅಳವಡಿಸಿಕೊಂಡು ಹೋಗಬೇಕು ಅಂದಾಗ ಜೀವನದಲ್ಲಿ ಸಾರ್ಥಕತೆ ಕಾಣಲು ಸಾಧ್ಯ ಎಂದು ಅವರು ಹೇಳಿದರು.
ಪುರಾಣ ಪಂಡಿತರಾದ ವೇದಮೂರ್ತಿ ಮಡಿವಾಳಯ್ಯ ಸ್ವಾಮಿ ಜೆರಟಗಿ ಅವರು ಮಾತನಾಡುತ್ತ ಮಕ್ಕಳ ಮನಸ್ಸು ಬಿಳಿ ಹಾಳಿ ಹಾಗೆ. ನಾವು ಅದನ್ನು ಯಾವ ರೀತಿಯಿಂದ ಉಪಯೋಗಿಸಿಕೊಂಡು ಹೋಗಬೇಕೆನ್ನುವುದು ತಿಳಿದು ನಡೆಯಬೇಕು ಮನೆಯಿಂದಲೇ ಒಳ್ಳೆಯ ಸಂಸ್ಕಾರ ನೀಡುವಲ್ಲಿ ನಾವು ಮುಂದಾಗಬೇಕು ಅಂದಾಗ ಇಂದಿನ ಯುವಕರು ಮುಂದಿನ ಹಾದಿಗೆ ದಾರಿ ದೀಪವಾಗುತ್ತಾರೆಂದು ಹೇಳಿದರು. ಮನೆಯಿಂದಲೇ ಒಳ್ಳೆಯ ಸಂಸ್ಕಾರ ಕೊಡುವಲ್ಲಿ ತಂದೆ ತಾಯಿ ಪಾತ್ರ ಬಹಳ ಮಹತ್ವದ್ದು, ಇದನ್ನು ಜೀವನದಲ್ಲಿ ತಿಳಿದು ನಡೆದರೆ ಸಾಕು ಜೀವನ ಪಾವನ. ಜೀವನದಲ್ಲಿ ಸಂಸ್ಕಾರ ಅನ್ನೋದು ಬಹಳ ಮುಖ್ಯ, ಅದನ್ನು ಅಳವಡಿಸಿಕೊಂಡು ಹೋಗಬೇಕೆಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಹಾಸ್ಯಕಲಾವಿದ ರಾಜಶೇಖರ್ ಹೆಬ್ಬಾಳವರು ಹಾಸ್ಯ ಕಾರ್ಯಕ್ರಮದ ಜೊತೆಯಲ್ಲಿ ಕೆಲವೊಂದು ಸಂಪ್ರದಾಯ ಪದಗಳನ್ನು ಹಾಡುವ ಮೂಲಕ ಜನಮನ ರಂಜಿಸಿದರು. ವೇದಿಕೆ ಮೇಲೆ ಸಿದ್ದಪ್ಪ ಸೊರಡೆ, ವೇದಮೂರ್ತಿ ಶಾಂತಯ್ಯ ಸ್ವಾಮಿ, ಸಿದ್ದಪ್ಪ ಮಳದ, ಮಹೇಶ ಶೀಲವಂತ, ಜಗನ್ನಾಥ, ಸಿದ್ದು ಕೊಟ್ಟರಗಿ, ವೇದಮೂರ್ತಿ ಮಡಿವಾಳಯ್ಯ ಸ್ವಾಮಿ ಅವರು ಲಿಂ.ಚನ್ನವೀರೇಶ್ವರ ಮಹಾಪುರಾಣ ಕಾರ್ಯಕ್ರಮ ನಡೆಯುತ್ತಿದ್ದು, ಸಂಗೀತ ಸೇವೆ ಸಂಗು ಸೊಂತ, ತಬಲಾ ಸೇವೆ ರಾಜು ಕಟ್ಟಿ ಸಂಗಾವಿ ಒದಗಿಸಿದರು. ಶಿಕ್ಷಕ ಅಂಬಾರಾಯ ಮಡ್ಡೆ ಕುರಿಕೋಟಾ ಕಾರ್ಯಕ್ರಮವನ್ನು ನಿರೂಪಿಸಿದರು. ಅಂಬಾರಾಯ ಎಂ.ಕೋಣೆ ವಂದನಾರ್ಪಣೆ ಗೈದರು ಈ ಕಾರ್ಯಕ್ರಮದಲ್ಲಿ ಸೂಕ್ತ ಮುತ್ತಲಿನ ಭಕ್ತಾದಿಗಳು ಪಾಲ್ಗೊಂಡು ಪುರಾಣ ಪ್ರವಚನ ಆಲಿಸಿದರು.